ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿಸ್ತಾನಿ ಉಗ್ರ ಸಂಘಟನೆಗಳ ಅಂತರರಾಷ್ಟ್ರೀಯ ಜಾಲ ಬಯಲು ಮಾಡಿದ ಎನ್‌ಐಎ  

Published 23 ಜುಲೈ 2023, 14:35 IST
Last Updated 23 ಜುಲೈ 2023, 14:35 IST
ಅಕ್ಷರ ಗಾತ್ರ

ನವದೆಹಲಿ: ನಿಷೇಧಿತ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಾದ ಬಬ್ಬರ್‌ ಖಾಲ್ಸ ಇಂಟರ್‌ನ್ಯಾಷನಲ್‌ (ಬಿಕೆಐ) ಮತ್ತು ಖಾಲಿಸ್ತಾನ್‌ ಟೈಗರ್‌ ಫೋರ್ಸ್‌ (ಕೆಟಿಎಫ್‌)ನೊಂದಿಗೆ ನಂಟು ಹೊಂದಿದ್ದ ಮೂವರು ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ.

ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ನೇಮಕಾತಿ, ನಿರ್ವಹಣೆಗೆ ಸಂಬಂಧಿಸಿದ ಜಾಲವನ್ನು ಈ ಚಾರ್ಜ್‌ಶೀಟ್‌ ಬಯಲು ಮಾಡಿದೆ ಎಂದು ಎನ್‌ಐಎ ವಕ್ತಾರರು ಭಾನುವಾರ ತಿಳಿಸಿದ್ದಾರೆ. 

ಬಿಕೆಐನೊಂದಿಗೆ ನಂಟು ಹೊಂದಿರುವ ಹರ್ವಿಂದರ್‌ ಸಿಂಗ್‌ ಸಂಧು ಅಲಿಯಾಸ್‌ ರಿಂದಾ, ಲಖ್ಬೀರ್‌ ಸಿಂಗ್‌ ಸಂಧು ಅಲಿಯಾಸ್‌ ಲಂಡಾ, ಕೆಟಿಎಫ್‌ನ ಅರ್ಷದೀಪ್‌ ಸಿಂಗ್‌ ಅಲಿಯಾಸ್‌ ಅರ್ಷ ದಾಲಾ ಅವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಮೊದಲಿಗೆ ಗ್ಯಾಂಗ್‌ಸ್ಟರ್‌ಗಳಾಗಿದ್ದ ಇವರು ನಂತರ ಭಯೋತ್ಪಾದನೆ, ಕಳ್ಳಸಾಗಣೆಯಂಥ ಕೃತ್ಯಗಳಲ್ಲಿ ತೊಡಗಿದ್ದು, ವಿದೇಶದಲ್ಲಿದ್ದುಕೊಂಡೇ ತಮ್ಮ ಜಾಲದ ಮೂಲಕ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. 

ಬಿಕೆಐ ಮತ್ತು ಕೆಟಿಎಫ್‌ನೊಂದಿಗೆ ಸಂಪರ್ಕ ಹೊಂದಿರುವ ಇನ್ನೂ 6 ಜನರ ಹೆಸರನ್ನೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಎರಡೂ ಸಂಘಟನೆಗಳಿಗೆ ಹಣಹೊಂದಿಸುವ ಸಂಕೀರ್ಣ ಕಾರ್ಯವಿಧಾನದ ಬಗ್ಗೆಯೂ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ. 

ವಿದೇಶದಲ್ಲಿನ ಸಂಕೀರ್ಣ ಜಾಲದ ಮೂಲಕ ಉಗ್ರ ಕೃತ್ಯಗಳಿಗೆ ನೇಮಕಾತಿಗಳನ್ನು ನಡೆಸಲಾಗುತ್ತಿತ್ತು. ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು, ಸುಲಿಗೆ ಮಾಡಲು, ಮಾರಕಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಸಹವರ್ತಿಗಳನ್ನು ಈ ಜಾಲದ ಮೂಲಕವೇ ನಿರ್ವಹಣೆ ಮಾಡಲಾಗುತ್ತಿತ್ತು.  

ಬಿಕೆಐನ ರಿಂದಾ 2018–19ರ ಆಸುಪಾಸಿನಲ್ಲಿ ಪಾಕಿಸ್ತಾನಕ್ಕೆ ಹಾರಿದ್ದು, ಅಲ್ಲಿ ಐಎಸ್‌ ಸಂಘಟನೆಯ ಆಶ್ರಯದಲ್ಲಿದ್ದುಕೊಂಡು ತನ್ನ ಕೃತ್ಯಗಳನ್ನು ನಡೆಸುತ್ತಿದ್ದಾನೆ. ಲಂಡಾ ಕೆನಡಾದಲ್ಲಿದ್ದುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾನೆ. ಕೆಟಿಎಫ್‌ನ ದಾಲಾ ಕೂಡ ಕೆನಡಾದಿಂದಲೇ ಭಾರತದಲ್ಲಿ ಸುಲಿಗೆ, ಉಗ್ರಚಟುವಟಿಕೆಯಲ್ಲಿ ತೊಡಗಿದ್ದಾನೆ. 

‌ತಲೆಮರೆಸಿಕೊಂಡಿರುವ ಇನ್ನೂ 16 ಮಂದಿ ಮತ್ತು ಈಗ ಬಂಧನಕ್ಕೊಳಗಾಗಿರುವವರ ಸಹಚರರು ಬಿಕೆಐ ಮತ್ತು ಕೆಟಿಎಫ್‌ನೊಂದಿಗೆ ಹೊಂದಿರಬಹುದಾದ ನಂಟಿನ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದೂ ಎನ್‌ಐಎ ತಿಳಿಸಿದೆ. 

ಉತ್ತರ ಭಾರತದ ದೊಡ್ಡ ಗ್ಯಾಂಗ್‌ಗಳು, ಸ್ಥಳೀಯ ಗ್ಯಾಂಗ್‌ಸ್ಟರ್‌ಗಳು, ಸಂಘಟಿತ ಅಪರಾಧಿ ಗುಂಪುಗಳು ಮತ್ತು ಜಾಲದೊಂದಿಗೆ ಇವರು ಸಂಪರ್ಕ ಹೊಂದಿದ್ದರು ಎಂದು ಎನ್‌ಐಎ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT