ಮುಂಬೈ: ‘ನಗರದಲ್ಲಿ ಬುಧವಾರ ಹೊಸದಾಗಿ 13 ದಡಾರ ಪ್ರಕರಣಗಳು ಪತ್ತೆಯಾಗಿದ್ದು, ಮಗುವೊಂದು ಮೃತಪಟ್ಟಿದೆ. ಇದರೊಂದಿಗೆ ಈ ವರ್ಷ ದಡಾರದಿಂದ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ’ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
‘ಭಿವಂಡಿಯಲ್ಲಿ ಎಂಟು ತಿಂಗಳ ಗಂಡು ಮಗುವಿಗೆ ರೋಗ ಬಾಧಿಸಿತ್ತು. ಆ ಮಗು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಸಂಜೆ ಅಸುನೀಗಿದೆ.ಈ ರೋಗದಿಂದ ಬಳಲುತ್ತಿದ್ದ ಒಟ್ಟು 30 ಮಂದಿ ಬುಧವಾರ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಈ ಪೈಕಿ 22 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ’ ಎಂದು ಬಿಎಂಸಿ ಪ್ರಕಟಣೆ ಹೇಳಿದೆ.
‘ಬಿಎಂಸಿ ನಡೆಸಿರುವ ಸಮೀಕ್ಷೆಯಲ್ಲಿ 156 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷ ಒಟ್ಟು 233 ದಡಾರ ಪ್ರಕರಣಗಳು ವರದಿಯಾಗಿವೆ’ ಎಂದು ತಿಳಿಸಿದೆ.