ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿಗೆ ತೈಲ ಹೊತ್ತುಬರುತ್ತಿದ್ದ ಹಡಗು ಸ್ಫೋಟ ; ನೌಕಾಪಡೆಯಿಂದ ತನಿಖೆ ಆರಂಭ

ಮಂಗಳೂರಿಗೆ ತೈಲ ಹೊತ್ತುಬರುತ್ತಿದ್ದ ಸರಕು ಸಾಗಣೆ ಹಡಗು ಸ್ಫೋಟ ಪ್ರಕರಣ
Published 24 ಡಿಸೆಂಬರ್ 2023, 13:12 IST
Last Updated 24 ಡಿಸೆಂಬರ್ 2023, 13:12 IST
ಅಕ್ಷರ ಗಾತ್ರ

ನವದೆಹಲಿ: ಸೌದಿ ಅರೇಬಿಯಾದಿಂದ ಮಂಗಳೂರಿಗೆ ಕಚ್ಚಾ ತೈಲ ಹೊತ್ತುತರುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದಿರುವ ಶಂಕಿತ ಡ್ರೋನ್‌ ದಾಳಿಗೆ ಸಂಬಂಧಿಸಿ ಭಾರತೀಯ ನೌಕಾಪಡೆಯು ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು. 

ಭಾರತೀಯ ಕರಾವಳಿ ಕಾವಲು ಪಡೆಯ ನೌಕೆ ಐಸಿಜಿಎಸ್‌ ವಿಕ್ರಂನ ಬೆಂಗಾವಲಿನಲ್ಲಿ ಎಂವಿ ಚೆಮ್‌ ಪ್ಲುಟೊ ಹಡಗನ್ನು ಮುಂಬೈಗೆ ತರಲಾಗುತ್ತಿದೆ. ಕರಾವಳಿ ಕಾವಲು ಪಡೆಯ ಕಾರ್ಯನಿರ್ವಹಣಾ ಕೇಂದ್ರವು ಈ ಕುರಿತು ನಿಗಾವಹಿಸಿದೆ ಎಂದು ಹೇಳಿದರು.

ಗುಜರಾತ್‌ನ ವೆರಾವಲ್‌ ಕರಾವಳಿಯಿಂದ 200 ನಾಟಿಕಲ್‌ ಮೈಲಿ ದೂರದಲ್ಲಿ ಕಚ್ಚಾ ತೈಲ ಸಾಗಿಸುತ್ತಿದ್ದ ಹಡಗಿನಲ್ಲಿ ಶನಿವಾರ ಸ್ಫೋಟ ಸಂಭವಿಸಿತು. ಡ್ರೋನ್‌ ದಾಳಿಯೇ ಈ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಡ್ರೋನ್‌ ದಾಳಿಯನ್ನು ಎಲ್ಲಿಂದ ಮಾಡಲಾಗಿದೆ ಎಂಬುದನ್ನೂ ಸೇರಿ ಸಂಪೂರ್ಣ ಘಟನೆ ಕುರಿತು ನಾಕಾಪಡೆ ತನಿಖೆ ನಡೆಸಲಿದೆ. ದಾಳಿ ನಡೆದ ಸ್ಥಳಕ್ಕೆ ಕ್ಷಿಪಣಿ ಧ್ವಂಸಕ ಯುದ್ಧನೌಕೆ ಐಎನ್‌ಎಸ್‌ ಮುರ್ಮುಗೋವಾ ಅನ್ನು ಕಳಿಸಲಾಗಿದೆ. ದಾಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೌಕೆಯು ಪರಿಶೀಲಿಸುತ್ತಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಡಗೊಂದರ ಮೇಲೆ ಮಾನವರಹಿತ ವೈಮಾನಿಕ ವ್ಯವಸ್ಥೆಯಿಂದ (ಯುಎಎಸ್‌) ದಾಳಿ ನಡೆದಿದೆ ಎಂದು ಬ್ರಿಟನ್‌ನ ಯುನೈಟೆಡ್‌ ಕಿಂಗ್‌ಡಮ್‌ ಮೇರಿಟೈಮ್‌ ಟ್ರೇಡ್‌ ಆಪರೇಷನ್ಸ್‌ ಸಂಸ್ಥೆಯು (ಯುಕೆಎಂಟಿಒ) ಮೊದಲಿಗೆ ವರದಿ ಮಾಡಿತು. ಮುಂಬೈನಲ್ಲಿನ ಕರಾವಳಿ ರಕ್ಷಣಾ ಸಹಯೋಗ ಕೇಂದ್ರವು (ಎಂಆರ್‌ಸಿಸಿ) ಈ ಕುರಿತು ಮಾಹಿತಿ ಪಡೆಯಿತು. ಮಾಹಿತಿ ದೊರಕುತ್ತಿದ್ದಂತೆ ಭಾರತೀಯ ನೌಕಾಪಡೆಯು ಕರಾವಳಿ ಗಸ್ತು ಯುದ್ಧವಿಮಾನವನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿತು.

ಅದೇವೇಳೆ, ನೌಕಾಪಡೆ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ತಮ್ಮ ಯುದ್ಧವಿಮಾನಗಳು ಮತ್ತು ಯುದ್ಧನೌಕೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದವು.

ಹಡಗಿನಲ್ಲಿ 21 ಮಂದಿ ಭಾರತೀಯ ಸಿಬ್ಬಂದಿ ಸೇರಿ 22 ಜನರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT