ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಮೈತ್ರಿಯಲ್ಲಿ ಕಿತ್ತಾಟ: ಸರ್ಕಾರಕ್ಕೆ ಯಾರೂ ಕಳಂಕ ತರಬಾರದೆಂದ ಅಜಿತ್‌

ರಾವುತ್‌ ಹೇಳಿಕೆಗೆ ಉಪಮುಖ್ಯಮಂತ್ರಿ ಪವಾರ್‌ ತಿರುಗೇಟು
Last Updated 28 ಮಾರ್ಚ್ 2021, 11:28 IST
ಅಕ್ಷರ ಗಾತ್ರ

ಮುಂಬೈ: ಮೈತ್ರಿ ಸರ್ಕಾರಕ್ಕೆ ಕಳಂಕ ತರುವಂಥ ಕೆಲಸವನ್ನು ಯಾರೂ ಮಾಡಬಾರದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಭಾನುವಾರ ಹೇಳಿದ್ದಾರೆ.

ಅನಿಲ್‌ ದೇಶಮುಖ್‌ ಅವರು ಆಕಸ್ಮಿಕವಾಗಿ ಗೃಹಸಚಿವರಾದರು ಎಂಬ ಶಿವಸೇನಾ ಮುಖಂಡ ಸಂಜಯ್‌ ರಾವುತ್ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈತ್ರಿ ಸರ್ಕಾರದ ಭಾಗವಾಗಿರುವ ಪಕ್ಷಗಳ ಮುಖ್ಯಸ್ಥರು ತಮ್ಮ ಪಕ್ಷದ ಯಾವ ಶಾಸಕರಿಗೆ ಸಂಪುಟ ದರ್ಜೆ ಸಚಿವ ಸ್ಥಾನವನ್ನು ನೀಡಬೇಕು ಎಂದು ನಿರ್ಧರಿಸುವ ಪರಮಾಧಿಕಾರ ಹೊಂದಿರುತ್ತಾರೆ’ ಎಂದರು.

‘ಮೈತ್ರಿಕೂಟದ ಅಂಗ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಶಿವಸೇನಾ ಕೂಡ ಇದೇ ಮಾನದಂಡವನ್ನು ಅನುಸರಿಸಿರುತ್ತವೆ. ‍ಪಕ್ಷಗಳ ನಿರ್ಧಾರವನ್ನು ಗೌರವಿಸಬೇಕು. ಅದನ್ನು ಬಿಟ್ಟು, ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದು ಸರಿಯಲ್ಲ’ ಎಂದೂ ಪವಾರ್‌ ಹೇಳಿದರು.

ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಭಾನುವಾರ ಪ್ರಕಟವಾಗಿರುವ ತಮ್ಮ ‘ರೋಖ್‌ಠೋಕ್’ ಅಂಕಣದಲ್ಲಿ, ‘ಎನ್‌ಸಿಪಿಯ ಹಿರಿಯ ಮುಖಂಡರಾದ ಜಯಂತ್ ಪಾಟೀಲ ಹಾಗೂ ದಿಲೀಪ್‌ ವಳ್ಸೆ–ಪಾಟೀಲ ಅವರು ಸಚಿವ ಸ್ಥಾನ ನಿರಾಕರಿಸಿದರು. ಹೀಗಾಗಿ ದೇಶಮುಖ್‌ ಆಕಸ್ಮಿಕವಾಗಿ ಗೃಹ ಸಚಿವರಾದರು’ ಎಂದು ರಾವುತ್‌ ವಿಶ್ಲೇಷಿಸಿದ್ದಾರೆ.

‘ಕಿರಿಯ ಪೊಲೀಸ್‌ ಅಧಿಕಾರಿಯಾಗಿರುವ ಸಚಿನ್ ವಾಜೆ ಅವರು ಹಣ ವಸೂಲಿ ಜಾಲವನ್ನು ಮುಂಬೈ ಪೊಲೀಸ್ ಕಮಿಷನರ್‌ ಕಚೇರಿಯಿಂದಲೇ ನಿಭಾಯಿಸುತ್ತಿದ್ದರು ಎನ್ನುವುದಾದರೆ, ಗೃಹ ಸಚಿವರಿಗೆ ಇದರ ಅರಿವು ಯಾಕೆ ಇರಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮಬೀರ್‌ ಸಿಂಗ್‌ ಅವರು ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ನಂತರ, ಸರ್ಕಾರದ ವರ್ಚಸ್ಸಿಗೆ ಆದ ಹಾನಿಯನ್ನು ತಡೆಯುವ ಕಾರ್ಯತಂತ್ರವನ್ನು ಮೈತ್ರಿ ಸರ್ಕಾರ ಹೊಂದಿರಲಿಲ್ಲ ಎಂದೂ ರಾವುತ್‌ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

‘ಗೃಹ ಸಚಿವರಾದವರು ಕಡಿಮೆ ಮಾತನಾಡಬೇಕು. ಪದೇಪದೇ ಕ್ಯಾಮೆರಾಗಳ ಮುಂದೆ ನಿಂತು ಮಾತನಾಡುವುದು, ಆ ಕ್ಷಣವೇ ತನಿಖೆ ಆದೇಶಿಸುವುದು ಸಹ ಗೃಹ ಸಚಿವರಾದವರ ಕೆಲಸವಲ್ಲ’ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT