ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್ ಪಾವಿತ್ರ್ಯಕ್ಕೆ ಧಕ್ಕೆ: ಸುಪ್ರೀಂ ಕೋರ್ಟ್‌ ಕಳವಳ

ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ, ಎನ್‌ಟಿಎಗೆ ಸೂಚನೆ
Published 11 ಜೂನ್ 2024, 15:19 IST
Last Updated 11 ಜೂನ್ 2024, 15:19 IST
ಅಕ್ಷರ ಗಾತ್ರ

ನವದೆಹಲಿ: ‘ನೀಟ್‌–ಯುಜಿ 2024’ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮಗಳ ಕಾರಣದಿಂದ ಹೊಸದಾಗಿ ಪರೀಕ್ಷೆ ನಡೆಸಬೇಕು ಎಂಬ ಕೋರಿಕೆ ಇರುವ ಅರ್ಜಿಯ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸೂಚನೆ ನೀಡಿದೆ.

ಆದರೆ ಎಂಬಿಬಿಎಸ್‌, ಬಿಡಿಎಸ್ ಹಾಗೂ ಇತರ ಕೋರ್ಸ್‌ಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸುವುದಕ್ಕೆ ತಡೆ ನೀಡಲು ನಿರಾಕರಿಸಿದೆ.

ನೀಟ್‌ ಪರೀಕ್ಷೆ ಕುರಿತ ಆರೋಪಗಳನ್ನು ಗಮನಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು, ಬಹಳ ಪವಿತ್ರವಾದ ಕೆಲಸವನ್ನು ಮಾಡುವ ಹೊಣೆ ಎನ್‌ಟಿಎ ಮೇಲಿತ್ತು ಎಂದು ಹೇಳಿತು. ‘ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ. ಹೀಗಾಗಿ ನಮಗೆ ಉತ್ತರ ಬೇಕಾಗಿದೆ’ ಎಂದು ಪೀಠ ಹೇಳಿತು.

ನೀಟ್‌ ಪರೀಕ್ಷೆ ವೇಳೆ ಬಿಹಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಇರುವ ಕಾರಣ ಬಿಹಾರ ಸರ್ಕಾರಕ್ಕೆ ಕೂಡ ನೋಟಿಸ್ ಜಾರಿಗೆ ಪೀಠ ಆದೇಶಿಸಿದೆ. ಶಿವಾಂಗಿ ಮಿಶ್ರಾ ಮತ್ತು ಇತರ ಕೆಲವು ಎಂಬಿಬಿಎಸ್ ಸೀಟು ಆಕಾಂಕ್ಷಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು.

ನೀಟ್‌–ಯುಜಿ 2024 ಪರೀಕ್ಷೆಯು ಮೇ 5ರಂದು ನಡೆದಿದೆ. ಫಲಿತಾಂಶವನ್ನು ಜೂನ್ 4ರಂದು ಪ್ರಕಟಿಸಲಾಗಿದೆ.

‘ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು, ಭಾರಿ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವು ಪರೀಕ್ಷೆಗೆ ಮೊದಲೇ ಸಿಕ್ಕಿದ್ದವು, ಆ ವಿದ್ಯಾರ್ಥಿಗಳು ಯಶಸ್ಸು ಕಂಡಿದ್ದಾರೆ ಎಂಬ ಆರೋಪ ಇದೆ. 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ, ಲಭ್ಯವಿರುವ ಸೀಟುಗಳ ಸಂಖ್ಯೆ ಒಂದು ಲಕ್ಷ. 67 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ಲಭಿಸಿದೆ. ಕೌನ್ಸೆಲಿಂಗ್‌ಗೆ ತಡೆ ನೀಡಲು ಕೋರ್ಟ್‌ ನಿರಾಕರಿಸಿದೆ’ ಎಂದು ವಿದ್ಯಾರ್ಥಿಗಳ ಪರ ವಕೀಲ ಮ್ಯಾಥ್ಯೂಸ್ ಜೆ. ನೆಡುಂಪಾರ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪರೀಕ್ಷೆಯ ಫಲಿತಾಂಶವನ್ನು ಹಿಂಪಡೆಯುವಂತೆ ಎನ್‌ಟಿಎಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳು ಮತ್ತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎನ್‌ಟಿಎ ಹಾಗೂ ಕೇಂದ್ರಕ್ಕೆ ಸೂಚನೆ ನೀಡುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT