ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ರೈಲು ದುರಂತ | ಸಾವಿನ ಸಂಖ್ಯೆ ಮರೆಮಾಚುವ ಉದ್ದೇಶ ಸರ್ಕಾರಕ್ಕಿಲ್ಲ: ಪಿ. ಕೆ. ಜೆನಾ

Published 5 ಜೂನ್ 2023, 5:18 IST
Last Updated 5 ಜೂನ್ 2023, 5:18 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ರೈಲು ದುರಂತದಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯನ್ನು ಮರೆಮಾಚುವ ಯಾವುದೇ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿಲ್ಲ ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಪಿ ಕೆ ಜೆನಾ ಹೇಳಿದರು.

ಒಡಿಶಾದ ಬಾಲಸೋರ್‌ನಲ್ಲಿ ತ್ರಿವಳಿ ರೈಲುಗಳ ನಡುವೆ ಅಪಘಾತ ಸಂಭವಿಸಿದ್ದು, ದುರಂತದಲ್ಲಿ 275 ಮಂದಿ ಸಾವಿಗೀಡಾಗಿದ್ದಾರೆ ಎಂದು ಒಡಿಶಾ ಸರ್ಕಾರ ಭಾನುವಾರ ಅಧಿಕೃತ ಮಾಹಿತಿ ನೀಡಿತ್ತು. ಇದಕ್ಕೂ ಮೊದಲು ಸಾವಿನ ಸಂಖ್ಯೆ 288 ಎಂದು ರೈಲ್ವೇ ಇಲಾಖೆ ತಿಳಿಸಿತ್ತು. ಅಲ್ಲದೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ತಮ್ಮ ರಾಜ್ಯದಿಂದ 182 ಮಂದಿ ಕಾಣೆಯಾಗಿದ್ದಾರೆ‘ ಎಂದು ಹೇಳಿದ್ದರು. ಸಾವಿಗೀಡಾದವರ ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಪ್ರತಿಪಕ್ಷದ ಕೆಲವು ನಾಯಕರು ಆರೋಪಿಸಿದ್ದರು.

ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಪಿ ಕೆ ಜೆನಾ, 'ಅಪಘಾತ ನಡೆದ ಕ್ಷಣದಿಂದ ಮಾಧ್ಯಮಗಳು ಸ್ಥಳದಲ್ಲಿಯೇ ಜಾಂಡಾ ಹೂಡಿದ್ದವು. ರಕ್ಷಣಾ ಕಾರ್ಯಚರಣೆ ಕ್ಯಾಮರಾಗಳ ಮುಂದೆಯೇ ನಡೆದಿವೆ. ಅಪಘಾತ ನಡೆದ ಸ್ಥಳಕ್ಕೆ ಮಾಧ್ಯಮಗಳು ಬರಬಾರದೆಂದು ಯಾವುದೇ ನಿಷೇಧ ಹೇರಿರಲಿಲ್ಲ. ರೈಲ್ವೇ ಪುನರ್‌ ನಿರ್ಮಾಣದ ಕಾರ್ಯವೂ ಕೂಡ ಮಾಧ್ಯಮಗಳ ಮುಂದೆಯೇ ನಡೆದಿದೆ. ನಮ್ಮ ಸರ್ಕಾರ ಪಾರದರ್ಶಕತೆಯನ್ನು ನಂಬುತ್ತದೆ‘ ಎಂದು ತಿರುಗೇಟು ನೀಡಿದ್ದಾರೆ.

‘ದುರಂತದಲ್ಲಿ 288 ಮಂದಿ ಸಾವಿಗೀಡಾಗಿದ್ದಾರೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ರೈಲ್ವೇ ಇಲಾಖೆ ನೀಡಿದ ಮಾಹಿತಿಯನ್ನೇ ಮೊದಲು ನಾವು ಹೇಳಿದ್ದೇವೆ. ಆದರೆ, ಬಾಲಸೋರ್‌ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಭಾನುವಾರ ಬೆಳಿಗ್ಗೆ 10 ಗಂಟೆಯವರೆಗೆ ಈ ಸಂಖ್ಯೆ 275 ಆಗಿತ್ತು ಎಂದು ಧೃಡಪಡಿಸಿದ್ದೇವೆ ‘ ಎಂದರು.

ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸವಾಗಿರುವುದು ಹೇಗೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಲವೊಂದು ದೇಹಗಳನ್ನು ಎರಡೆರಡು ಬಾರಿ ಲೆಕ್ಕ ಹಾಕಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ. 275 ಮೃತ ದೇಹಗಳ ಪೈಕಿ ಈವರೆಗೆ 108 ಮೃತದೇಹಗಳನ್ನು ಗುರುತಿಸಲಾಗಿದೆ‘ ಎಂದು ಹೇಳಿದರು.

‘ಬಿಸಿ ವಾತಾವರಣದಿಂದ ದೇಹಗಳು ವೇಗವಾಗಿ ಕೊಳೆಯುತ್ತಿವೆ. ಮೃತದೇಹಗಳನ್ನು ಅತಿ ಶೀಘ್ರದಲ್ಲಿಯೇ ವಿಲೇವಾರಿ ಮಾಡಬೇಕಿದೆ. ಮೃತದೇಹದ ಅಂತ್ಯಕ್ರಿಯೆ ಮೃತರ ಕುಟುಂಬದಿಂದಲೇ ನಡೆಸಲಿ ಎಂಬುವುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕಾಗಿ ಮೃತದೇಹಗಳ ಗುರುತಿಸಲು ಕುಟುಂಬಗಳಿಗೆ ಇನ್ನೂ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT