ಕೋಟಾ: ಇಲ್ಲಿ ‘ನೀಟ್– ಯುಜಿ’ಗೆ ಸಿದ್ಧತೆ ನಡೆಸುತ್ತಿದ್ದ 21 ವರ್ಷದ ವಿದ್ಯಾರ್ಥಿ ಕೊಠಡಿಯಲ್ಲಿ ಬುಧವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಮೂಲಕ, ಕೋಟಾದಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಇಲ್ಲಿಯವರೆಗೆ 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಾಗಿದೆ. 2023ರಿಂದ ಇಲ್ಲಿಯವರೆಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬರ್ಸಾನದ ನಿವಾಸಿಯಾದ ಪರಶುರಾಮ ಜಾತವ್ (21) ಮೃತ ವಿದ್ಯಾರ್ಥಿ. ಕೋಟಾದಲ್ಲಿ ನೀಟ್ ತರಬೇತಿ ಪಡೆಯುತ್ತಿದ್ದ ಅವರು, ಅಲ್ಲಿನ ಮನೆಯೊಂದರ ಕೊಠಡಿಯಲ್ಲಿ ಬಾಡಿಗೆಗಿದ್ದರು.
‘ನನ್ನ ಮಗನ ಸಾವಿಗೆ ನೀಟ್– ಯುಜಿ 2024ರ ಹಗರಣ ಕಾರಣ’ ಎಂದು ಮೃತ ವಿದ್ಯಾರ್ಥಿಯ ತಂದೆ ಖಚರ್ಮಲ್ ಆರೋಪಿಸಿದ್ದಾರೆ.
‘ಈ ವರ್ಷ ನಡೆದ ನೀಟ್ ಪರೀಕ್ಷೆಯ ಮೊದಲ ಫಲಿತಾಂಶದಲ್ಲಿ ಪರಶುರಾಮ 647 ಅಂಕಗಳನ್ನು ಪಡೆದಿದ್ದ. ಆದರೆ ಪರಿಷ್ಕೃತ ಫಲಿತಾಂಶದಲ್ಲಿ ಅಂಕಗಳು 247ಕ್ಕೆ ಇಳಿಕೆಯಾದವು. ಇದರಿಂದ ಮಗ ಖಿನ್ನತೆಗೆ ಒಳಗಾಗಿದ್ದ’ ಎಂದು ಖಚರ್ಮಲ್ ದೂರಿದರು.
‘ನೀಟ್ ಪರೀಕ್ಷೆಯಲ್ಲಿ ಕುತಂತ್ರ ಮಾಡಿದ ನೀಟ್ ಪರೀಕ್ಷಾ ಏಜೆನ್ಸಿ ಮತ್ತು ಶ್ರೀಮಂತರು ನನ್ನ ಮಗನನ್ನು ಕೊಂದಿದ್ದಾರೆ’ ಎಂದು ಅವರು ಆರೋಪಿಸಿದರು.