ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ 3.O: ‘ಮೈತ್ರಿ’ ಸಂಪುಟಕ್ಕೆ 72 ಗರಿ

Published 9 ಜೂನ್ 2024, 19:20 IST
Last Updated 9 ಜೂನ್ 2024, 19:20 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯ ಹಿಂದಿನ ಪೂರ್ಣ ಬಹುಮತದ ಸರ್ಕಾರಗಳಿಗೆ ಹೋಲಿಸಿದರೆ ಎನ್‌ಡಿಎ ಮಿತ್ರ ಪಕ್ಷಗಳು ಹೆಚ್ಚಿನ ಪ್ರಾತಿನಿಧ್ಯ ಹೊಂದಿರುವ ಸಂಪುಟದ ‘ಭಾರ’ ಹೊತ್ತು ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಇನ್ನಿಂಗ್ಸ್‌ ಅನ್ನು ಭಾನುವಾರ ಆರಂಭಿಸಿದರು. ಈ ಮೂಲಕ ಪ್ರಧಾನಿಯಾಗಿ ಜವಾಹರ್‌ ಲಾಲ್‌ ನೆಹರೂ ಅವರ ‘ಹ್ಯಾಟ್ರಿಕ್‌’ ಸಾಧನೆಯನ್ನು ಸರಿಗಟ್ಟಿದರು. 

ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ದೇಶ ವಿದೇಶದ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿ ಹಾಗೂ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. 

17ನೇ ಲೋಕಸಭೆಯಲ್ಲಿ ಬಿಜೆಪಿಗೆ ಭರ್ಜರಿ ಬಹುಮತ ಸಿಕ್ಕಿದ್ದರಿಂದ ಮಿತ್ರ ಪಕ್ಷಗಳಿಗೆ ಐದು ಸಚಿವ ಸ್ಥಾನಗಳನ್ನಷ್ಟೇ ನೀಡಲಾಗಿತ್ತು. ಈ ಸಲ ಕಮಲ ಪಾಳಯಕ್ಕೆ ಬಹುಮತ ಸಿಕ್ಕಿಲ್ಲ. ಇದರಿಂದಾಗಿ, ಮೋದಿ ಸಂಪುಟದಲ್ಲಿ ಮಿತ್ರ ಪಕ್ಷಗಳ ಸದಸ್ಯರ ಸಂಖ್ಯೆ 11ಕ್ಕೆ ಏರಿದೆ. ಸಂಪುಟದಲ್ಲಿ ಹಿರಿಯರಿಗೆ ಹಾಗೂ ಹೊಸಬರಿಗೆ ಅವಕಾಶ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ನಡೆಸಲಾಗಿದೆ. ಜತೆಗೆ, ಹಿಂದಿ ಸೀಮೆಯ ರಾಜ್ಯಗಳಿಗೆ ಸಂಪುಟದಲ್ಲಿ ಹೆಚ್ಚಿನ ‍ಪ್ರಾತಿನಿಧ್ಯ ನೀಡಲಾಗಿದೆ. ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ನಾಲ್ವರನ್ನು ಸೇರಿಸಿಕೊಳ್ಳಲಾಗಿದೆ. ಆದರೆ, ಈ ಸರ್ಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ.  

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು 64 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಕಳೆದ ಬಾರಿ ರಾಜ್ಯದ 12 ಸಚಿವರು ಇದ್ದರು. ಈ ಸಲ ಕಮಲ ಪಾಳಯ ಗೆದ್ದಿರುವುದು 33 ಕ್ಷೇತ್ರಗಳಲ್ಲಿ. ಈ ಬಾರಿ ರಾಜ್ಯದ ಒಂಬತ್ತು ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. 

ತಮ್ಮ ಹೊಸ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಮೋದಿ ಅವರು ಕಳೆದ ಸರ್ಕಾರದಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಭಾಗವಾಗಿದ್ದ ಪ್ರಮುಖ ನಾಲ್ವರು ಸಚಿವರಾದ ರಾಜನಾಥ್ ಸಿಂಗ್‌, ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌ ಹಾಗೂ ಎಸ್‌.ಜೈಶಂಕರ್ ಮೇಲೆ ಮತ್ತೆ ನಂಬಿಕೆ ಇಟ್ಟರು. ನಾಗ್ಪುರದ ಸಂಸದ ನಿತಿನ್ ಗಡ್ಕರಿ ಹಾಗೂ ಮುಂಬೈ ಉತ್ತರದಿಂದ ತನ್ನ ಚೊಚ್ಚಲ ಲೋಕಸಭಾ ಚುನಾವಣೆಯಲ್ಲಿ ಗೆದ್ದ ರಾಜ್ಯಸಭೆಯ ಸದನದ ನಾಯಕ ಪೀಯೂಷ್ ಗೋಯಲ್‌ ಅವರಂತಹ ‘ಪ್ರಭಾವಿ’ಗಳನ್ನು ಹಾಗೆಯೇ ಉಳಿಸಿಕೊಂಡರು. ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್‌, ಮನೋಹರ್ ಲಾಲ್‌ ಖಟ್ಟರ್ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಸರತಿಯಲ್ಲಿ ಐದನೇ, ಎಂಟನೇ ಹಾಗೂ ಒಂಬತ್ತನೆಯವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂವರ ಆಡಳಿತದ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಂದೇಶವನ್ನು ಪ್ರಧಾನಿಯವರು ಈ ಮೂಲಕ ರವಾನಿಸಿದರು. ಎನ್‌ಡಿಎ ಒಕ್ಕೂಟದ ಮಿತ್ರ ಪಕ್ಷಗಳಲ್ಲಿ ಮೊದಲನೆಯವರಾಗಿ ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷ. ಅವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಸಭಿಕರೊಬ್ಬರು ಕನ್ನಡದಲ್ಲಿ ಘೋಷಣೆ ಕೂಗಿದರು. 

ಕಾಂಗ್ರೆಸ್‌ನಿಂದ ವರ್ಷಗಳ ಹಿಂದೆ ವಲಸೆ ಬಂದಿರುವ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್‌ ಪ್ರಸಾದ್‌ ಹಾಗೂ ಚುನಾವಣೆಗೆ ಮುನ್ನ ಪಕ್ಷಕ್ಕೆ ಸೇರ್ಪಡೆಯಾದ ರವನೀತ್ ಸಿಂಗ್‌ ಬಿಟ್ಟೂ ಅವರು ಸಂಪುಟದಲ್ಲಿ ಜಾಗ ಪಡೆದಿದ್ದಾರೆ. ಸಿಂಧಿಯಾ ಹಾಗೂ ಜಿತಿನ್ ಅವರು ಈ ಹಿಂದೆ ರಾಹುಲ್‌ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 

ಮಹಾರಾಷ್ಟ್ರ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗಳಿಗೆ ಈ ವರ್ಷ ಚುನಾವಣೆ ನಡೆಯಲಿದೆ. ದೆಹಲಿ, ಜಾರ್ಖಂಡ್‌ ಹಾಗೂ ಬಿಹಾರ ವಿಧಾನಸಭೆಗಳಿಗೆ ಮುಂದಿನ ವರ್ಷ ಚುನಾವಣೆ ಜರುಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ರಾಜ್ಯಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟವು ಈ ಸಲ ಕಳಪೆ ಸಾಧನೆ ಮಾಡಿತ್ತು. ಆದರೂ, ಆ ರಾಜ್ಯದ ಐವರನ್ನು ಸೇರಿಸಿಕೊಳ್ಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT