ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನೀಟ್‌–ಯುಜಿ’ ಕೌನ್ಸೆಲಿಂಗ್‌: ತಿಂಗಳ ಕೊನೆಗೆ ಆರಂಭ?

ಹೊಸ ಕಾಲೇಜುಗಳ ಸೀಟುಗಳು ಸೇರ್ಪಡೆಯಾಗುವ ನಿರೀಕ್ಷೆ
Published 6 ಜುಲೈ 2024, 14:49 IST
Last Updated 6 ಜುಲೈ 2024, 14:49 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ‘ನೀಟ್‌–ಯುಜಿ’ ಕೌನ್ಸೆಲಿಂಗ್‌ ಪ್ರಕ್ರಿಯೆಯು ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಕೌನ್ಸೆಲಿಂಗ್‌ ಪ್ರಕ್ರಿಯೆಗೆ ಜುಲೈ ಮೊದಲ ವಾರದಲ್ಲಿಯೇ ಚಾಲನೆ ದೊರೆಯವ ಸಾಧ್ಯತೆ ಇತ್ತು. ಆದರೆ, ಈ ಕುರಿತು ಅಧಿಕಾರಿಗಳು ಯಾವುದೇ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟಿಸದ ಕಾರಣ ಅದು ವಿಳಂಬವಾಗಿದೆ.

‘ಕೆಲ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚುವರಿ ಸೀಟುಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಈ ಸೀಟುಗಳು ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿಯೇ ದೊರೆಯುವ ನಿರೀಕ್ಷೆಯಿದೆ. ಅದು ಖಚಿತವಾದ ಕೂಡಲೇ ಕೌನ್ಸೆಲಿಂಗ್‌ನ ದಿನಾಂಕ ಪ್ರಕಟಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

‘ಕೌನ್ಸೆಲಿಂಗ್‌ ಪ್ರಕ್ರಿಯೆಯು ಈ ತಿಂಗಳ ಕೊನೆಯಲ್ಲಿ ಆರಂಭವಾಗಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 5ರಂದು ನಡೆದಿದ್ದ ನೀಟ್‌– ಯುಜಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ವ್ಯಕ್ತವಾದ ಬೆನ್ನಲ್ಲೇ, ಪರೀಕ್ಷೆ ರದ್ದುಗೊಳಿಸಲು ಮತ್ತು ಮರು ಪರೀಕ್ಷೆ ನಡೆಸಲು ಬೇಡಿಕೆ ವ್ಯಕ್ತವಾಗಿತ್ತು. ಈ ಕುರಿತು ಕೆಲವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತ್ತು. ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ, ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಪ್ರಮಾಣಪತ್ರ ಸಲ್ಲಿಸಿವೆ. ಮೇ 5ರ ನೀಟ್‌ ಪರೀಕ್ಷೆ ರದ್ದುಪಡಿಸುವುದು ತರ್ಕಬದ್ಧ ಕ್ರಮವಲ್ಲ ಎಂದು ತಿಳಿಸಿತ್ತು.

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

‘ನೀಟ್’ ಮರು ಪರೀಕ್ಷೆಗೆ ಕಾಂಗ್ರೆಸ್‌ ಆಗ್ರಹ

ನವದೆಹಲಿ (ಪಿಟಿಐ): ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳು ನಡೆದಿರುವ ‘ನೀಟ್‌–ಯುಜಿ’ ಅನ್ನು ಮತ್ತೊಮ್ಮೆ ಪಾರದರ್ಶಕವಾಗಿ ನಡೆಸಬೇಕು ಎಂದು ಶನಿವಾರ ಆಗ್ರಹಿಸಿರುವ ಕಾಂಗ್ರೆಸ್‌ ಪರೀಕ್ಷಾ ಅಕ್ರಮಗಳ ಕುರಿತು ಸುಪ್ರೀಂ ಕೊರ್ಟ್‌ನ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ. ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರವು ‘ನೀಟ್‌–ಯುಜಿ’ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಮೂಲಕ ಅದು ಹಸಿ ಸುಳ್ಳನ್ನು ಹೇಳಿದ್ದು ಲಕ್ಷಾಂತರ ಯುವ ಜನರ ಭವಿಷ್ಯವನ್ನು ಹಾಳು ಮಾಡುತ್ತಿದೆ’ ಎಂದು ಕಿಡಿಕಾರಿದ್ದಾರೆ. ‘ಅಕ್ರಮಗಳು ಮತ್ತು ವಂಚನೆಗಳು ಕೆಲ ಸ್ಥಳಗಳಲ್ಲಿ ಮಾತ್ರ ನಡೆದಿದೆ ಎಂದು ಶಿಕ್ಷಣ ಸಚಿವಾಲಯ ಹೇಳಿದೆ. ಈ ಮೂಲಕ ಅದು ದಾರಿತಪ್ಪಿಸುವ ಯತ್ನ ನಡೆಸುತ್ತಿದೆ’ ಎಂದು ಖರ್ಗೆ ದೂರಿದ್ದಾರೆ. ‘ಬಿಜೆಪಿ– ಆರ್‌ಎಸ್‌ಎಸ್‌ ಇಡೀ ಶಿಕ್ಷಣ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ಮೂಲಕ ಶಿಕ್ಷಣ ಮಾಫಿಯಾವನ್ನು ಉತ್ತೇಜಿಸುತ್ತಿವೆ’ ಎಂದು ಅವರು ಹೇಳಿದ್ದಾರೆ. ‘ಎನ್‌ಸಿಇಆರ್‌ಟಿ ಪುಸ್ತಕಗಳ ಮೂಲಕ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ಮೋದಿ ಸರ್ಕಾರ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಲು ಮುಂದಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ಸುಪ್ರೀಂಗೆ ಅಫಿಡವಿಟ್‌ ಸಲ್ಲಿಸಿದ ಬಿಹಾರ

ನವದೆಹಲಿ: ಮೇ 5ರಂದು ನಡೆದ ‘ನೀಟ್‌–ಯುಜಿ’ಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇತರ ಅಕ್ರಮಗಳ ಕುರಿತ ಆರೋಪದ ಬಗ್ಗೆ ತನಿಖೆ ನಡೆಸಿದ ಬಿಹಾರದ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದು ಅವರಿಂದ ಮೊಬೈಲ್‌ ಫೋನ್‌ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಸಂಬಂಧ ಬಿಹಾರ ಸರ್ಕಾರ ಅಫಿಡವಿಟ್‌ ಸಲ್ಲಿಸಿದೆ. ಪ್ರಸ್ತುತ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT