ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT

Published 16 ಜೂನ್ 2024, 14:45 IST
Last Updated 16 ಜೂನ್ 2024, 14:45 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ದೇಶಕ ದಿನೇಶ್‌ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.

ಪಿಟಿಐ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಪ್ರತಿ ವರ್ಷ ನಡೆಸುವ ಪರಿಷ್ಕರಣೆ ಭಾಗವಾಗಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದ್ದು, ವಿವಾದ ಎಬ್ಬಿಸುವಂತಹ ವಿಷಯವೇ ಇದಲ್ಲ’ ಎಂದಿದ್ದಾರೆ.

ಗಲಭೆಗಳ ಕುರಿತ ಬೋಧನೆಯು ರೋಷಾವೇಶಭರಿತ ಮತ್ತು ಖಿನ್ನತೆಯಿಂದ ಬಳಲುವ ನಾಗರಿಕರನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿಯೇ, ಗುಜರಾತ್ ಗಲಭೆಗಳು, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಶಾಲಾ ಪಠ್ಯಕ್ರಮದಲ್ಲಿ ಕೇಸರಿಕರಣದ ಆರೋಪವನ್ನು ತಳ್ಳಿಹಾಕಿರುವ ಅವರು, ನಮ್ಮ ಶಿಕ್ಷಣದ ಉದ್ದೇಶ ಹಿಂಸಾತ್ಮಕ ಪ್ರವೃತ್ತಿಯ, ಖಿನ್ನತೆಗೆ ಒಳಗಾದ ನಾಗರಿಕರನ್ನು ಸೃಷ್ಟಿಸುವುದಲ್ಲ. ದ್ವೇಷ ಮತ್ತು ಹಿಂಸೆ ಬೋಧನೆಯ ವಿಷಯಗಳಲ್ಲ. ಅವು ನಮ್ಮ ಪಠ್ಯಪುಸ್ತಕಗಳ ಕೇಂದ್ರಬಿಂದುವಾಗಿರಬಾರದು ಎಂದು ಅವರು ಹೇಳಿದ್ದಾರೆ.

ಗುಜರಾತ್‌ ಗಲಭೆಗಳು ಬಾಬ್ರಿ ಮಸೀದಿ ಧ್ವಂಸ ಕುರಿತ ಮಾಹಿತಿ ಕೈಬಿಟ್ಟಿರುವುದಕ್ಕೆ ಕುರಿತ ಪ್ರಶ್ನೆಗೆ, ‘ಈ ವಿಷಯಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಏಕಿರಬೇಕು? ನಾವು ಸಕಾರಾತ್ಮಕ ಯೋಚನೆ ಹೊಂದಿರುವಂತಹ ನಾಗರಿಕರನ್ನು ರೂಪಿಸಬೇಕೇ ಹೊರತು, ರೋಷಾವೇಶದ ಮತ್ತು ಖಿನ್ನರಾದ ವ್ಯಕ್ತಿಗಳನ್ನಲ್ಲ’ ಎಂದು ಉತ್ತರಿಸಿದ್ದಾರೆ.

‘ಆಕ್ರಮಣಶೀಲರಾಗುವಂತೆ ನಮ್ಮ ವಿದ್ಯಾರ್ಥಿಗಳಿಗೆ ಕಲಿಸಬೇಕೇ? ಸಮಾಜದಲ್ಲಿ ದ್ವೇಷಕ್ಕೆ ಕಾರಣವಾಗುವ ಅಥವಾ ಇಂತಹ ದ್ವೇಷದ ಸಂತ್ರಸ್ತರಾಗುವಂತೆ ಮಾಡಬೇಕೇ? ಇದು ನಮ್ಮ ಶಿಕ್ಷಣದ ಉದ್ದೇಶವೇ’ ಎಂದು ಮರು ಪ್ರಶ್ನೆ ಹಾಕಿದ್ದಾರೆ.

‘ಈ ರೀತಿ ಗಲಭೆಗಳು ಯಾಕಾದವು, ಯಾಕೆ ಮಸೀದಿಯನ್ನು ಧ್ವಂಸಗೊಳಿಸಲಾಯಿತು ಎಂಬ ಬಗ್ಗೆ ಮಕ್ಕಳು ಬೆಳೆದು ದೊಡ್ಡವರಾದ ನಂತರ ತಿಳಿದುಕೊಳ್ಳಲಿ. ಈಗ ಪಠ್ಯಪುಸ್ತಕಗಳಲ್ಲಿ ಮಾಡಿರುವ ಬದಲಾವಣೆಗಳ ಕುರಿತು ಹುಯಿಲೆಬ್ಬಿಸುತ್ತಿರುವುದು ಅಪ್ರಸ್ತುತ’ ಎಂದೂ ಹೇಳಿದ್ದಾರೆ.

ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕಗಳು ಮಾರುಕಟ್ಟೆಗೆ ಬಂದಿರುವ ಈ ಸಂದರ್ಭದಲ್ಲಿ ಸಕ್ಲಾನಿ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ , 2020ಕ್ಕೆ ಅನುಗುಣವಾಗಿ ಎನ್‌ಸಿಇಆರ್‌ಟಿ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುತ್ತಿದೆ.

‘ರಾಮ ಮಂದಿರ, ಬಾಬ್ರಿ ಮಸೀದಿ ಅಥವಾ ರಾಮ ಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಸೇರಿಸುವುದು ಬೇಡವೇ? ಇದರಲ್ಲಿ ಸಮಸ್ಯೆ ಏನಿದೆ? ನಾವು ನೂತನ ಸಂಸತ್‌ ಭವನ ನಿರ್ಮಾಣ ಮಾಡಿರುವಾಗ ಅದರ ಕುರಿತು ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳಬಾರದೇ? ಪ್ರಾಚೀನ ಕಾಲದಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಇತ್ತೀಚಿನ ಕಾರ್ಯಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವುದು ನಮ್ಮ ಕರ್ತವ್ಯ’ ಎಂದು ಸಕ್ಲಾನಿ ಹೇಳಿದ್ದಾರೆ.

ಪಠ್ಯಕ್ರಮವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂಬ ಆರೋಪಗಳಿವೆ ಎಂಬ ಪ್ರಶ್ನೆಗೆ, ‘ಭಾರತೀಯ ಜ್ಞಾನ ವ್ಯವಸ್ಥೆ ಕುರಿತು ಮಕ್ಕಳಿಗೆ ತಿಳಿಸಿದರೆ ಅದು ಕೇಸರೀಕರಣ ಹೇಗಾಗುತ್ತದೆ? ಮೆಹ್ರೌಲಿಯಲ್ಲಿರುವ ಕಬ್ಬಿಣ ಕಂಬದ ಬಗ್ಗೆ ವಿವರಿಸಿ, ಲೋಹವಿಜ್ಞಾನದಲ್ಲಿ ಭಾರತೀಯರು ಆಗಿನ ಕಾಲದಲ್ಲಿಯೇ ಸಾಧನೆ ಮಾಡಿದ್ದರು ಎಂದು ಹೇಳುವುದು ತಪ್ಪೇ? ಇದು ಹೇಗೆ ಕೇಸರೀಕರಣವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಬದಲಾವಣೆಗಳೇನು?: ‌

  • 12ನೇ ತರಗತಿಯ ಪರಿಷ್ಕೃತ ರಾಜಶಾಸ್ತ್ರ ಪಠ್ಯಪುಸ್ತಕದಲ್ಲಿ ಬಾಬ್ರಿ ಮಸೀದಿ ಎಂಬ ಪ್ರಸ್ತಾಪ ಇಲ್ಲ. ಆದರೆ, ಅದನ್ನು ಮೂರು ಗುಮ್ಮಟಗಳ ರಚನೆ ಎಂದು ಹೇಳಲಾಗಿದೆ. ಅಯೋಧ್ಯೆಗೆ ಸಂಬಂಧಿಸಿ ಭಾಗದಲ್ಲಿ ನಾಲ್ಕರಿಂದ 2 ಪುಟಗಳಿಗೆ ಇಳಿಸಲಾಗಿದ್ದು, ಈ ಮುಂಚಿನ ಆವೃತ್ತಿಯಲ್ಲಿದ್ದ ವಿವರಗಳನ್ನು ತೆಗೆದು ಹಾಕಲಾಗಿದೆ.

  • ವಿವಾದಿತ ಕಟ್ಟಡವಿದ್ದ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿ ಕೊಟ್ಟಂತಹ ಸುಪ್ರೀಂ ಕೋರ್ಟ್‌ ತೀರ್ಪಿನ ಕುರಿತು ಈ ಪಠ್ಯಪುಸ್ತಕದಲ್ಲಿ ಹೆಚ್ಚು ಒತ್ತು ನೀಡಲಾಗಿದೆ.

  • ಗುಜರಾತ್‌ನ ಸೋಮನಾಥ್‌ನಿಂದ ಅಯೋಧ್ಯೆವರೆಗೆ ನಡೆದಿದ್ದ ಬಿಜೆಪಿಯ ‘ರಥ ಯಾತ್ರೆ’, ಈ ಕಾರ್ಯಕ್ರಮದಲ್ಲಿ ಕರಸೇವಕರ ಪಾತ್ರ, ಬಾಬ್ರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರ, ಆಗ ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಹಾಗೂ ಅಯೋಧ್ಯೆಯಲ್ಲಿ ಘಟನೆಗಳ ಕುರಿತು ಬಿಜೆಪಿ ವಿಷಾದ ವ್ಯಕ್ತಪಡಿಸಿದ್ದನ್ನು ಪಠ್ಯಪುಸ್ತಕಗಳಿಂದ ತೆಗೆದು ಹಾಕಲಾಗಿದೆ.

  • ಹುಮಾಯೂನ್‌, ಶಹಜಹಾನ್‌, ಅಕ್ಬರ್, ಜಹಾಂಗೀರ್, ಔರಂಗಜೇಬ್‌ ಸೇರಿದಂತೆ ಮೊಘಲ್ ದೊರೆಗಳ ಸಾಧನೆಗಳನ್ನು ವಿವರಿಸುವ ಎರಡು ಪುಟಗಳ ಕೋಷ್ಟಕವನ್ನು ಸಹ ಕೈಬಿಡಲಾಗಿದೆ.

2014ರಿಂದ ಮಾಡಿದ ನಾಲ್ಕನೇ ಪರಿಷ್ಕರಣೆ ಇದಾಗಿದೆ.

1984ರಲ್ಲಿ ನಡೆದ ಸಿಖ್ಖರ ಹತ್ಯೆ ಕುರಿತು ಪಠ್ಯಪುಸ್ತಕಗಳಲ್ಲಿ ಪ್ರಸ್ತಾಪವೇ ಇರಲಿಲ್ಲ. ಆಗ ಯಾವುದೇ ವಿವಾದ ಕಂಡುಬರಲಿಲ್ಲ
–ದಿನೇಶ್‌ ಪ್ರಸಾದ್‌ ಸಕ್ಲಾನಿ ಎನ್‌ಸಿಇಆರ್‌ಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT