ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂದೆಯ ಉಳಿವಿಗಾಗಿ ಯಕೃತ್‌ನ ಭಾಗ ನೀಡಲು ಮುಂದಾದ ಬಾಲಕಿಗೆ ಅನುಮತಿ ನೀಡಿದ ಹೈಕೋರ್ಟ್

Published 27 ಜೂನ್ 2024, 10:16 IST
Last Updated 27 ಜೂನ್ 2024, 10:16 IST
ಅಕ್ಷರ ಗಾತ್ರ

ಇಂದೋರ್: ಬಾಲಕಿಯೊಬ್ಬಳು ತನ್ನ ಯಕೃತ್‌ನ ಭಾಗವನ್ನು ಅಂಗಾಂಗ ಕಸಿಗಾಗಿ ಕಾದಿರುವ ತಂದೆಗೆ ನೀಡಲು ಮುಂದಾಗಿದ್ದು, ಇದಕ್ಕೆ ಇಂದೋರ್‌ನಲ್ಲಿರುವ ಮಧ್ಯಪ್ರದೇಶ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ.

ಯಕೃತ್ ಸಮಸ್ಯೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿವನಾರಾಯಣ ಬಾತಮ್‌ (42) ಅವರ 17 ವರ್ಷದ ಪುತ್ರಿ ತನ್ನ ದೇಹದ ಅಂಗದ ಭಾಗವನ್ನು ತನ್ನ ತಂದೆಗೆ ನೀಡಲು ಮುಂದಾಗಿದ್ದಾರೆ. ಈ ಕುರಿತು ಶಿವನಾರಾಯಣ ಅವರು ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದು, ತನ್ನ ಮಗಳಿಗೆ ಯಕೃತ್ ದಾನ ಮಾಡಲು ಅವಕಾಶ ನೀಡುವಂತೆ ಕೋರಿದ್ದರು.

‘ರಾಜ್ಯ ಸರ್ಕಾರ ರಚಿಸಿದ್ದ ವೈದ್ಯಕೀಯ ಮಂಡಳಿಯು ಈ ಪ್ರಕರಣವನ್ನು ಕೂಲಂಕಶವಾಗಿ ಪರಿಶೀಲಿಸಿದ್ದು, ಅಂಗಾಂಗ ಕಸಿಗೆ ಯಕೃತ್‌ನ ಭಾಗವನ್ನು ದಾನವಾಗಿ ನೀಡಲು ಬಾಲಕಿಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಶಿಫಾರಸು ಮಾಡಿದೆ’ ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಶಾಲ್ ಮಿಶ್ರಾ ಅವರಿದ್ದ ಪೀಠಕ್ಕೆ ಸರ್ಕಾರಿ ಅಭಿಯೋಜಕರು ಮಾಹಿತಿ ನೀಡಿದರು. ವರದಿ ಆಧರಿಸಿ ಅಂಗಾಂಗ ದಾನಕ್ಕೆ ಹೈಕೋರ್ಟ್ ಅನುಮತಿ ನೀಡಿತು.

‘ಎಲ್ಲಾ ರೀತಿಯ ಸುರಕ್ಷತಾ ಕ್ರಮವನ್ನು ತೆಗೆದುಕೊಂಡು ಆದಷ್ಟು ಶೀಘ್ರದಲ್ಲಿ ಈ ಯಕೃತ್ ಕಸಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಬೇಕು’ ಎಂದು ಪೀಠ ನಿರ್ದೇಶಿಸಿತು.

ಬಾತಮ್‌ ಅವರ ಪರ ವಕೀಲ ನೀಲೇಶ್ ಮನೋರೆ ಅವರು ಈ ಕುರಿತು ಪಿಟಿಐಗೆ ಮಾಹಿತಿ ನೀಡಿದ್ದು, ‘ತನ್ನ ಕಕ್ಷಿದಾರರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಯಕೃತ್‌ಗೆ ಸಂಬಂಧಿಸಿದ ಸಮಸ್ಯೆ ಅವರನ್ನು ಕಾಡುತ್ತಿದೆ. ಬಾತಮ್ ಅವರಿಗೆ ಒಟ್ಟು ಐವರು ಪುತ್ರಿಯರು. ಅವರಲ್ಲಿ ಪ್ರೀತಿ ದೊಡ್ಡವರು. ತನ್ನ ತಂದೆಗೆ ತನ್ನ ಯಕೃತ್‌ನ ಭಾಗವನ್ನು ನೀಡುವುದಾಗಿ ಮುಂದೆ ಬಂದಿದ್ದಾರೆ. ಜುಲೈ 31ಕ್ಕೆ ಪ್ರೀತಿ ಅವರಿಗೆ 18 ವರ್ಷ ಪುರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಬಾತಮ್ ಅವರ ತಂದೆಗೆ ಈಗ 80 ವರ್ಷ. ಪತ್ನಿ ಮಧುಮೇಹದಿಂದ ಬಳಲುತ್ತಿದ್ದಾರೆ. ಹೀಗಾಗಿ ಯಕೃತ್ ನೀಡಲು ಪುತ್ರಿಯೇ ಮುಂದಾದರು. ಆ ಮೂಲಕ ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ’ ಎಂದರು.

ಹೈಕೋರ್ಟ್‌ನ ತೀರ್ಪಿನ ನಂತರ ಪ್ರತಿಕ್ರಿಯಿಸಿದ ಬಾತಮ್, ‘ನನ್ನ ಪುತ್ರಿ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT