ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ನಕ್ಸಲ್ ನಾಯಕ ರಾಮಣ್ಣ ಸಾವು, ಛತ್ತೀಸ್‌ಗಡದಲ್ಲಿ ನೆಲೆಸೀತೇ ಶಾಂತಿ?

ಶಾಂತಿ ಸ್ಥಾಪನೆಗೆ ಶಸ್ತ್ರದ ಜೊತೆಗೆ ಅಭಿವೃದ್ಧಿಯ ಮಂತ್ರವೂ ಬೇಕು
Last Updated 13 ಜನವರಿ 2020, 2:30 IST
ಅಕ್ಷರ ಗಾತ್ರ
ADVERTISEMENT
""
""
""

ಛತ್ತೀಸ್‌ಗಡದ ನಕ್ಸಲ್‌ ನಾಯಕ ರಾಮಣ್ಣ ಸಾವಿನ ನಂತರ ನಕ್ಸಲರಿಗೆ ನಾಯಕತ್ವದ ಕೊರತೆ ಎದುರಾಗಿದೆ. ಜನಪರ ಕಾರ್ಯಕ್ರಮಗಳ ಮೂಲಕ ನಕ್ಸಲ್‌ ಚಳವಳಿಯ ಶಕ್ತಿಗುಂದಿಸಲು ಸರ್ಕಾರಕ್ಕೀಗ ಸಕಾಲ. ಪೊಲೀಸ್‌ ಕಾರ್ಯಾಚರಣೆಗಿಂತಲೂ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚು ಶಕ್ತಿಯಿದೆ ಎನ್ನುವುದನ್ನು ಛತ್ತೀಸ್‌ಗಡ ಸರ್ಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.

‘ಒಂದು ವೇಳೆ ಕಳೆದ ಡಿಸೆಂಬರ್‌ ತಿಂಗಳಲ್ಲಿ ಪೌರತ್ವ ಮಸೂದೆ ಪ್ರತಿಭಟನೆಗಳು ಭುಗಿಲೇಳದಿದ್ದರೆ ಯಾವ ವಿಚಾರ ಹೆಚ್ಚು ಚರ್ಚೆಗೆ ಬರುತ್ತಿತ್ತು?’

–ಆಂತರಿಕ ಭದ್ರತೆಯನ್ನು ನಿಯಮಿತವಾಗಿ ಗಮನಿಸುವವರ ಎದುರು ಇಂಥದ್ದೊಂದು ಪ್ರಶ್ನೆ ಮುಂದಿಟ್ಟರೆ ಅವರು ಎರಡನೇ ಯೋಚನೆಯೇ ಇಲ್ಲದೆ ‘ನಕ್ಸಲ್ ಚಳವಳಿ’ ಎಂದು ಉತ್ತರಿಸುತ್ತಾರೆ. ಅದಕ್ಕೆ ಕಾರಣ ಛತ್ತೀಸಗಡದ ನಕ್ಸಲ್ ನಾಯಕ ರಾಮಣ್ಣನ ಸಾವು.

ಛತ್ತೀಸಗಡದ ದಂಡಕಾರಣ್ಯ ವಿಶೇಷ ವಲಯದಲ್ಲಿ ನಕ್ಸಲ್ ಸಂಘಟನೆಯ ಕಾರ್ಯದರ್ಶಿಯಾಗಿದ್ದ ರಾಮಣ್ಣನಿಗೆ ನರೇಂದ್ರ ಅಲಿಯಾಸ್ ರಾವುಲ್ಲ ಶ್ರೀನಿವಾಸ್ ಎಂಬ ಹೆಸರುಗಳೂ ಇದ್ದವು. ಡಯಾಬಿಟಿಸ್ ಮತ್ತು ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದ ಈತ ಡಿ.7ರಂದು ಛತ್ತೀಸ್‌ಗಡ–ತೆಲಂಗಾಣ ಗಡಿಯ ಅರಣ್ಯ ಪ್ರದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟ. ಸತ್ತಾಗ ರಾಮಣ್ಣನ ವಯಸ್ಸು 55ರಿಂದ 66 ಮಧ್ಯ ಇರಬಹುದು ಎಂದಷ್ಟೇ ಛತ್ತೀಸ್‌ಗಡ ಪೊಲೀಸ್ ಇಲಾಖೆ ಹೇಳುತ್ತದೆ. ಆತನ ವಯಸ್ಸಿನ ನಿಖರ ಮಾಹಿತಿ ಸಿಗುತ್ತಿಲ್ಲ.

ನಕ್ಸಲ್ ನಾಯಕ ರಾಮಣ್ಣನ ಮಾಹಿತಿಗೆ ಇನಾಮು ಘೋಷಣೆ

ವಾರಂಗಲ್ ಮೂಲ

ಈಗ ತೆಲಂಗಾಣದಲ್ಲಿರುವ ವಾರಂಗಲ್ ಜಿಲ್ಲೆ ರಾಮಣ್ಣನ ಮೂಲ. 1982ರಲ್ಲಿ ನಕ್ಸಲ್ ಸಂಘಟನೆಗೆ ಸೇರಿಕೊಂಡಾಗ ಈತನಿಗೆ 18 ವರ್ಷದ ಪ್ರಾಯ ಎನ್ನುವುದು ಜನಪ್ರಿಯ ಮಾಹಿತಿ. ನಕ್ಸಲ್ ಚಳವಳಿಯಲ್ಲಿರುವವರು ಮದುವೆಯಾಗಬಾರದು, ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದ ರಾಮಣ್ಣ, 1994ರಲ್ಲಿ ತನ್ನ ಸಹವರ್ತಿ ಸಾವಿತ್ರಿಯನ್ನು ಮದುವೆಯಾಗಿದ್ದ. ಈ ದಂಪತಿಗೆ ರಂಜಿತ್ ಎಂಬ ಪುತ್ರನಿದ್ದಾನೆ. ಆತನೂ ಭೂಗತ ನಕ್ಸಲ್.

ಛತ್ತೀಸ್‌ಗಡ, ಮಧ್ಯಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ 32 ಎಫ್‌ಐಆರ್‌ಗಳು ರಾಮಣ್ಣನ ವಿರುದ್ಧ ದಾಖಲಾಗಿವೆ. ಇವನ ತಲೆಗೆ ನಾಲ್ಕೂ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಬಹುಮಾನ ಘೋಷಿಸಿದ್ದವು. ಅದರ ಒಟ್ಟು ಮೊತ್ತ ₹ 1.37 ಕೋಟಿ!

ನಕ್ಸಲ್ ಚಳವಳಿಯಲ್ಲಿ ಸಕ್ರಿಯನಾದ ಆರಂಭದ ದಿನಗಳಲ್ಲಿ ಭದ್ರಾಚಲಂ ದಳದ ಸದಸ್ಯನಾಗಿದ್ದ ರಾಮಣ್ಣ 1988ರಲ್ಲಿ ದಂಡಕಾರಣ್ಯ ಪ್ರದೇಶಕ್ಕೆ ಹೊರಟ. ಸುಕ್ಮಾ ಕೊಂಟ ದಳಂನ ಕಮಾಂಡರ್ ಆದ ನಂತರ ನಾಯಕತ್ವದ ಏಣಿಯ ಮೆಟ್ಟಿಲುಗಳನ್ನು ವೇಗವಾಗಿ ಏರಿದ. 2011ರಲ್ಲಿ ದಂಡಕಾರಣ್ಯ ವಿಶೇಷ ವಲಯದ ಕಾರ್ಯದರ್ಶಿ, 2013ರಲ್ಲಿ ಸಿಪಿಐ (ಮಾವೋವಾದಿ) ಪಕ್ಷದ ಕೇಂದ್ರ ಸಮಿತಿ ಸದಸ್ಯನಾದ. ಛತ್ತೀಸಗಡದ ಬಸ್ತಾರ್‌ನಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಬಿರುಸು ಸಿಕ್ಕಿದ್ದೇ ರಾಮಣ್ಣ ನಾಯಕನಾದ ನಂತರ.

ಪ್ರಾತಿನಿಧಿಕ ಚಿತ್ರ

ದಾಳಿ ಸಂಘಟಿಸುವ ಮಿದುಳು

ಸಂಘಟನೆ ಕಟ್ಟುವ ಶಕ್ತಿಯ ಜೊತೆಜೊತೆಗೆ ದಾಳಿ ಮತ್ತು ಕ್ರೌರ್ಯದಿಂದ ರಾಮಣ್ಣ ಕುಖ್ಯಾತನಾಗಿದ್ದ. 1989ರಿಂದ 2015ರ ಅವಧಿಯಲ್ಲಿ ಬಸ್ತಾರ್ ವಲಯದಲ್ಲಿ ವಿವಿಧ ದಾಳಿಗಳನ್ನು ಸಂಘಟಿಸಿದ್ದ ರಾಮಣ್ಣ 150ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದ.

ರಾಮಣ್ಣ ಮೊದಲ ಬಾರಿಗೆ ದೇಶದಲ್ಲಿ ಸುದ್ದಿಯಾಗಿದ್ದು ದಾಂತೆವಾಡದ ಎರ‍್ರಬೊರೆ ಸಂತ್ರಸ್ತ ಶಿಬಿರದ ಮೇಲಿನ ದಾಳಿಯಲ್ಲಿ. 2006ರಲ್ಲಿ ನಡೆದ ದಾಳಿಯಲ್ಲಿ 800 ಮಾವೊವಾದಿಗಳು ಪಾಲ್ಗೊಂಡಿದ್ದರು. 25 ಮಂದಿ ಮೃತಪಟ್ಟರೆ, 250ಕ್ಕೂ ಹೆಚ್ಚು ಮಂದಿ ದಾಳಿಯ ನಂತರ ನಾಪತ್ತೆಯಾದರು. 2007ರಲ್ಲಿ ಛತ್ತೀಸ್‌ಗಡದ ಬಿಜಾಪುರದಲ್ಲಿ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಯಿತು. ಈ ದಾಳಿಯ ಸಂಚು ರೂಪಿಸಿದ್ದವನೂ ರಾಮಣ್ಣನೇ. ದಾಳಿಯಲ್ಲಿ ಹುತಾತ್ಮರಾದ 55 ಮಂದಿಯಲ್ಲಿ ಹಲವರ ದೇಹಗಳು ಗುರುತು ಸಿಗದಷ್ಟು ವಿರೂಪಗೊಂಡಿದ್ದವು.

2010ರಲ್ಲಿ ಸುಕ್ಮಾದಲ್ಲಿದ್ದ ಸಿಆರ್‌ಪಿಎಫ್‌ ಶಿಬಿರದ ಮೇಲೆ ಸಂಘಟಿಸಿದ ದಾಳಿ ರಾಮಣ್ಣನ ಮತ್ತೊಂದು ದೊಡ್ಡ ಕಾರ್ಯಾಚರಣೆ. ಈ ದಾಳಿಯಲ್ಲಿ 76 ಯೋಧರು ಹುತಾತ್ಮರಾಗಿದ್ದರು. ಸತ್ತವರಲ್ಲಿ ಅನೇಕರ ದೇಹಗಳಲ್ಲಿ ಮುಂಗೈ ಮತ್ತು ಪಾದಗಳು ಛಿದ್ರವಾಗಿದ್ದವು. ಕೈಗಡಿಯಾರ ಮತ್ತು ಶೂ ಕಿತ್ತುಕೊಳ್ಳುವ ಆತುರದಲ್ಲಿ ಮುಂಗೈ ಮತ್ತು ಪಾದಗಳನ್ನೇ ಕಡಿದುಹಾಕಿದ್ದರು.

ಜನವರಿ 2013ರಲ್ಲಿ ಜಾರ್ಖಂಡ್‌ನ ಲಾತೆಹಾರ್‌ನಲ್ಲಿ ನಡೆದ ದಾಳಿ ರಾಮಣ್ಣನ ಕ್ರೌರ್ಯವನ್ನು ಬಿಂಬಿಸುವ ಮತ್ತೊಂದು ಕಾರ್ಯಾಚರಣೆ. ಸಿಆರ್‌ಪಿಎಫ್ ವಾಹನ ಸಾಲಿನ ಮೇಲೆ ದಾಳಿ ನಡೆಸಿದ ನಕ್ಸಲರು ಮೂವರು ನಾಗರಿಕರೂ ಸೇರಿ 12 ಮಂದಿಯನ್ನು ಕೊಂದಿದ್ದರು. ಹುತಾತ್ಮರಾದ ಯೋಧರೊಬ್ಬರ ಹೊಟ್ಟೆಯೊಳಗೆ 1.5 ಕೆ.ಜಿ. ತೂಕದ ಅತ್ಯಾಧುನಿಕ ಸ್ಫೋಟಕ ಇರಿಸಿದ್ದ ರಾಮಣ್ಣ. ಅಕಸ್ಮಾತ್ ಅದೇನಾದರೂ ಸಿಡಿಸಿದ್ದರೆ ಮರಣೋತ್ತರ ಪರೀಕ್ಷೆ ಮಾಡುತ್ತಿದ್ದ ವೈದ್ಯಕೀಯ ಸಿಬ್ಬಂದಿಯಷ್ಟೇ ಅಲ್ಲ, ಆಸ್ಪತ್ರೆಯಲ್ಲಿದ್ದ ಹಲವರು ಸಾವನ್ನಪ್ಪುತ್ತಿದ್ದರು.

ಅದೇ ವರ್ಷ ಝೀರಂ ಘಾಟಿಯಲ್ಲಿ ನಡೆದ ಮತ್ತೊಂದು ದಾಳಿ ಛತ್ತೀಸ್‌ಗಡದ ಕಾಂಗ್ರೆಸ್ ನಾಯಕತ್ವವನ್ನೇ ಹೊಸಕಿಹಾಕಿತ್ತು. ಸತ್ತ 35 ಮಂದಿಯಲ್ಲಿ ಕೇಂದ್ರ ಸಚಿವ ವಿದ್ಯಾಚರಣ್ ಶುಕ್ಲಾ, ನಾಯಕರಾದ ಮಹೇಂದ್ರ ಕರ್ಮ ಮತ್ತು ನಂದಕುಮಾರ್ ಪಟೇಲ್ ಸೇರಿದ್ದರು. ದಾಳಿಗೆ ಹೆದರಿಗೆ ನಕ್ಸಲರಿಗೆ ಶರಣಾಗಿದ್ದ ಮಹೇಂದ್ರ ಕರ್ಮ ಅವರನ್ನು 70 ಬಾರಿ ಇರಿದು ಕೊಲ್ಲಲಾಗಿತ್ತು. ಛತ್ತೀಸ್‌ಗಡದಲ್ಲಿ ಸಾಲ್ವಜುದಂ ಹುಟ್ಟುಹಾಕಿ, ಬುಡಕಟ್ಟು ಜನರ ನೆಮ್ಮದಿ ಕಿತ್ತುಕೊಂಡಿದ್ದ ಮಹೇಂದ್ರ ಕರ್ಮ ಮೇಲೆ ಅಷ್ಟು ಸಿಟ್ಟಿತ್ತು ಅಲ್ಲಿನ ಜನರಿಗೆ.

ನಕ್ಸಲ್ ನಾಯಕ ರಾಮಣ್ಣ

ಹಫ್ತಾ ವಸೂಲಿ

ರಾಮಣ್ಣನ ನೇತೃತ್ವದಲ್ಲಿ ಮಾವೋವಾದಿಗಳ ದಾಳಿಗಳಿಂದಾಗಿ ಬಸ್ತಾರ್ ಪ್ರದೇಶದಲ್ಲಿ ಅಭಿವೃದ್ಧಿ ಪ್ರಯತ್ನಗಳಿಗೆ ವ್ಯಾಪಕ ಹಿನ್ನಡೆಯಾಯಿತು. ರಸ್ತೆಗಳನ್ನು ಹಾಳುಮಾಡುವುದು, ಸೇತುವೆಗಳನ್ನು ಹಾಳು ಮಾಡುವುದು ಸಾಮಾನ್ಯವಾಗಿತ್ತು. ಮೇ 2007ರಲ್ಲಿ ಮೂರು ಹೈಟೆನ್ಷನ್ ವೈರ್ ಗೋಪುರಗಳನ್ನು ಸ್ಫೋಟಿಸಿದ ನಂತರ ಬಸ್ತಾರ್ ಪ್ರದೇಶ ಅಕ್ಷರಶಃ ಕತ್ತಲಲ್ಲಿ ಮುಳುಗಿತ್ತು. 11 ದಿನಗಳವರೆಗೆ ಅತ್ಯಗತ್ಯ ಸೇವೆಗಳು ಜನರಿಗೆ ಸಿಗಲಿಲ್ಲ.

ರಾಮಣ್ಣನ ಕಾರ್ಯಾಚರಣೆ ಬಸ್ತಾರ್‌ನ ಶ್ರೀಮಂತ ಬುಡಕಟ್ಟು ಸಂಸ್ಕೃತಿಗೂ ಧಕ್ಕೆ ತಂದಿತು. 1980ರಲ್ಲಿಯೇ ಮಾವೋವಾದಿಗಳು ಘೋಟುಲ್ (ಯುವಜನರ ಸ್ವಾತಂತ್ರ್ಯ) ಸಂಪ್ರದಾಯ ಮತ್ತು ವಾರದ ಸಂತೆಗಳನ್ನು ನಿಷೇಧಿಸಿದ್ದರು. ನಂತರದ ದಿನಗಳಲ್ಲಿ ಮಾವೋವಾದಿಗಳಿಗೆ ಮಾಮೂಲಿ ಕೊಡದ ವ್ಯಾಪಾರಿಗಳನ್ನು ಕೊಲ್ಲುವ ಹಂತಕ್ಕೂ ಇದು ಬೆಳೆಯಿತು.

ರಾಮಣ್ಣನ ನಾಯಕತ್ವದಲ್ಲಿಯೇ ಮಾವೋವಾದಿಗಳು ತೆಂಡುಪಟ್ಟಾ (ಬೀಡಿ ಕಟ್ಟಲು ಬಳಸುವ ಎಲೆ) ಗುತ್ತಿಗೆದಾರರಿಂದ ಪ್ರತಿಚೀಲಕ್ಕೆ ಇಷ್ಟು ಎಂದು ಮಾಮೂಲಿ ವಸೂಲಿ ಆರಂಭಿಸಿದ್ದು. ಬುಡಕಟ್ಟು ಜನರೂ ತಮ್ಮ ಆದಾಯದಲ್ಲಿ ಇಂತಿಷ್ಟು ಭಾಗವನ್ನು ನಕ್ಸಲರಿಗೆ ಕೊಡಬೇಕು ಎಂದು ತಾಕೀತು ಮಾಡಿದ್ದು. ದಂಡಕಾರಣ್ಯದಲ್ಲಿ ಮಾವೋವಾದಿಗಳ ವಾರ್ಷಿಕ ಖರ್ಚು ₹ 12 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೇವಲ ತೆಂಡುಪಟ್ಟಾದಿಂದ ಅವರು ಗಳಿಸುವ ಆದಾಯವೇ ₹ 50 ಲಕ್ಷ ದಾಟುತ್ತದೆ ಎನ್ನುತ್ತಾರೆ ಛತ್ತೀಸ್‌ಗಡದಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಆರ್.ಕೆ. ವಿಜ್.

ಪ್ರಾತಿನಿಧಿಕ ಚಿತ್ರ

ಹೊಸಬರು ಬರುತ್ತಿಲ್ಲ

ನಕ್ಸಲ್ ಸಂಘಟನೆಗೆ ಯುವಜನರನ್ನು ಆಕರ್ಷಿಸುವ ಚುಂಬಕ ಶಕ್ತಿಯಾಗಿದ್ದ ರಾಮಣ್ಣನಿಗೆ ಭದ್ರತಾಪಡೆಗಳ ಮೇಲೆ ಮಾರಣಾಂತಿಕ ದಾಳಿಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರುವ ಚಾಕಚಕ್ಯತೆ ಇತ್ತು. ಇವನ ಕಟ್ಟರ್ ವಿಚಾರಧಾರೆ ಮತ್ತು ಸಂಘಟನಾತ್ಮಕ ಶಕ್ತಿಗೆ ಮಾರುಹೋಗುತ್ತಿದ್ದ ಬುಡಕಟ್ಟು ಜನರು ಸಂಘಟನೆಯ ತೆಕ್ಕೆಗೆ ಬರುತ್ತಿದ್ದರು. ಆದರೆ, ರಾಮಣ್ಣ ಸಾವಿನ ನಂತರ ಅಂಥವರನ್ನು ಬಳಸಿಕೊಂಡು ದಾಳಿ ಸಂಘಟಿಸುವ ಮಿದುಳೇ ಇಲ್ಲದಂತಾಗಿದೆ.

ಅಷ್ಟು ಮಾತ್ರವಲ್ಲ, ಹೊಸ ತಲೆಮಾರಿನ ಬುಡಕಟ್ಟು ಜನರು ನಕ್ಸಲ್ ಚಳವಳಿಯೊಂದಿಗೆ ಮೊದಲಿನಂತೆ ಗುರುತಿಸಿಕೊಳ್ಳುತ್ತಿಲ್ಲ. 2017ರಲ್ಲಿ ದೇಶದಲ್ಲಿ ಒಟ್ಟು 6000 ಸಶಸ್ತ್ರ ನಕ್ಸಲ್ ಪ್ರಭಾವಿತರಿದ್ದರು. ಈಗ ಅವರ ಸಂಖ್ಯೆ 3500ಕ್ಕೆ ಇಳಿದಿದೆ. ಈ ಪೈಕಿ ಬಹುತೇಕರು ರಾಮಣ್ಣನ ಮೋಡಿಗೆ ಸೋತು ಸಂಘಟನೆಯ ತೆಕ್ಕೆಗೆ ಸೇರಿಕೊಂಡಿದ್ದರು. ಆದರೆ ಈಗ ರಾಮಣ್ಣನೇ ಇಲ್ಲ. ಪ್ರಸ್ತುತ ದೇಶದ 60 ಜಿಲ್ಲೆಗಳಲ್ಲಿ ನಕ್ಸಲರ ಪ್ರಭಾವ ಕಾಣಿಸುತ್ತಿದೆ. 10 ಜಿಲ್ಲೆಗಳಿಗೆ ಅವರ ಚಟುವಟಿಕೆಗಳು ಸೀಮಿತಗೊಂಡಿವೆ ಎಂದು ಕಳೆದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು.

ಪ್ರಾತಿನಿಧಿಕ ಚಿತ್ರ

ಯಾರು ಉತ್ತರಾಧಿಕಾರಿ?

ಸಂಘಟನೆಯನ್ನು ತನ್ನ ಬಿಗಿ ಹಿಡಿತದಲ್ಲಿರಿಸಿಕೊಂಡಿದ್ದ ರಾಮಣ್ಣನ ಸಾವಿನ ನಂತರ ಮಾವೋವಾದಿಗಳಲ್ಲಿ ಅಂತಃಕಲಹ ನಡೆಯಬಹುದು ಎಂದು ಛತ್ತೀಸ್‌ಗಡ ಪೊಲೀಸರು ಶಂಕಿಸಿದ್ದಾರೆ. ಬಸ್ತಾರ್‌ನಲ್ಲಿ ರಾಮಣ್ಣನ ಸ್ಥಾನವನ್ನು ಮತ್ತೋರ್ವ ನಾಯಕ ಮದ್ಕಮ್ ಹಿದ್ಮಾ ತುಂಬಬಹುದು ಎಂದು ಹೇಳಲಾಗುತ್ತಿದೆ. ಸ್ಥಳೀಯರಲ್ಲಿ ವ್ಯಾಪಕ ಬೆಂಬಲ ಹೊಂದಿರುವ ಮದ್ಕಮ್ ಹಿದ್ಮಾ, ಸುಕ್ಮಾ ಮೂಲದವ. ಆದರೆ ಸಂಘಟನೆಯನ್ನು ಮುನ್ನಡೆಸುವಷ್ಟು ಸಂಘಟನಾತ್ಮಕ ಅಥವಾ ರಾಜಕೀಯ ಸಾಮರ್ಥ್ಯ ಇದೆ ಎಂದು ಈವರೆಗೂ ಸಾಬೀತುಪಡಿಸಿಲ್ಲ. ರಾಮಣ್ಣನಂಥದ್ದೇ ವ್ಯಕ್ತಿತ್ವ ರೂಢಿಸಿಕೊಂಡಿರುವ ಹಿದ್ಮಾಗೆ, ತನಗಿರುವ ಆದಿವಾಸಿ ಅಸ್ಮಿತೆಯೇ ಕುತ್ತಾಗಬಹುದು ಎಂಬ ವಿಶ್ಲೇಷಣೆಗಳೂ ಚಾಲ್ತಿಯಲ್ಲಿವೆ.

ಈವರೆಗೂ ಕೇಂದ್ರ ಸಮಿತಿಯಲ್ಲಿ ಬಹುತೇಕ ಆಂಧ್ರ ಮತ್ತು ತೆಲಂಗಾಣಗಳಿಂದ ಬಂದವರೇ ಇರುತ್ತಿದ್ದರು. ಛತ್ತೀಸ್‌ಗಡದ ಸ್ಥಳೀಯರಿಗೆ ಅವಕಾಶ ಸಿಗುವುದು ಅಪರೂಪ. ಈಗ ದೇಶದಲ್ಲಿ ಮಾವೋವಾದಿ ಚಟುವಟಿಕೆಗಳು ಕುಂಠಿತಗೊಂಡಿವೆ. ದಂಡಕಾರಣ್ಯದಲ್ಲಿಯೂ ಹೊಸಬರು ಸಂಘಟನೆಗೆ ಸೇರುತ್ತಿಲ್ಲ. ಸಿಪಿಐ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಗಣಪತಿ ನಿವೃತ್ತರಾಗಿದ್ದು ಮತ್ತು ರಾಮಣ್ಣನ ಸಾವು ನಕ್ಸಲರಲ್ಲಿ ನಾಯಕತ್ವ ಬಿಕ್ಕಟ್ಟು ತಲೆದೋರುವಂತೆ ಮಾಡಿವೆ.

‘ಈಗ ನಮ್ಮ ಸಶಸ್ತ್ರಪಡೆಗಳು, ಸರ್ಕಾರ ಚುರುಕಾಗಬೇಕು. ನಕ್ಸಲರ ಬಿಗಿ ಹಿಡಿತ ಇರುವ ಪ್ರದೇಶಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಸುವ ಜೊತೆಜೊತೆಗೆ ಅಭಿವೃದ್ಧಿ ಯೋಜನೆಗಳನ್ನು ಕ್ಷಿಪ್ರವಾಗಿ ಯೋಜಿಸಿ ಘೋಷಿಸಬೇಕು. ಆಗ ಮಾತ್ರ ಛತ್ತೀಸ್‌ಗಡದಲ್ಲಿ ನಕ್ಸಲ್ ಪ್ರಭಾವಕ್ಕೆ ದೊಡ್ಡಮಟ್ಟದಲ್ಲಿ ಕಡಿವಾಣ ಹಾಕಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ವಿಜ್.

ಸರ್ಕಾರ ಸ್ಪಂದಿಸದೆ ಶಾಂತಿ ನೆಲೆಸದು... (ಪ್ರಾತಿನಿಧಿಕ ಚಿತ್ರ)

ನೆಲೆಸೀತೆ ಶಾಂತಿ

ರಾಮಣ್ಣನಂಥ ವ್ಯಕ್ತಿಯನ್ನು ಛತ್ತೀಸ್‌ಗಡದ ಬುಡಕಟ್ಟು ಜನರು ಒಪ್ಪಿಕೊಳ್ಳಲು, ಅವನ ನಾಯಕತ್ವದಲ್ಲಿ ನಡೆದ ದಾಳಿಗಳಲ್ಲಿ ದೊಡ್ಡಮಟ್ಟದಲ್ಲಿ ಪಾಲ್ಗೊಳ್ಳಲು ಕಾರಣವಾಗಿದ್ದು ಸಾಲ್ವ ಜುದಂ. ಬುಡಕಟ್ಟು ಜನರಲ್ಲಿಯೇ ಒಂದಿಷ್ಟು ಮಂದಿಯನ್ನು ಪ್ರತ್ಯೇಕಿಸಿ, ಅವರ ಕೈಗೆ ಬಂದೂಕು ಕೊಟ್ಟು, ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಬಳಸಿಕೊಳ್ಳುವ ಈ ದಳಗಳ ಉಪಟಳಕ್ಕೆ ಜನರು ರೋಸಿಹೋಗಿದ್ದರು. ಜನರನ್ನು ಬೇಕಾಬಿಟ್ಟಿ ಒಕ್ಕಲೆಬ್ಬಿಸುವುದು, ಭ್ರಷ್ಟಾಚಾರ, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರಗಳಿಂದಾಗಿ ಜನರಲ್ಲಿ ಮಡುಗಟ್ಟಿದ್ದ ಸಿಟ್ಟು ಅವರ ರಟ್ಟೆಗೆ ಬರುವಂತೆ ಮಾಡಿದ್ದು ರಾಮಣ್ಣನ ಚಾಕಚಕ್ಯತೆ.

ಈಗ ಛತ್ತೀಸ್‌ಗಡ ಬದಲಾಗಿದೆ. ನಕ್ಸಲ್ ಚಳವಳಿಗೆ ಸೇರಲು ಮೊದಲಿನಂತೆ ಜನರು ಒಲವು ತೋರುತ್ತಿಲ್ಲ. ಸಂಘಟನಾತ್ಮಕ ಚಾಕಚಕ್ಯತೆ ಇರುವ ನಾಯತ್ವದ ಕೊರತೆಯೂ ಇದೆ. ಇನ್ನಾದರೂ ಛತ್ತೀಸ್‌ಗಡದಲ್ಲಿರುವ ಕಾಂಗ್ರೆಸ್ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ಕೈಜೋಡಿಸಿ ಅಭಿವೃದ್ಧಿ ಯೋಜನೆಗಳನ್ನು ಆದ್ಯತೆ ಮೇರೆಗೆ ಘೋಷಿಸಿ, ಅನುಷ್ಠಾನಕ್ಕೆ ತರಬೇಕು. ಕೇವಲ ಬಂದೂಕಿನಿಂದ ಜನರ ಸಿಟ್ಟು ತಣಿಯದು. ಅದಕ್ಕೆ ಬದುಕು ಸುಧಾರಿಸುವ ಕನಸು ಬಿತ್ತಬೇಕು. ಅವರು ಇಷ್ಟಪಡುವಂಥ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆಯ ಅಭಿವೃದ್ಧಿ ಮಂತ್ರಬೇಕು.

(ಸುಧಾ ವಾರಪತ್ರಿಕೆಯ 9ನೇ ಜನವರಿ 2019ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT