ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತನ ತಾಯಿಯನ್ನು ಬೆತ್ತಲೆಗೊಳಿಸಿದ ಆರೋಪಿಗಳು: ಕಾಂಗ್ರೆಸ್ ಆರೋಪ

ಮಧ್ಯಪ್ರದೇಶ ದಲಿತ ವ್ಯಕ್ತಿಯ ಹತ್ಯೆ ಪ್ರಕರಣ
Published 28 ಆಗಸ್ಟ್ 2023, 16:20 IST
Last Updated 28 ಆಗಸ್ಟ್ 2023, 16:20 IST
ಅಕ್ಷರ ಗಾತ್ರ

ಭೋಪಾಲ್‌ : ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ಗುಂಪೊಂದು ದಲಿತ ಯುವಕನನ್ನು ಥಳಿಸಿ ಹತ್ಯೆಗೈದಿರುವ ಪ್ರಕರಣವು ಈಗ ಮತ್ತೊಂದು ತಿರುವು ಪಡೆದಿದೆ. ಯುವಕನನ್ನು ಥಳಿಸಿದ ವೇಳೆ ಆರೋಪಿಗಳು ಆತನ ತಾಯಿಯನ್ನು ಬೆತ್ತಲೆಗೊಳಿಸಿದ್ದಾರೆ. ಆದರೆ, ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯದರ್ಶಿ ಸಿ.ಪಿ. ಮಿತ್ತಲ್‌ ಅವರ ನೇತೃತ್ವದ ಪಕ್ಷದ ನಿಯೋಗವು ಸಂತ್ರಸ್ತ ಯುವಕನ ಮನೆಗೆ ಸೋಮವಾರ ಭೇಟಿ ನೀಡಿ ಕುಟುಂಬದ ಜೊತೆ ಚರ್ಚೆ ನಡೆಸಿತು. ಈ ವೇಳೆ, ಪ್ರಕರಣದ ಕುರಿತು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲ ಎಂದು ಯುವಕನ ಸಹೋದರಿ ಆರೋಪಿಸಿದ್ದಾರೆ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ.ಕೆ. ಮಿಶ್ರಾ ಅವರು ಸುದ್ದಿಸಂಸ್ಥೆಗೆ ಹೇಳಿದ್ದಾರೆ.

‘ನನ್ನ ತಮ್ಮನನ್ನು ಥಳಿಸುವ ವೇಳೆ ಆರೋಪಿಗಳು ನನ್ನ ತಾಯಿಯನ್ನು ಬೆತ್ತಲೆಗೊಳಿಸಿದರು. ಆದರೆ, ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ’ ಎಂದು ಸಂತ್ರಸ್ತನ ಸಹೋದರಿ ಹೇಳಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.

ರಾಜ್ಯದ ನಗರಾಭಿವೃದ್ಧಿ ಸಚಿವ ಭೂಪೇಂದ್ರ ಸಿಂಗ್‌ ಅವರು ಪ್ರತಿನಿಧಿಸುವ ಖುರೈ ವಿಧಾನಸಭೆ ಕ್ಷೇತ್ರದಲ್ಲಿ ಈ ಪ್ರಕರಣ ನಡೆದಿದೆ. ಪೊಲೀಸರ ಮೇಲೆ ಭೂಪೇಂದ್ರ ಅವರು ಒತ್ತಡ ಹೇರುತ್ತಿರುವ ಕಾರಣ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ಕ್ರಮವನ್ನು ಅವರು ಕೈಗೊಳ್ಳುತ್ತಿಲ್ಲ ಎಂದು ಮಿಶ್ರಾ ಆರೋಪಿಸಿದ್ದಾರೆ.

ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಎಸ್‌ಪಿ ಸಂಜೀವ್‌ ಉಯ್ಕೆ ಅವರು, ‘ಮೃತ ಯುವಕನ ತಾಯಿ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಕುರಿತು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿಲ್ಲ’ ಎಂದು ಹೇಳಿದ್ದಾರೆ.

ಬೊರೋದಿಯಾ ನೋನಾಗಿರ್‌ ಗ್ರಾಮದ ನಿವಾಸಿ ನಿತಿನ್‌ ಆಹಿರ್‌ವಾರ್‌ನನ್ನು ಥಳಿಸಿ ಕೊಂದಿರುವ ಘಟನೆ ಗುರುವಾರ ನಡೆದಿದೆ. ಹಳೆ ವೈಷಮ್ಯದ ಕಾರಣಕ್ಕೆ ಈ ಹತ್ಯೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT