ನವದೆಹಲಿ: ಲೋಕಸಭಾ ಸಚಿವಾಲಯವು ಲಕ್ಷದ್ವೀಪದ ಎನ್‌ಸಿಪಿ ಸಂಸದ ಮೊಹಮ್ಮದ್ ಫೈಜಲ್ ಪಿ.ಪಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಬುಧವಾರ ಅನರ್ಹಗೊಳಿಸಿದೆ.
ಕೊಲೆ ಯತ್ನ ಪ್ರಕರಣವೊಂದರಲ್ಲಿ ಮೊಹಮ್ಮದ್ ಫೈಜಲ್ ಪಿ.ಪಿ ಅವರಿಗೆ ಶಿಕ್ಷೆ ವಿಧಿಸಿ ನೀಡಿದ್ದ ತೀರ್ಪನ್ನು ಅಮಾನತುಗೊಳಿಸಿ ತಾನು ನೀಡಿದ್ದ ಆದೇಶವನ್ನು ಕೇರಳ ಹೈಕೋರ್ಟ್ ಅಕ್ಟೋಬರ್ 3ರಂದು ರದ್ದುಪಡಿಸಿದ ಕಾರಣ, ಈ ಕ್ರಮ ಕೈಗೊಳ್ಳಲಾಗಿದೆ.
ಫೈಜಲ್ ಅವರಿಗೆ ಶಿಕ್ಷೆ ವಿಧಿಸಿ ನೀಡಿದ್ದ ತೀರ್ಪನ್ನು ಅಮಾನತುಗೊಳಿಸಿ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಕೇರಳ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೂಚಿಸಿತ್ತು.
ಕೇಂದ್ರದ ಮಾಜಿ ಸಚಿವ ದಿವಂಗತ ಪಿ.ಎಂ.ಸಯೀದ್ ಅವರ ಅಳಿಯ ಮೊಹಮ್ಮದ್ ಸಲೀಹ್ ಅವರನ್ನು 2009ರಲ್ಲಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಫೈಜಲ್ ಅವರು ತಪ್ಪಿತಸ್ಥ ಎಂದು ಘೋಷಿಸಿದ್ದ ಸೆಷನ್ಸ್ ಕೋರ್ಟ್, ಫೈಜಲ್ ಹಾಗೂ ಇತರ ಮೂವರಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ತಲಾ ₹ 10 ಲಕ್ಷ ದಂಡ ವಿಧಿಸಿ ಆದೇಶಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.