ತಿರುವನಂತಪುರ: ಶಾಲೆಗಳಲ್ಲಿ ಹೊಸ ಮಾದರಿಯ ಸಮವಸ್ತ್ರ ಪರಿಚಯಿಸುವ ಲಕ್ಷದ್ವೀಪ ಆಡಳಿತದ ಕ್ರಮವನ್ನು ಕಾಂಗ್ರೆಸ್ ಶನಿವಾರ ಖಂಡಿಸಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಸಮವಸ್ತ್ರಕ್ಕೆ ಸಂಬಂಧಿಸಿದ ಹೊಸ ನಿಯಮಾವಳಿಗಳಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳ ಹಿಜಾಬ್ ಮತ್ತು ಶಿರವಸ್ತ್ರಕ್ಕೆ ಸಂಬಂಧಿಸಿದಂತೆ ಮೌನ ವಹಿಸಲಾಗಿದೆ. ಇದು ಮುಸ್ಲಿಮ್ ಬಾಹುಳ್ಯದ ಲಕ್ಷದ್ವೀಪದ ಸಂಸ್ಕೃತಿ ಮತ್ತು ಜನರ ಜೀವನ ಶೈಲಿಯನ್ನು ಧ್ವಂಸಗೊಳಿಸಲಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಂಸದ ಹಮ್ದುಲ್ಲಾ ಸಯೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಸುತ್ತೋಲೆ: ಲಕ್ಷದ್ವೀಪ ಆಡಳಿತ ವ್ಯಾಪ್ತಿಯ ಶಾಲೆಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರಿಗೆ ಶಿಕ್ಷಣ ಇಲಾಖೆಯ ಆಗಸ್ಟ್ 10ರಂದು ಸುತ್ತೋಲೆ ಹೊರಡಿಸಿದ್ದು, ‘ಸಮವಸ್ತ್ರದಲ್ಲಿ ಏಕರೂಪತೆ ಖಾತ್ರಿಪಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದೆ.
‘ನಿಗದಿತ ಸಮವಸ್ತ್ರ ಹೊರತುಪಡಿಸಿ ಇತರ ಬಟ್ಟೆಗಳನ್ನು ಧರಿಸುವುದು ಶಾಲಾ ಮಕ್ಕಳ ಏಕರೂಪ ಪರಿಕಲ್ಪನೆಯ ಮೇಲೆ ಪರಿಣಾಮ ಬೀರುತ್ತದೆ. ಶಾಲೆಗಳಲ್ಲಿ ಶಿಸ್ತು ಮತ್ತು ಏಕರೂಪದ ವಸ್ತ್ರ ಸಂಹಿತೆ ಕಾಪಾಡಿಕೊಳ್ಳುವುದು ಶಾಲೆಗಳ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ’ ಎಂದು ಸುತ್ತೋಲೆ ಹೇಳಿದೆ.
ಸೂಚಿಸಿರುವ ನಿಯಮಾವಳಿಗಳನ್ನು ಪಾಲಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸುವುದಾಗಿಯೂ ಶಿಕ್ಷಣ ಇಲಾಖೆ ಹೇಳಿದೆ.
ಲಕ್ಷದ್ವೀಪದ ಸಂಸದ, ಎನ್‌ಸಿಪಿ ನಾಯಕ ಮೊಹಮದ್ ಫಯಾಜ್ ಅವರೂ ಹೊಸ ಸಮವಸ್ತ್ರ ನಿಯಮಾವಳಿಗಳನ್ನು ವಿರೋಧಿಸಿದ್ದಾರೆ.
ಮದ್ಯದಂಗಡಿಗೆ ಅನುಮತಿ: ವಿರೋಧ
ದ್ವೀಪ ಸಮೂಹಗಳಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಿರುವ ಲಕ್ಷದ್ವೀಪ ಆಡಳಿತದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇದರ ವಿರುದ್ಧ ಕಾಂಗ್ರೆಸ್ ಈಗಾಗಲೇ ಪ್ರತಿಭಟನೆಯನ್ನೂ ನಡೆಸಿದೆ.
ಉದ್ದೇಶಿತ ಅಬಕಾರಿ ನಿಯಂತ್ರಣ ಮಸೂದೆಯ ಕರಡನ್ನು ಲಕ್ಷದ್ವೀಪ ಆಡಳಿತವು ಆಗಸ್ಟ್ 3 ರಂದು ಪ್ರಕಟಿಸಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಕೋರಿದೆ.