ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈ: 63 ತಾಸು ರೈಲು ಸಂಚಾರಕ್ಕೆ ನಿರ್ಬಂಧ

ಠಾಣೆ ರೈಲು ನಿಲ್ದಾಣದ 5, 6ನೇ ಪ್ಲಾಟ್‌ಫಾರ್ಮ್‌ ವಿಸ್ತರಣೆ ಕಾಮಗಾರಿ
Published 31 ಮೇ 2024, 15:46 IST
Last Updated 31 ಮೇ 2024, 15:46 IST
ಅಕ್ಷರ ಗಾತ್ರ

ಮುಂಬೈ: ಠಾಣೆ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ಗಳ ವಿಸ್ತರಣೆಗಾಗಿ ಕೇಂದ್ರ ರೈಲ್ವೆಯು 63 ತಾಸು ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ಶುಕ್ರವಾರ ಬೆಳಿಗ್ಗೆ ಜನದಟ್ಟಣೆ ಗೋಚರಿಸಿತು. ಮುಂಬೈನ ಉಪನಗರಗಳ ನಡುವೆ ಸಂಚರಿಸುವ ಪ್ರಯಾಣಿಕರು ಪರದಾಡಿದರು. 

ಗುರುವಾರ ಮಧ್ಯರಾತ್ರಿಯಿಂದಲೇ ನಿರ್ಬಂಧ ಜಾರಿಗೊಂಡಿದೆ. ಇದು ಕೇಂದ್ರ ರೈಲ್ವೆಯ ಮುಖ್ಯ ಕಾರಿಡಾರ್‌ನಲ್ಲಿನ ಉಪನಗರಗಳ ಸೇವೆಗಳ ಮೇಲೆ ಪರಿಣಾಮ ಬೀರಿದ್ದು, ಕಚೇರಿಗಳಿಗೆ ತೆರಳುವವರು ಸೇರಿದಂತೆ ವಿವಿಧ ಕೆಲಸದ ಮೇಲೆ ಸಂಚರಿಸುವ ಲಕ್ಷಾಂತರ ಜನರು ಸಮಸ್ಯೆ ಅನುಭವಿಸಿದರು. 

ಠಾಣೆ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 5 ಮತ್ತು 6ರ ವಿಸ್ತರಣೆಗಾಗಿ ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ, ಉಳಿದ ರೈಲುಗಳ ಸಂಚಾರದಲ್ಲಿ 30 ನಿಮಿಷ ವಿಳಂಬವಾಯಿತು. ಪ್ಲಾಟ್‌ಫಾರ್ಮ್‌ಗಳಲ್ಲಿ ಜನದಟ್ಟಣೆ ಹೆಚ್ಚಿತ್ತು ಎಂದು ಪ್ರಯಾಣಿಕರು ದೂರಿದರು.

ವಿಸ್ತರಣೆ ಕಾಮಗಾರಿಗಾಗಿ ಶುಕ್ರವಾರ ಕನಿಷ್ಠ 6 ದೂರದ ರೈಲುಗಳು ಮತ್ತು 161 ಸ್ಥಳೀಯ ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆಯು ಘೋಷಿಸಿತ್ತು.

ರೈಲು ಸಂಚಾರದ ವಿಳಂಬ ಮತ್ತು ಜನದಟ್ಟಣೆಯನ್ನು ಅಂದಾಜಿಸಿದ್ದ ರೈಲ್ವೆ ಅಧಿಕಾರಿಗಳು ಅನಗತ್ಯ ಪ್ರಯಾಣವನ್ನು ಕೈಬಿಡುವಂತೆ ಉಪನಗರ ರೈಲು ಬಳಕೆದಾರರಿಗೆ ಸೂಚಿಸಿದ್ದರು. ಈ ಅವಧಿಯಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಸಾರಿಗೆ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದ್ದರು. ಮನೆಯಿಂದಲೇ ಕೆಲಸ ಮಾಡುವ ಅವಕಾಶ ಹೊಂದಿರುವಂತಹವರು ತಮ್ಮ ಮನೆಗಳಲ್ಲೇ ಕೆಲಸ ಮಾಡುವಂತೆಯೂ, ತಮ್ಮ ನೌಕರರಿಗೆ ಪರ್ಯಾಯ ವಾಹನದ ವ್ಯವಸ್ಥೆ ಮಾಡುವಂತೆಯೂ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಕೋರಿದ್ದರು.

ಶುಕ್ರವಾರದಿಂದ ಭಾನುವಾರದವರೆಗಿನ ಅವಧಿಯಲ್ಲಿ 72 ದೂರದ ಮತ್ತು 930 ಉಪನಗರ ರೈಲುಗಳ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT