ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದೀಕರಣ: ಎನ್‌ಎಚ್‌ಎಐಗೆ ₹ 2 ಲಕ್ಷ ಕೋಟಿ ಆದಾಯ ಸಾಧ್ಯತೆ

2024ರಿಂದ 2027ರ ವರೆಗಿನ ಅವಧಿಯಲ್ಲಿ ನಗದೀಕರಣಕ್ಕೆ ಅವಕಾಶ: ಕೇರ್‌ ಎಡ್ಜ್‌
Published 29 ಸೆಪ್ಟೆಂಬರ್ 2023, 14:39 IST
Last Updated 29 ಸೆಪ್ಟೆಂಬರ್ 2023, 14:39 IST
ಅಕ್ಷರ ಗಾತ್ರ

ಮುಂಬೈ: ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು (ಎನ್‌ಎಚ್‌ಎಐ) ದೇಶದ ಹೆದ್ದಾರಿಗಳಿಗುಂಟ ಹೊಂದಿರುವ ಸ್ವತ್ತುಗಳ ನಗದೀಕರಣದಿಂದ 2024 ರಿಂದ 2027ರ ವರೆಗಿನ ಹಣಕಾಸು ವರ್ಷಗಳ ಅವಧಿಯಲ್ಲಿ ₹ 2 ಲಕ್ಷ ಕೋಟಿಯಷ್ಟು ಆದಾಯ ಹೊಂದಬಹುದಾಗಿದೆ ಎಂದು ವರದಿಯೊಂದು ಹೇಳಿದೆ.

ಪ್ರಾಧಿಕಾರವು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಪೈಕಿ ‘ಹೈಬ್ರೀಡ್‌ ಆ್ಯನ್ಯುಟಿ ಮಾಡೆಲ್‌’ (ಎಚ್‌ಎಎಂ) ಸ್ವತ್ತುಗಳು ಹಾಗೂ ‘ಇಪಿಸಿ’ (ಎಂಜಿನಿಯರಿಂಗ್‌, ಪ್ರೊಕ್ಯೂರ್‌ಮೆಂಟ್ ಅಂಡ್ ಕನ್ಸ್‌ಟ್ರಕ್ಷನ್) ಯೋಜನೆಗಳಿಂದ ನಗದೀಕರಣ ಸಾಧ್ಯವಾಗಲಿದೆ ಎಂದು ಕೇರ್‌ ಎಡ್ಜ್‌ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

‘ಮಧ್ಯಮಾವಧಿಯಲ್ಲಿ ₹ 1.75 ಲಕ್ಷ ಕೋಟಿಯಿಂದ ₹ 2 ಲಕ್ಷ ಕೋಟಿಯಷ್ಟು ನಗದೀಕರಣ ಸಾಧ್ಯ’ ಎಂದು ವರದಿಯಲ್ಲಿ ಹೇಳಲಾಗಿದೆ.

ಎನ್‌ಎಚ್‌ಎಐ ಯೋಜನೆಯೊಂದರ ಒಟ್ಟು ವೆಚ್ಚದ ಶೇ 40ರಷ್ಟು ಹಣವನ್ನು ಮಾತ್ರ ನಿಡುತ್ತದೆ. ಯೋಜನೆಯ ಅನುಷ್ಠಾನದ ಹಂತಗಳ ಆಧಾರದಲ್ಲಿ ಒಟ್ಟು ಹತ್ತು ಕಂತುಗಳಲ್ಲಿ ಈ ಮೊತ್ತವನ್ನು ಯೋಜನೆಯ ಅನುಷ್ಠಾನ ಹೊಣೆ ಹೊತ್ತ ಕಂಪನಿಗೆ ಪಾವತಿಸುತ್ತದೆ. ಯೋಜನಾ ವೆಚ್ದದ ಪೈಕಿ ಬಾಕಿ ಶೇ 60ರಷ್ಟು ಮೊತ್ತವನ್ನು ಕಂಪನಿಯೇ ಹೊಂದಿಸಬೇಕಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಈ ಮಾದರಿಯನ್ನು ‘ಹೈಬ್ರಿಡ್‌ ಆ್ಯನ್ಯುಟಿ ಮಾಡೆಲ್’ (ಎಚ್‌ಎಎಂ) ಎಂದು ಹೇಳಲಾಗುತ್ತದೆ. 

2016ರಿಂದ 2023ರ ವರೆಗೆ 62 ಕಂಪನಿಗಳಿಗೆ ಒಟ್ಟು 306 ಎಚ್‌ಎಎಂ ಯೋಜನೆಗಳ ಗುತ್ತಿಗೆ ನೀಡಲಾಗಿದೆ. ಈ ಯೋಜನೆಗಳ ಆಧಾರದ ಮೇಲೆ ಕೇರ್‌ ಎಡ್ಜ್‌ ಸಂಸ್ಥೆಯು ಈ ವಿಶ್ಲೇಷಣೆ ಮಾಡಿದೆ.

ಈ ಯೋಜನೆಗಳಡಿ, ₹ 3.35 ಲಕ್ಷ ಕೋಟಿ ವೆಚ್ಚದಲ್ಲಿ ಒಟ್ಟು 12,700 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಒಟ್ಟು ಋಣಭಾರ 90 ಸಾವಿರ ಕೋಟಿ ಆಗಲಿದೆ.

2020ಕ್ಕಿಂತಲೂ ಮುಂಚೆ ಗುತ್ತಿಗೆ ನೀಡಲಾಗಿರುವ ಎಚ್‌ಎಂ ಯೋಜನೆಗಳ ವೆಚ್ಚ ₹ 1 ಲಕ್ಷ ಕೋಟಿ ಇದ್ದು, ಯೋಜನೆಗಳು ಪೂರ್ಣಗೊಂಡಿವೆ. ಇವುಗಳಿಂದ ₹ 9 ಸಾವಿರದಿಂದ ₹ 11 ಸಾವಿರ ಕೋಟಿಯಷ್ಟು ನಗದೀಕರಣ ಸಾಧ್ಯವಿದೆ. ಇದರಿಂದ ಎನ್‌ಎಚ್‌ಎಐ ಹಾಗೂ ಯೋಜನೆಗಳನ್ನು ಕಾರ್ಯಗತಗೊಳಿಸಿದವರಿಗೆ ಪ್ರಯೋಜನವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT