ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರನೇ ಅಧಿಕಾರಾವಧಿಯಲ್ಲಿ ಮಹಿಳಾ ಶಕ್ತಿ ವರ್ಧನೆ: ಪ್ರಧಾನಿ ಮೋದಿ

Published 11 ಮಾರ್ಚ್ 2024, 14:09 IST
Last Updated 11 ಮಾರ್ಚ್ 2024, 14:09 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗಾಗಿ ತಮ್ಮ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಉಲ್ಲೇಖಿಸಿ, ‘ಮಹಿಳೆಯರ ಸ್ಥಾನಮಾನ ಹೆಚ್ಚಿಸುವ ಮತ್ತು ಅವರಿಗೆ ಹೊಸ ಅವಕಾಶಗಳನ್ನು ರೂಪಿಸುವ ಸಮಾಜವಷ್ಟೇ ಮುನ್ನಡೆಯಲು ಸಾಧ್ಯ’ ಎಂದು ಸೋಮವಾರ ಪ್ರತಿಪಾದಿಸಿದರು.

‘ಸಶಕ್ತ ನಾರಿ– ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ‘ಮಹಿಳೆಯರ ಶಕ್ತಿಯನ್ನು ವರ್ಧಿಸುವ ವಿಷಯದಲ್ಲಿ ನನ್ನ ಮೂರನೇ ಅಧಿಕಾರಾವಧಿಯು ಹೊಸ ಅಧ್ಯಾಯ ಬರೆಯಲಿದೆ’ ಎಂದು ಹೇಳುವ ಮೂಲಕ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರವನ್ನು ಉಳಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದರು.

ಇದೇ ವೇಳೆ, ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿ, ‘ಮಹಿಳೆಯರ ಜೀವನ ಮತ್ತು ಅವರ ಶ್ರಮ ಅವುಗಳ (ಹಿಂದಿನ ಸರ್ಕಾರಗಳು) ಆದ್ಯತೆಯಾಗಿರಲಿಲ್ಲ. ಆದರೆ, ಮಹಿಳೆಯರಿಗೆ ಜೀವನದ ಪ್ರತಿ ಹಂತದಲ್ಲಿ ಸಹಾಯ ಮಾಡಲು ಬಿಜೆಪಿಯು ವಿವಿಧ ಯೋಜನೆಗಳನ್ನು ರೂಪಿಸಿತು’ ಎಂದು ಹೇಳಿದರು.

‘ಮಹಿಳೆಯರ ಶೌಚಾಲಯಗಳ ಕೊರತೆ, ಸ್ಯಾನಿಟರಿ ಪ್ಯಾಡ್‌ಗಳ ಬಳಕೆ, ಅಡುಗೆಮನೆಯಲ್ಲಿ ಬಳಸುವ ಕಟ್ಟಿಗೆ ಹಾಗೂ ಇದ್ದಿಲಿನ ಹೊಗೆಯಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು– ಹೀಗೆ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮೊದಲು ಮಾತನಾಡಿದ ಪ್ರಧಾನಿಯೇ ನಾನು. ಆದರೆ, ಇಂಥ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್‌ನಂಥ ರಾಜಕೀಯ ಪಕ್ಷಗಳು ನನ್ನನ್ನು ಅಪಹಾಸ್ಯ ಮಾಡಿ ಅವಮಾನಿಸಿದವು’ ಎಂದು ತಿಳಿಸಿದರು.

‘ಸರ್ಕಾರದ ಯೋಜನೆಗಳ ಮೂಲಕ ಇಲ್ಲಿಯವರೆಗೆ ₹ 8 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಮಹಿಳೆಯರಿಗೆ ವಿತರಿಸಲಾಗಿದೆ. 1 ಕೋಟಿ ಮಹಿಳೆಯರು ‘ಲಕ್ಪತಿ ದೀದಿ’ಗಳಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT