ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26/11 ಮಾದರಿ ದಾಳಿ ಬೆದರಿಕೆ ಸಂದೇಶ: ಮುಂಬೈನಲ್ಲಿ ಕಟ್ಟೆಚ್ಚರ, ಓರ್ವನ ಬಂಧನ

Last Updated 20 ಆಗಸ್ಟ್ 2022, 13:08 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಪೊಲೀಸ್‌ಗೆ ನಗರದಲ್ಲಿ 26/11 ಮಾದರಿ ದಾಳಿ ನಡೆಸುವ ಬೆದರಿಕೆಯ ಸಂದೇಶ ಬಂದಿದೆ. ಪಾಕಿಸ್ತಾನದ ಕೋಡ್‌ ಒಳಗೊಂಡ ದೂರವಾಣಿ ಸಂಖ್ಯೆಯಿಂದ ಈ ಸಂದೇಶ ರವಾನೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮುಂಬೈ ಸಮೀಪದ ವಿರಾರ್‌ನಲ್ಲಿ ಓರ್ವನನ್ನು ಬಂಧಿಸಲಾಗಿದೆ. ಮುಂಬೈ ಅಪರಾಧ ತನಿಖಾ ದಳ ಬಂಧಿತನನ್ನು ವಿಚಾರಣೆ ನಡೆಸುತ್ತಿದೆ.

ಶುಕ್ರವಾರ ರಾತ್ರಿ ಸುಮಾರು 11.45ಕ್ಕೆ ವರ್ಲಿ ಸಂಚಾರ ವಿಭಾಗದ ಪೊಲೀಸ್‌ ಠಾಣೆಯ ಸಹಾಯವಾಣಿಯ ವಾಟ್ಸ್‌ಆ್ಯಪ್‌ಗೆ ಬೆದರಿಕೆ ಸಂದೇಶಗಳು ಬಂದಿವೆ. ಒಂದು ಸಂದೇಶದಲ್ಲಿ ಆರು ಮಂದಿ ದಾಳಿ ನಡೆಸಲಿದ್ದಾರೆ ಎಂದಿದೆ. ಮತ್ತೊಂದರಲ್ಲಿ 26/11 ದಾಳಿ ಪುನಃ ನೆನಪಾಗುವಂತೆ ಮುಂಬೈ ನಗರವನ್ನು ಸ್ಪೋಟಿಸುತ್ತೇವೆ ಎಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

'26/11 ಮುಂಬೈ ದಾಳಿಯ ರೂವಾರಿಯಾಗಿದ್ದ ಉಗ್ರ ಅಜ್ಮಲ್‌ ಕಸಬ್‌ ಹಾಗೂ ಇತ್ತೀಚೆಗೆ ಹತ್ಯೆಯಾಗಿದ್ದ ಅಲ್‌ ಕೈದಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥನಾಗಿದ್ದ ಅಯ್ಮನ್ ಅಲ್ ಜವಾಹಿರಿ ಹೆಸರನ್ನು ಪ್ರಸ್ತಾಪಿಸಲಾಗಿದೆ. ಭಾರತದಲ್ಲಿರುವ ತಮ್ಮ ಸಹವರ್ತಿಗಳು ಸ್ಫೋಟಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದವರು (ಎಟಿಎಸ್‌) ತನಿಖೆ ಆರಂಭಿಸಿದ್ದಾರೆ. ನಗರದೆಲ್ಲೆಡೆ ಪೊಲೀಸರು ಹದ್ದಿನ ಕಣ್ಣು ನೆಟ್ಟಿದ್ದಾರೆ. ದೂರವಾಣಿ ಸಂಖ್ಯೆಯು ಪಾಕಿಸ್ತಾನ ಕೋಡ್‌ ಹೊಂದಿದೆ' ಎಂದು ನಗರ ಪೊಲೀಸ್‌ ಕಮಿಷನರ್‌ ವಿವೇಕ್‌ ಫನ್ಸಾಲ್ಕರ್‌ ತಿಳಿಸಿದ್ದಾರೆ.

ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಸಂದೇಶವು ಉರ್ದುವಿನಲ್ಲಿ ಇಲ್ಲ. ಹಿಂದಿಯಲ್ಲಿದೆ. ನಕಲಿ ಐಪಿ ವಿಳಾಸವನ್ನು ಸೃಷ್ಟಿಸಿ ಪಾಕಿಸ್ತಾನದ ದೂರವಾಣಿ ಸಂಖ್ಯೆಯೆಂದು ಬಿಂಬಿಸುವ ಪ್ರಯತ್ನ ನಡೆದಿರಬಹುದು ಎಂದು ಶಂಕಿಸಲಾಗಿದೆ. ದೂರವಾಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಭಾರತೀಯ ಸಂಖ್ಯೆಯೆಂದು ತಿಳಿದುಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಗುರುವಾರ ರಾಯಗಡದ ಕರಾವಳಿ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ವಿಹಾರ ನೌಕೆಯೊಂದು ಪತ್ತೆಯಾಗಿತ್ತು. ವಿಹಾರ ನೌಕೆಯು ಆಸ್ಟ್ರೇಲಿಯಾದ ಮಹಿಳೆಯೊಬ್ಬರಿಗೆ ಸೇರಿದ್ದು, ಭಯೋತ್ಪಾದಕತೆಯ ಯಾವ ಉದ್ದೇಶವೂ ಅದರ ಹಿಂದೆ ಅಡಕವಾಗಿಲ್ಲ ಎಂದು ಗೃಹ ಸಚಿವ ದೇವೇಂದ್ರ ಫಡಣವೀಸ್‌ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT