ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರು ಹುದ್ದೆಗಾಗಿ ಸಹಿಷ್ಣುತೆಯ ಮುಖವಾಡ ಧರಿಸುವರು: ಸಚಿವ ಸತ್ಯಪಾಲ್‌ ಸಿಂಗ್‌

ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಸತ್ಯಪಾಲ್‌ ಸಿಂಗ್‌ ಹೇಳಿಕೆ
Published 9 ಮೇ 2023, 16:06 IST
Last Updated 9 ಮೇ 2023, 16:06 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಮುಸ್ಲಿಮರು ಉಪ ರಾಷ್ಟ್ರಪತಿ, ರಾಜ್ಯಪಾಲ, ವಿಶ್ವವಿದ್ಯಾಲಯಗಳ ಕುಲಪತಿಯಂತಹ ಉನ್ನತ ಹುದ್ದೆಗಳನ್ನು ಪಡೆಯುವುದಕ್ಕಾಗಿ ಸಹಿಷ್ಣುತೆಯ ಮುಖವಾಡ ಧರಿಸುತ್ತಾರೆ. ನಿವೃತ್ತಿಯ ನಂತರ ಅಥವಾ ಅಧಿಕಾರಾವಧಿ ಮುಗಿದ ಬಳಿಕ ಇಂತಹವರ ನಿಜ ಬಣ್ಣ ಬಯಲಾಗುತ್ತದೆ’ ಎಂದು ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಸತ್ಯಪಾಲ್‌ ಸಿಂಗ್‌ ಬಘೇಲಾ ಮಂಗಳವಾರ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮಾಧ್ಯಮ ಶಾಖೆಯಾಗಿರುವ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರವು ಸೋಮವಾರ ಹಮ್ಮಿಕೊಂಡಿದ್ದ ದೇವ್‌ ರಿಷಿ ನಾರದ್‌ ಪತ್ರಕರ್ತರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಹಿಷ್ಣುತೆಯನ್ನು ಹೊಂದಿರುವ ಮುಸ್ಲಿಮರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇವರ ಸಂಖ್ಯೆ ಸಾವಿರವೂ ಇರಲಾರದು ಎಂಬುದು ನನ್ನ ಭಾವನೆ. ಬುದ್ದಿಜೀವಿಗಳೆಂದು ಕರೆಸಿಕೊಳ್ಳುವ ಇವರು ಉನ್ನತ ಹುದ್ದೆಯ ಆಸೆಯಿಂದ ಸಾರ್ವಜನಿಕ ಜೀವನದಲ್ಲಿ ಮುಖವಾಡ ಧರಿಸಿ ಬದುಕುವ ತಂತ್ರ ಅನುಸರಿಸುತ್ತಾರೆ’ ಎಂದು ದೂರಿದರು.

‘ಭಾರತವು ಮುಸ್ಲಿಂ ಮೂಲಭೂತವಾದದ ವಿರುದ್ಧ ಕಡ್ಡಾಯವಾಗಿ ಹೋರಾಡಬೇಕು. ಇದೇ ಹೊತ್ತಿನಲ್ಲಿ ಸಹಿಷ್ಣುತೆ ಹೊಂದಿರುವ ಮುಸ್ಲಿಮರನ್ನು ಜೊತೆಗೆ ಕರೆದುಕೊಂಡು ಸಾಗಬೇಕು’ ಎಂದು ಮಾಹಿತಿ ಆಯುಕ್ತ ಉದಯ್‌ ಮಹುರ್ಕರ್‌ ಅವರು ಸಮಾರಂಭದಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಬಘೇಲಾ ಅವರು ಈ ರೀತಿಯ ಮಾತುಗಳನ್ನು ಆಡಿದರು.

‘ಮೊಘಲ್‌ ದೊರೆಯಾಗಿದ್ದ ಅಕ್ಬರನು ಜೋಧಾ ಬಾಯಿಯನ್ನು ವಿವಾಹವಾಗಿದ್ದು ಆತನ ರಾಜಕೀಯ ತಂತ್ರಗಾರಿಕೆಯ ಭಾಗವಷ್ಟೇ. ಆತ ತನ್ನ ಆತ್ಮಸಾಕ್ಷಿಗೆ ಅನುಸಾರವಾಗಿ ಈ ನಿರ್ಧಾರ ಕೈಗೊಂಡಿರಲಿಲ್ಲ. ಮೊಘಲರ ಆಳ್ವಿಕೆಯ ಅವಧಿಯನ್ನು ಒಮ್ಮೆ ಗಮನಿಸಿ. ಔರಂಗಜೇಬನ ಆಡಳಿತವನ್ನು ನೋಡಿ. ಆ ಕಾಲಘಟ್ಟದಲ್ಲಿ ನಾವೆಲ್ಲಾ ಹೇಗೆ ಬದುಕಿದೆವೋ ಎಂದು ಒಮ್ಮೊಮ್ಮೆ ಅನಿಸುವುದುಂಟು. ಮಹಮ್ಮದ್‌ ಘೋರಿಯು ರಜಪೂತರ ದೊರೆ ಪೃಥ್ವಿರಾಜ್‌ ಚೌಹಾಣ್‌ನನ್ನು ಸೋಲಿಸಿದಾಗಲೇ ಭಾರತದ ಪಾಲಿಗೆ ಕೆಟ್ಟ ದಿನಗಳು ಶುರುವಾಗಿದ್ದವು’ ಎಂದು ಸಚಿವರು ಹೇಳಿದರು.

‘ಮುಸ್ಲಿಮರು ಮದರಸಾಗಳಲ್ಲಿ ಓದಿದರೆ ಉರ್ದು, ಅರೇಬಿಕ್‌ ಹಾಗೂ ಪರ್ಷಿಯನ್ ಕಲಿಯುತ್ತಾರೆ. ಅಂತಹವರು ಮುಂದೊಂದು ದಿನ ಪೇಶ್‌–ಇಮಾಮ್‌ ಆಗುತ್ತಾರೆ. ಒಂದೊಮ್ಮೆ ಅವರು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನವನ್ನು ಅಭ್ಯಾಸ ಮಾಡಿದರೆ ಅಬ್ದುಲ್‌ ಕಲಾಂ ಅವರಂತೆ ದೊಡ್ಡ ವಿಜ್ಞಾನಿಯಾಗುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT