ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಯಾಣಿಕರಿಗೆ ಕಿರಿಕಿರಿ: ಇಂಡಿಗೊ, ಎಂಐಎಎಲ್‌ಗೆ ನೋಟಿಸ್‌

ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆದ ಕಿರಿಕಿರಿ
Published : 16 ಜನವರಿ 2024, 14:33 IST
Last Updated : 16 ಜನವರಿ 2024, 14:33 IST
ಫಾಲೋ ಮಾಡಿ
Comments

ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ವಿಮಾನ ನಿಲುಗಡೆ ಪ್ರದೇಶದಲ್ಲಿ ನೆಲದ ಮೇಲೆ ಕುಳಿತು ಆಹಾರ ಸೇವಿಸಬೇಕಾದ ಸಂದರ್ಭ ಎದುರಾಗಿದ್ದು ಏಕೆ ಎಂಬುದನ್ನು ತಿಳಿಸುವಂತೆ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಂಐಎಎಲ್) ಮತ್ತು ಇಂಡಿಗೊ ವಿಮಾನಯಾನ ಕಂಪನಿಗೆ ನಾಗರಿಕ ವಿಮಾನಯಾನ ಸುರಕ್ಷತಾ ಸಂಸ್ಥೆಯು (ಬಿಸಿಎಎಸ್‌) ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ಗೋವಾದಿಂದ ದೆಹಲಿಗೆ ತೆರಳುವ ಇಂಡಿಗೊ ವಿಮಾನವೊಂದನ್ನು ಮುಂಬೈನಲ್ಲಿ ಇಳಿಸಲಾಗಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ಈ ವಿಮಾನದಿಂದ ಹೊರಬಂದ ಹಲವು ಪ್ರಯಾಣಿಕರು ನೆಲದ ಮೇಲೆ ಕುಳಿತಿದ್ದರು, ಕೆಲವರು ಅಲ್ಲಿಯೇ ಆಹಾರ ಸೇವಿಸಿದ್ದರು.

ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹಾಗೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ಇಂಡಿಗೊ ಮತ್ತು ಎಂಐಎಎಲ್‌ ಸೂಕ್ತ ರೀತಿಯಲ್ಲಿ ವರ್ತಿಸಿಲ್ಲ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಪ್ರಯಾಣಿಕರನ್ನು ಸರಿಯಾಗಿ ನಡೆಸಿಕೊಳ್ಳದೆ ಇದ್ದುದಕ್ಕಾಗಿ ನೋಟಿಸ್ ನೀಡಲಾಗುತ್ತಿದೆ ಎಂದು ಕೂಡ ಹೇಳಲಾಗಿದೆ.

ವಿಮಾನದಲ್ಲಿನ ಪ್ರಯಾಣಿಕರಿಗೆ ಬೋರ್ಡಿಂಗ್‌ ಗೇಟ್‌ಗೆ ತೆರಳಲು ವ್ಯವಸ್ಥೆ ಕಲ್ಪಿಸುವ ಬದಲು, ವಿಮಾನದಿಂದ ಇಳಿಯಲು ಮಾತ್ರ ಆಗುವಂತೆ ಮೆಟ್ಟಿಲುಗಳನ್ನು ಜೋಡಿಸಿಕೊಡಲಾಯಿತು. ಇದರಿಂದಾಗಿ, ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಶೌಚಾಲಯ ಸೌಲಭ್ಯ ಪಡೆಯಲು, ತಿಂಡಿ–ಪಾನೀಯ ಖರೀದಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಸುಸ್ತಾಗಿದ್ದ ಪ್ರಯಾಣಿಕರಿಗೆ ಇದು ಕಿರಿಕಿರಿ ಉಂಟುಮಾಡಿತು ಎಂದು ಮೂಲಗಳು ವಿವರಿಸಿವೆ.

ವಿಮಾನ ಪ್ರಯಾಣಿಕರು ನಿಲ್ದಾಣದ ಟಾರುಹಾಸಿನ ಮೇಲೆ ಕುಳಿತು ತಿಂಡಿ ತಿನ್ನುತ್ತ ಇದ್ದ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರದಲ್ಲಿ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಂಗಳವಾರ ಮಧ್ಯರಾತ್ರಿ (12.30ಕ್ಕೆ) ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಇಂಡಿಗೊ ಮತ್ತು ಎಂಐಎಎಲ್‌ಗೆ ಬಿಸಿಎಎಸ್‌ ಕಡೆಯಿಂದ ಮಂಗಳವಾರ ಮುಂಜಾನೆಯೇ ನೋಟಿಸ್‌ ರವಾನೆ ಆಗಿದೆ ಎಂದು ಮೂಲಗಳು ವಿವರಿಸಿವೆ.

ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೊ ವಿಮಾನವನ್ನು ಕೆಟ್ಟ ಹವಾಮಾನದ ಕಾರಣದಿಂದಾಗಿ ಮುಂಬೈನಲ್ಲಿ ಇಳಿಸಲಾಗಿತ್ತು. ಗೋವಾದಿಂದ ಈ ವಿಮಾನ ಹೊರಡುವುದೇ ಬಹಳ ತಡವಾಗಿದ್ದ ಪರಿಣಾಮವಾಗಿ ಪ್ರಯಾಣಿಕರಿಗೆ ಕಿರಿಕಿರಿ ಆಗಿತ್ತು. ಮುಂಬೈನಲ್ಲಿ ವಿಮಾನ ಇಳಿದು, ಅದಕ್ಕೆ ಏಣಿಯನ್ನು ಜೋಡಿಸುತ್ತಿದ್ದಂತೆಯೇ, ಅವರು ವಿಮಾನದಿಂದ ಹೊರಬಂದರು ಎಂದು ಎಂಐಎಎಲ್‌ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರು ವಿಮಾನಯಾನ ಕಂಪನಿಯ ಬಸ್‌ ಏರಿ, ಟರ್ಮಿನಲ್ ಕಟ್ಟಡದ ಕಡೆ ತೆರಳಲು ನಿರಾಕರಿಸಿದ ಕಾರಣ ಅವರನ್ನು ಸಿಐಎಸ್‌ಎಫ್‌ ಸಿಬ್ಬಂದಿಯ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದು ವಕ್ತಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT