ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Madhya Pradesh elections- ಬಿಜೆಪಿಯಲ್ಲಿ ಬಣ ರಾಜಕೀಯವಿಲ್ಲ: ಮುಖ್ಯಮಂತ್ರಿ

Published 4 ಸೆಪ್ಟೆಂಬರ್ 2023, 13:56 IST
Last Updated 4 ಸೆಪ್ಟೆಂಬರ್ 2023, 13:56 IST
ಅಕ್ಷರ ಗಾತ್ರ

ನವದೆಹಲಿ: ‘ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಿಲ್ಲ. ವಿಧಾನಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷ ನಿರ್ಧರಿಸಲಿದೆ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್‌ ಹೇಳಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ ಅವರು 2020ರಲ್ಲಿ ಬಿಜೆಪಿಗೆ ಸೇರಿದ್ದಾರೆ ಎಂದು ಉಲ್ಲೇಖಿಸಿದ ಅವರು, ಅವರ ಜೊತೆಗೆ ಪಕ್ಷವನ್ನು ಸೇರಿದ್ದವರು ಹಾಲಿನಲ್ಲಿ ಸಕ್ಕರೆ ಬೆರೆತಂತೆ ಪಕ್ಷದಲ್ಲಿ ಒಂದುಗೂಡಿದ್ದಾರೆ. ಪಕ್ಷವು ಒಗ್ಗಟ್ಟಾಗಿದೆ’ ಎಂದು ಪ್ರತಿಪಾದಿಸಿದರು.

ನಾಯಕರು ತಮ್ಮ ಆದ್ಯತೆ ಅನುಸಾರ ಕಾರ್ಯ ನಿರ್ವಹಿಸುವುದು ಸಹಜ. ಅಣ್ಣತಮ್ಮಂದಿರ ಕಾರ್ಯಶೈಲಿಯಲ್ಲಿಯೇ ಭಿನ್ನತೆ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಟಿ.ವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಲಿದೆ. ಜನರ ಆಶೀರ್ವಾದ ಇದೆ ಎಂಬ ಕಾರಣಕ್ಕೆ ನಾನು ಮುಖ್ಯಮಂತ್ರಿ ಆಗಿದ್ದೇನೆ. ಮೊದಲು ಮುಖ್ಯಮಂತ್ರಿ ಆದಾಗ ನನ್ನ ಆಯ್ಕೆ ಕುರಿತು ನನಗೇ ಅರಿವಿರಲಿಲ್ಲ‘ ಎಂದರು.

‘ಪಕ್ಷದ ಸಂಸದೀಯ ಮಂಡಳಿ ಸಭೆ ನಡೆದಾಗ ನಾನು ಬೇರೆಡೆ ಇದ್ದೆ. ಟಿ.ವಿ.ಚಾನಲ್‌ ಸುದ್ದಿ ಗಮನಿಸಿ ಪತ್ನಿ ಈ ಮಾಹಿತಿ ನೀಡಿದ್ದರು. ಆಯ್ಕೆಯ ಹಿಂದೆಯೇ ಭೂಪೇಂದರ್‌ ಸಿಂಗ್ ಹೂಡಾ ಅವರು ಅಭಿನಂದಿಸಲು ಮನೆಗೆ ಬಂದಿದ್ದರು’ ಎಂದು ಸ್ಮರಿಸಿದರು.

ರಾಜ್ಯ ಬಿಜೆಪಿಯಲ್ಲಿ ಮೂರು ಬಣಗಳಿವೆ ಎಂಬ ವದಂತಿ ಕುರಿತ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷದ ಸಮಸ್ಯೆ ಏನೆಂದರೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡುವಾಗ ಅವರು ನಿದ್ರೆ ಕಳೆದುಕೊಳ್ಳುತ್ತಾರೆ. ನಾವು ಅವರಿಗೆ ದುಃಸ್ವಪ್ನವಾಗಿದ್ದೇವೆ’ ಎಂದು ಹೇಳಿದರು.

ಜನಾಶೀರ್ವಾದ ಯಾತ್ರೆಗೆ ಕಡೆಗಣನೆ:ಉಮಾಭಾರತಿ ತೀವ್ರ ಅಸಮಾಧಾನ
ಭೋಪಾಲ್‌: ಮಧ್ಯಪ್ರದೇಶದಲ್ಲಿ ‘ಜನಾಶೀರ್ವಾದ ಯಾತ್ರೆ’ಗೆ ಆಹ್ವಾನಿಸದ ಪಕ್ಷದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ ಉಮಾಭಾರತಿ ‘ಈಗ ಆಹ್ವಾನಿಸಿದರೂ ಹೋಗುವುದಿಲ್ಲ’ ಎಂದಿದ್ದಾರೆ.  ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು ‘ಎಕ್ಸ್’ ಜಾಲತಾಣದಲ್ಲಿ ಸರಣಿ ಸಂದೇಶ ಪೋಸ್ಟ್‌ ಮಾಡಿದ್ದಾರೆ. ರಾಜ್ಯ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಕೋರಿದರೆ ಪ್ರಚಾರ ಮಾಡುತ್ತೇನೆ ಎಂದೂ ಹೇಳಿದ್ದಾರೆ. ಜನಾಶೀರ್ವಾದ ಯಾತ್ರೆ ಭಾನುವಾರ ಆರಂಭವಾಗಿದ್ದು ಸೆ.25ರಂದು ಭೋಪಾಲ್‌ನಲ್ಲಿ ಸಮಾಪ್ತಿಗೊಳ್ಳಲಿದೆ. ‘ಯಾತ್ರೆಗೆ ಪಕ್ಷ ಆಹ್ವಾನಿಸಿಲ್ಲ ಎಂಬುದು ನಿಜ. ಇದರಿಂದ ನನ್ನ ವ್ಯಕ್ತಿತ್ವ ಬದಲಾಗದು. ಈಗ ಆಹ್ವಾನಿಸಿದರೆ ಹೋಗುವುದಿಲ್ಲ. ಸಮಾರೋಪದಲ್ಲಿಯೂ ಪಾಲ್ಗೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನನ್ನ ಮತ್ತು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ನಡುವೆ ಗೌರವದ ಬಾಂಧವ್ಯವಿದೆ. ಅವರು ಕೋರಿದರೆ ಭಾಗವಹಿಸುತ್ತೇನೆ. ಬಿಜೆಪಿ ಕಟ್ಟುವಲ್ಲಿ ನನ್ನ ಪಾತ್ರವಿದೆ. ಪಕ್ಷಕ್ಕೆ ಧಕ್ಕೆ ಉಂಟುಮಾಡುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT