ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಎಂ. ಕೃಷ್ಣಾಗೆ ಸಂಗೀತ ಕಲಾನಿಧಿ ಪುರಸ್ಕಾರ

Published 17 ಮಾರ್ಚ್ 2024, 15:49 IST
Last Updated 17 ಮಾರ್ಚ್ 2024, 15:49 IST
ಅಕ್ಷರ ಗಾತ್ರ

ಚೆನ್ನೈ: ಪ್ರಖ್ಯಾತ ಕರ್ನಾಟಕ ಸಂಗೀತ ಕಲಾವಿದ ಮತ್ತು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ. ಕೃಷ್ಣಾ ಅವರು ಮದ್ರಾಸ್‌ನಲ್ಲಿರುವ ದ ಮ್ಯೂಸಿಕ್ ಅಕಾಡೆಮಿ ಕೊಡಮಾಡುವ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಘೋಷಿಸುವುದಕ್ಕೆ ಸಂಬಂಧಿಸಿದಂತೆ ಮದ್ರಾಸ್‌ನಲ್ಲಿ ಭಾನುವಾರ ನಡೆದ ಮ್ಯೂಸಿಕ್ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಟಿ.ಎಂ. ಕೃಷ್ಣಾ, ಪ್ರೊ. ಪರಸ್ಸಾಲ ರವಿ, ಗೀತಾ ರಾಜಾ ಮತ್ತು ತಿರುವೈಯಾರ್ ಸಹೋದರರಿಗೆ ಪುರಸ್ಕಾರಗಳನ್ನು ನೀಡಲು ನಿರ್ಧರಿಸಲಾಗಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯೂಸಿಕ್ ಅಕಾಡೆಮಿ ಅಧ್ಯಕ್ಷ ಎನ್. ಮುರಳಿ, ‘ಕೃಷ್ಣಾ ಅವರು ಸಮಾಜ ಸುಧಾರಣೆಗೆ ಸಂಗೀತವನ್ನು ಸಾಧನವನ್ನಾಗಿ ಬಳಸಿಕೊಂಡಿದ್ದಾರೆ. ಸಂಗೀತದ ಕುರಿತು ಅವರು ವಿಶ್ಲೇಷಣಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಕೊಡುಗೆಗಾಗಿ ಅವರಿಗೆ ಹಲವು ಪುರಸ್ಕಾರಗಳು ಬಂದಿವೆ’ ಎಂದು ಹೇಳಿದರು. 

ಹಾಡುಗಾರಿಕೆ ವಿಭಾಗದಲ್ಲಿ ಸೇಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನ (ಮಹಿಳೆ) ಪ್ರಾಂಶುಪಾಲರಾದ ಮಾರ್ಗರೇಟ್ ಬಾಸ್ಟಿನ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸಂಗೀತ ವಿಭಾಗದಲ್ಲಿ ಪ್ರೊಫೆಸರ್ ಪರಸ್ಸಾಲ ರವಿ (ವಿ. ರವೀಂದ್ರನ್ ನಾಯರ್) ಮತ್ತು ಗೀತಾ ರಾಜಾ ಅವರಿಗೆ ಸಂಗೀತ ಕಲಾ ಆಚಾರ್ಯ ಪ್ರಶಸ್ತಿ ಘೋಷಿಸಲಾಗಿದೆ. ತಿರುವೈಯಾರ್ ಸಹೋದರರಾದ ಎಸ್. ನರಸಿಂಹನ್ ಮತ್ತು ಎಸ್. ವೆಂಕಟೇಶನ್ ಹಾಗೂ ಎಚ್.ಕೆ. ನರಸಿಂಹಮೂರ್ತಿ ಅವರು ಟಿಟಿಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

2024ರ ಡಿಸೆಂಬರ್ 15ರಿಂದ 2025ರ ಜನವರಿ 1ರ ನಡುವೆ ಹಮ್ಮಿಕೊಳ್ಳಲಾಗುವ ಆಕಾಡೆಮಿಯ 98ನೇ ವಾರ್ಷಿಕ ಸಮಾವೇಶ ಮತ್ತು ಸಂಗೀತ ಅಕಾಡೆಮಿಯ ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT