ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಜಾಬ್, ಬುರ್ಕಾ, ಟೋಪಿ ನಿಷೇಧ; ಮುಂಬೈ ಕಾಲೇಜು ಸುತ್ತೋಲೆಗೆ ಸುಪ್ರೀಂಕೋರ್ಟ್ ತಡೆ

Published : 9 ಆಗಸ್ಟ್ 2024, 15:01 IST
Last Updated : 9 ಆಗಸ್ಟ್ 2024, 15:01 IST
ಫಾಲೋ ಮಾಡಿ
Comments

ನವದೆಹಲಿ: ಹಿಜಾಬ್, ಬುರ್ಕಾ, ಟೋಪಿ ಹಾಗೂ ನಖಾಬ್‌ಗೆ ನಿಷೇಧ ಹೇರಿದ್ದ ಮುಂಬೈನ ಕಾಲೇಜೊಂದರ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಭಾಗಶಃ ತಡೆ ನೀಡಿದೆ. ಜತೆಗೆ ಬಿಂದಿ ಹಾಗೂ ತಿಲಕವನ್ನೂ ನಿಷೇಧಿಸುತ್ತೀರಾ ಎಂದು ಪೀಠವು ಕಾಲೇಜನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮುಂಬೈನ ಚೆಂಬೂರ್ ಟ್ರಾಂಬೇ ಶಿಕ್ಷಣ ಸಂಸ್ಥೆಯ ಎನ್‌.ಜಿ. ಆಚಾರ್ಯ ಮತ್ತು ಡಿ.ಕೆ.ಮರಾಠೆ ಕಾಲೇಜಿನ ಆದೇಶವನ್ನು ಪ್ರಶ್ನಿಸಿ, ತಮ್ಮ ಆಯ್ಕೆಯ ವಸ್ತ್ರ ತೊಡಲು ಅವಕಾಶ ನೀಡಬೇಕು ಎಂದು ಕೋರಿದ ವಿದ್ಯಾರ್ಥಿನಿಯರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಖನ್ನಾ ಹಾಗೂ ಸಂಜಯ್ ಕುಮಾರ್‌ ಅವರಿದ್ದ ಪೀಠದ ನಡೆಸಿತು.

ಇಂಥದ್ದೊಂದು ಸುತ್ತೋಲೆ ಹೊರಡಿಸಿದ ಕಾಲೇಜಿನ ಕ್ರಮವನ್ನು ತೀವ್ರವಾಗಿ ಖಂಡಿಸಿದ ಪೀಠ, ಕಾಲೇಜು ಆವರಣವನ್ನು ರಾಜಕೀಯ ಹಾಗೂ ಧಾರ್ಮಿಕ ಕಾರ್ಯಾಚರಣೆಯ ಕ್ರೀಡಾಂಗಣವನ್ನಾಗಿಸಲು ಯಾರಿಗೂ ಅವಕಾಶ ನೀಡಬಾರದು ಎಂದಿತು.

‘ವಿದ್ಯಾರ್ಥಿಗಳಿಗೆ ಕಾಲೇಜು ನೀಡಿದ ಈ ಸೂಚನೆಯಾದರೂ ಏನು? ಧರ್ಮವನ್ನು ಸಾರುವ ಯಾವುದೇ ಉಡುಪು ತೊಡಬಾರದು ಎಂದು ಹೇಳುವುದಾದರೆ, ವಿದ್ಯಾರ್ಥಿಗಳ ಹೆಸರು ಗಮನಿಸಿದರೆ ಅವರು ಯಾವ ಧರ್ಮದವರು ಎಂದು ತಿಳಿಯುವುದಿಲ್ಲವೇ?’ ಎಂದು ಕಾಲೇಜು ಪರ ವಾದ ಮಂಡಿಸಿದ ಹಿರಿಯ ಕೌನ್ಸಲರ್ ಮಾಧವಿ ದಿವಾನ್ ಅವರನ್ನು ಖಾರವಾಗಿ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಮಾಧವಿ, ‘ಈ ಕಾಲೇಜಿನಲ್ಲಿ ಬಾಲಕ ಹಾಗೂ ಬಾಲಕಿಯರು ಜತೆಗೂಡಿ ಕಲಿಯುತ್ತಿದ್ದಾರೆ. ಅನುದಾನ ರಹಿತ ಕಾಲೇಜಾಗಿದ್ದು, ಅದರ ಸ್ವಾಯತ್ತತೆಯನ್ನೂ ಪರಿಗಣಿಸಬೇಕು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹೀಗಿಲ್ಲ. ಆದರೆ ಮೂವರು ವಿದ್ಯಾರ್ಥಿನಿಯರಿಗೆ ಮಾತ್ರ ಇದು ಸಮಸ್ಯೆಯಾಗಿದೆ’ ಎಂದು ಪೀಠದ ಗಮನಕ್ಕೆ ತಂದರು.

‘ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ಕಾಲೇಜಿನ ಸುತ್ತೋಲೆಯಿಂದ ಸಮಸ್ಯೆ ಎದುರಿಸುತ್ತಿದ್ದ ಇನ್ನುಳಿದ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಸೇರಿದ್ದಾರೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಇದು ನಿಜಕ್ಕೂ ಬೇಸರದ ಸಂಗತಿ. ತಮ್ಮಿಷ್ಟದ ವಸ್ತ್ರದ ಆಯ್ಕೆ ಬಾಲಕಿಯರ ಇಚ್ಛೆ ಅಲ್ಲವೇ’ ಎಂದು ವಿಷಾದ ವ್ಯಕ್ತಪಡಿಸಿತು. ಜತೆಗೆ ಕಾಲೇಜಿನ ಸುತ್ತೋಲೆಗೆ ತಡೆ ನೀಡಿತು.

‘ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದ ಮೇಲೆ ಕಾಲೇಜಿಗೆ ಹೀಗೊಂದು ಸುತ್ತೋಲೆ ಹೊರಡಿಸಬೇಕು ಎಂದು ಏಕೆ ಎನಿಸಿತು. ಈಗ ಏಕಾಏಕಿ ಹೊರಡಿಸಿರುವ ಸುತ್ತೋಲೆಯಲ್ಲಿ ಎಲ್ಲಾ ಧರ್ಮದವರನ್ನು ಒಳಗೊಳ್ಳದ ಸುತ್ತೋಲೆ ಹೊರಡಿಸಲು ಕಾರಣವೇನು’ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಮಾಧವಿ, ‘2008ರಲ್ಲಿ ಕಾಲೇಜು ಪ್ರಾರಂಭವಾಗಿದೆ’ ಎಂದು ಪೀಠಕ್ಕೆ ತಿಳಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ನ. 18ಕ್ಕೆ ಪೀಠ ಮುಂದೂಡಿತು. ಜತೆಗೆ ತರಗತಿಯೊಳಗೆ ಬುರ್ಕಾವನ್ನು ಅನುಮತಿಸಲಾಗದು ಎಂದು ಪೀಠ ಸ್ಪಷ್ಟಪಡಿಸಿತು.

ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಹಿಂದೂ ಗುಂಪು ಕೇಸರಿ ಶಾಲು ತೊಟ್ಟು ಬರುವ ಸಾಧ್ಯತೆ ಇದೆ ಎಂದು ಕಾಲೇಜು ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, ‘ಈ ಆದೇಶವನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ತಾಕೀತು ಮಾಡಿತು.

ವಿದ್ಯಾರ್ಥಿನಿಯರ ಪರ ಕೊಲಿನ್ ಗೋನ್ಸಾಲ್ವೆಸ್‌ ವಾದ ಮಂಡಿಸಿದರು.

ಇದಕ್ಕೂ ಪೂರ್ವದಲ್ಲಿ ಕಾಲೇಜಿನ ಸುತ್ತೋಲೆ ಪ್ರಶ್ನಿಸಿ 9 ವಿದ್ಯಾರ್ಥಿನಿಯರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೂನ್ 26ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಚಂದೂರ್ಕರ್‌ ರಾಜೇಶ್ ಎಸ್. ಪಾಟೀಲ ಅವರಿದ್ದ ಪೀಠ ಮನವಿಯನ್ನು ತಿರಸ್ಕರಿಸಿತ್ತು.

‘ಕಾಲೇಜಿನ ಇಂಥ ನಿರ್ದೇಶನಗಳಿಂದ ವಿದ್ಯಾರ್ಥಿಗಳ ಆಯ್ಕೆಯ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದು’ ಎಂದು ಪೀಠ ಹೇಳಿತ್ತು. ಹೀಗಾಗಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT