ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಲಕುರಿಚ್ಚಿ ದುರಂತ | ಕಾಂಗ್ರೆಸ್‌ನಿಂದ ಗಾಢ ಮೌನ: ಬಿಜೆಪಿ ವಾಗ್ದಾಳಿ

ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪತ್ರ
Published 24 ಜೂನ್ 2024, 15:31 IST
Last Updated 24 ಜೂನ್ 2024, 15:31 IST
ಅಕ್ಷರ ಗಾತ್ರ

ನವದೆಹಲಿ: ವಿಷಯುಕ್ತ ಮದ್ಯ ಕುಡಿದು 56 ಮಂದಿ ಮೃತಪಟ್ಟ ಕಲ್ಲಕುರಿಚ್ಚಿ ದುರಂತ ಕುರಿತು ಕಾಂಗ್ರೆಸ್‌ ‘ಗಾಢ ಮೌನ’ ವಹಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡಿನಲ್ಲಿ ನಡೆದ ಈ ಕೃತ್ಯ ‘ಮಾನವ ಸೃಷ್ಟಿಸಿದ ದುರಂತ’ವಾಗಿದೆ ಎಂದು ಪತ್ರದಲ್ಲಿ ಆರೋಪಿಸಿರುವ ನಡ್ಡಾ, ಡಿಎಂಕೆ ನೇತೃತ್ವದ ಇಂಡಿಯಾ ಒಕ್ಕೂಟ–ಮದ್ಯ ಅಕ್ರಮ ಮಾಫಿಯಾದ ನಡುವೆ ನಂಟು ಹೊಂದಿರದಿದ್ದರೆ, 56 ಮಂದಿಯ ಪ್ರಾಣ ಉಳಿಸಬಹುದಿತ್ತು ಎಂದು ಆರೋಪಿಸಿದ್ದಾರೆ.

‘ದುರ್ಘಟನೆ ಬಳಿಕ ಕರುಣಾಪುರಂ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆಗೆ ಸಿದ್ಧಪಡಿಸಲಾದ ಚಿತಾಗಾರದ ಭೀಕರ ಚಿತ್ರಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಅಲುಗಾಡಿಸಿವೆ’ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಖರ್ಗೆ ಅವರೇ... ನಿಮಗೆ ತಿಳಿದಂತೆ, ಕರುಣಾಪುರಂನಲ್ಲಿ ಪರಿಶಿಷ್ಟ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಾತಿ ತಾರತಮ್ಯಕ್ಕೂ ತುತ್ತಾಗುತ್ತಿದ್ದಾರೆ. ಇಂತಹ ದೊಡ್ಡ ಅನಾಹುತ ನಡೆದಾಗಲೂ ಕಾಂಗ್ರೆಸ್‌ ಮೌನ ವಹಿಸಿರುವುದು ನನಗೆ ಆಘಾತ ತಂದಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಕೆಲ ಸಮಸ್ಯೆಗಳ ಕುರಿತು ಪಕ್ಷಗಳ ಗಡಿ ದಾಟಿ ಸ್ಪಂದಿಸಬೇಕು. ಪರಿಶಿಷ್ಟರ ಯೋಗಕ್ಷೇಮ ಹಾಗೂ ಸುರಕ್ಷತೆ ವಿಚಾರದಲ್ಲಿ ಇಂತಹ ದೃಢ ನಿಲುವು ಅಗತ್ಯ. ಡಿಎಂಕೆ– ಇಂಡಿಯಾ ಒಕ್ಕೂಟವು ಕೃತ್ಯವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಅಬಕಾರಿ ಸಚಿವ ಎಸ್‌.ಮುತ್ತುಸ್ವಾಮಿ ಅವರನ್ನು ಪದಚ್ಯುತಿಗೊಳಿಸಲು ಒತ್ತಡ ಹೇರಬೇಕು’ ಎಂದು ನಡ್ಡಾ ಆಗ್ರಹಿಸಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ನೀಡಿದ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಹಾಗೂ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಬೇಕು ಎಂದಿದ್ದಾರೆ. 

ಜೆ.ಪಿ.ನಡ್ಡಾ
ಜೆ.ಪಿ.ನಡ್ಡಾ

ಕಲ್ಲಕುರಿಚ್ಚಿ ದುರಂತ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ಚೆನ್ನೈ: ವಿಷಯುಕ್ತ ಮದ್ಯ ಕುಡಿದು 53 ಮಂದಿ ಮೃತಪಟ್ಟ ಕಲ್ಲಕುರಿಚ್ಚಿಯಲ್ಲಿ ನಡೆದ ಅವಘಡ ಕುರಿತು ಸಿಬಿಐ ತನಿಖೆಗೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ನೇತೃತ್ವದ ನಿಯೋಗವು ಸೋಮವಾರ ರಾಜ್ಯಪಾಲರನ್ನು ಭೇಟಿಯಾಗಿ ಈ ಕುರಿತು ಮನವಿಯನ್ನು ಸಲ್ಲಿಸಿತು.  ‘ಡಿಎಂಕೆ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ನಾವು 60 ಜೀವಗಳನ್ನು ಕಳೆದುಕೊಂಡಿದ್ದೇವೆ. ರಾಜ್ಯಪಾಲರನ್ನು ಭೇಟಿಯಾಗಿ ಈ ಬಗ್ಗೆ ಸಿಬಿಐ ತನಿಖೆಗೆ ಅಗತ್ಯ ಎಂದು ಪ್ರತಿಪಾದಿಸಲಾಯಿತು’ ಎಂದು ಹೇಳಿದರು. ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷೆ ತಮಿಳ್‌ಇಸೈ ಸೌಂದರರಾಜನ್‌ ಇದ್ದರು.  

ಸಿ.ಎಂ ಉತ್ತರಿಸುವ ಕಾಲ ಶೀಘ್ರ ಬರಲಿದೆ –ಎಐಎಡಿಎಂಕೆ 

ಕಲ್ಲಕುರಿಚ್ಚಿ: ‘ವಿಷಯುಕ್ತ ಮದ್ಯದಿಂದ 53 ಜನರು ಸತ್ತ ದುರಂತ ಕುರಿತು ಸಿ.ಎಂ ಉತ್ತರಿಸುವ ಕಾಲ ಶೀಘ್ರ ಬರಲಿದೆ’ ಎಂದು ಎಐಎಡಿಎಂಕೆ ಪ್ರತಿಕ್ರಿಯಿಸಿದೆ. ಡಿಎಂಕೆ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ‘ಅವಘಡದಿಂದ ಕರುಣಾಪುರಂನ ಜನರು ಸಾಕಷ್ಟು ಪರಿತಪಿಸಿದ್ದಾರೆ. ಇದಕ್ಕೆ ಉತ್ತರ ಬೇಕಾಗಿದೆ’ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT