ನವದೆಹಲಿ: ಎಂಪಾಕ್ಸ್ ಸೋಂಕು ಇದ್ದ ದೇಶದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಮೊದಲು ಇದನ್ನು ಪ್ರಯಾಣ ಸಂಬಂಧಿತ ಸೋಂಕು ಎಂದು ಶಂಕಿಸಲಾಗಿತ್ತು. ಆದರೆ ಪ್ರಯೋಗಾಲಯದ ಪರೀಕ್ಷೆಯು ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ಕ್ಲಾಡ್ -2 ಎಂಪಾಕ್ಸ್ ವೈರಸ್ ಇರುವಿಕೆಯನ್ನು ದೃಢಪಡಿಸಿದೆ ಎಂದು ಅದು ಹೇಳಿದೆ.
‘ಜುಲೈ 2022ರಿಂದ ಭಾರತದಲ್ಲಿ ವರದಿಯಾದ 30 ಪ್ರಕರಣಗಳಂತೆ ಇದು ಒಂದು ಪ್ರತ್ಯೇಕ ಪ್ರಕರಣವಾಗಿದೆ. ಇದು ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಭಾಗವಾಗಿಲ್ಲ’ ಎಂದು ತಿಳಿಸಿದೆ.
ಸೋಂಕಿತ ವ್ಯಕ್ತಿಯನ್ನು ಎಂಪಾಕ್ಸ್ ಕಾಯಿಲೆ ಚಿಕಿತ್ಸೆಗೆ ಮೀಸಲಾಗಿಟ್ಟಿರುವ ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದೆ.
ಮಾರ್ಗಸೂಚಿಗಳ ಪ್ರಕಾರ ಪ್ರಕರಣವನ್ನು ನಿರ್ವಹಿಸಲಾಗುತ್ತಿದೆ. ಸಂಪರ್ಕ ಪತ್ತೆಹೆಚ್ಚುವಿಕೆ, ಮೇಲ್ವಿಚಾರಣೆ ಸೇರಿದಂತೆ ಸಾರ್ವಜನಿಕ ಆರೋಗ್ಯ ಕ್ರಮಗಳು ಸಕ್ರಿಯವಾಗಿ ಜಾರಿಯಲ್ಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಸಾರ್ವಜನಿಕವಾಗಿ ಹರಡುವ ಯಾವುದೇ ಅಪಾಯವಿಲ್ಲ ಎಂದೂ ಸಚಿವಾಲಯ ತಿಳಿಸಿದೆ.
ಆಫ್ರಿಕಾದ ಕಾಂಗೋ ಸೇರಿದಂತೆ 13 ದೇಶಗಳಲ್ಲಿ ಎಂಪಾಕ್ಸ್ ಕಾಯಿಲೆ ವೇಗವಾಗಿ ಹರಡುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.