ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಲ್ಡಿಬ್ರಾರ್‌ ಆಪ್ತರ ಜೊತೆ ಸಂಪರ್ಕ: ಪಂಜಾಬ್‌ ವಿವಿಧೆಡೆ ಎನ್‌ಐಎ ಶೋಧ

Published 6 ಜೂನ್ 2024, 15:33 IST
Last Updated 6 ಜೂನ್ 2024, 15:33 IST
ಅಕ್ಷರ ಗಾತ್ರ

ನವದೆಹಲಿ‌: ಕೆನಡಾ ಮೂಲದ ಭಯೋತ್ಪಾದಕ ಗೋಲ್ಡಿ ಬ್ರಾರ್‌ನ ಆಪ್ತರ ಜೊತೆಗೆ ಸಂಪರ್ಕ ಇದ್ದವರಿಗೆ ಸೇರಿದ್ದು ಎನ್ನಲಾದ, ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ರಾಷ್ಟ್ರ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳು ಗುರುವಾರ ಶೋಧ ನಡೆಸಿದರು.

ಉದ್ಯಮಿಗಳಿಂದ ಹಣ ಸುಲಿಗೆ ಮತ್ತು ಗುಂಡಿನ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶೋಧ ಕಾರ್ಯಾಚರಣೆ ನಡೆಯಿತು ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಮೊಹಾಲಿ, ಪಟಿಯಾಲ, ಹೋಶಿಯಾಪುರ್, ಫತೇಗರ್‌ ಸಾಹಿಬ್‌ನಲ್ಲಿ, ಬ್ರಾರ್ ಮತ್ತು ಆತನ ಸಹಚರರ ಜೊತೆಗೆ ಸಂಪರ್ಕವಿತ್ತು ಎನ್ನಲಾದವರಿಗೆ ಸೇರಿದ್ದ ಒಂಬತ್ತು ತಾಣಗಳಲ್ಲಿ ಶೋಧ ನಡೆಸಿದ್ದು, ಡಿಜಿಟಲ್ ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.

ಕರ್ಣಿ ಸೇನಾ ಮುಖ್ಯಸ್ಥ ಸುಖ್‌ದೇವ್ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ಬ್ರಾರ್ ಮತ್ತು ಇತರೆ 11 ಜನರ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾದ ಮಾರನೇ ದಿನವೇ ಎನ್ಎಐ ಅಧಿಕಾರಿಗಳು ಈ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ರಾಜ್ಯದಲ್ಲಿ ಉದ್ದಿಮೆದಾರರಿಂದ ಹಣ ಸುಲಿಗೆ ಮಾಡಲು ಬ್ರಾರ್‌ ಮತ್ತು ಗೋಲ್ಡಿ ಅವರು ಕ್ರಿಮಿನಲ್ ಸಂಚು ನಡೆಸಿದ್ದರು. ಬ್ರಾರ್‌ ರಚಿಸಿಕೊಂಡಿದ್ದ ಉಗ್ರರ ಗುಂಪಿನ ಸದಸ್ಯರಿಗೆ ಶಸ್ತ್ರಾಸ್ತ್ರ ಪೂರೈಸಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿತ್ತು ಎಂದು ಹೇಳಿಕೆ ತಿಳಿಸಿದೆ.

ಮಾಹಿತಿ ಕೋರಿಕೆ: ಗೋಲ್ಡಿ ಬ್ರಾರ್‌ ಹಾಗೂ ಆತನ ಸಹಚರರ ಕುರಿತು ಮಾಹಿತಿಗಳಿದ್ದರೆ ಹಂಚಿಕೊಳ್ಳಬೇಕು ಎಂದು ಎನ್‌ಐಎ ಸಾರ್ವಜನಿಕರಿಗೆ ಮನವಿ ಮಾಡಿದೆ.

ಮಾಹಿತಿಗಳಿದ್ದಲ್ಲಿ ದೂರವಾಣಿ ಸಂಖ್ಯೆ (0172-2682901) ಹಾಗೂ ವಾಟ್ಸ್ಆ್ಯಪ್‌/ಟೆಲಿಗ್ರಾಂ (ಮೊಬೈಲ್‌ ಸಂಖ್ಯೆ 7743002947) ಮೂಲಕ ಹಂಚಿಕೊಳ್ಳಬೇಕು. ಮಾಹಿತಿದಾರರ ಗುರುತನ್ನು ಗೋಪ್ಯವಾಡಿ ಇಡಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT