ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಕೇರಳ ಸ್ಟೋರಿ‘ ನಿಷೇಧಿಸುವಂತೆ ಯಾವುದೇ ಆದೇಶ ಹೊರಡಿಸಿಲ್ಲ: ತಮಿಳುನಾಡು ಸರ್ಕಾರ

Published 16 ಮೇ 2023, 12:15 IST
Last Updated 16 ಮೇ 2023, 12:15 IST
ಅಕ್ಷರ ಗಾತ್ರ

ನವದೆಹಲಿ : ‘ದಿ ಕೇರಳ ಸ್ಟೋರಿ‘ ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ಚಿತ್ರಮಂದಿರಗಳಿಗೆ ಸರ್ಕಾರ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಬಂದ ಕಾರಣ ಚಿತ್ರಮಂದಿರದ ಮಾಲೀಕರೇ ಚಿತ್ರದ ಪ್ರದರ್ಶನ ನಿಲ್ಲಿಸಲು ನಿರ್ಧರಿಸಿದ್ದರು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಕಾನೂನುಬಾಹಿರವಾಗಿ ತಮಿಳುನಾಡು ಸರ್ಕಾರ ‘ದಿ ಕೇರಳ ಸ್ಟೋರಿ‘ ಚಿತ್ರವನ್ನು ನಿಷೇಧಿಸಿದೆ ಎಂದು ಆರೋಪಿಸಿ ಚಿತ್ರ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಗೆ ತಮಿಳುನಾಡು ಸರ್ಕಾರ ತನ್ನ ಪ್ರತಿಕ್ರಿಯೆ ನೀಡಿದೆ. ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಅಮಿತ್ ಆನಂದ್ ತಿವಾರಿ ಮೂಲಕ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ.

‘ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳನ್ನು ಮನಗಂಡ ಸರ್ಕಾರ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್‌ಗಳಿಗೆ ಸೂಕ್ತ ಭದ್ರತೆಯನ್ನು ಕಲ್ಪಿಸಿತ್ತು. ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಬಂದ ಕಾರಣ ಥಿಯೇಟರ್‌ ಮಾಲೀಕರೇ ಮೇ 7ರಿಂದ ಚಿತ್ರದ ಪ್ರದರ್ಶನ ನಿಲ್ಲಿಸಲು ನಿರ್ಧರಿಸಿದ್ದರು. ಚಿತ್ರ ನಿಷೇಧಿಸುವಂತೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ‘ ಎಂದು ಹೇಳಿದೆ.

‘ಚಿತ್ರ ಬಿಡುಗಡೆಯಾದ ನಂತರ ಚಿತ್ರದ ಕುರಿತು ಭಾರೀ ವಿರೋಧ ವ್ಯಕ್ತವಾಗಿತ್ತು. ಹಲವರು ಚಿತ್ರವನ್ನು ಟೀಕಿಸಿದ್ದಾರೆ. ಚಿತ್ರವು ಇಸ್ಲಾಂ ಪೋಬಿಯಾವನ್ನು(ಮುಸ್ಲಿಮರ ಬಗ್ಗೆ ಭೀತಿ ಮತ್ತು ದ್ವೇಷ) ಹರಡುತ್ತಿದೆ ಎಂದು ಹಲವು ಮುಸ್ಲಿಂ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ಧರ್ಮ ಧ್ರುವೀಕರಣ ಉದ್ದೇಶವನ್ನು ಸಿನಿಮಾ ಹೊಂದಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ವಿರೋಧ–ಪ್ರತಿಭಟನೆಗಳ ನಡುವೆಯೂ ಮೇ 5ರಂದು ರಾಜ್ಯದ 19 ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆಗೊಂಡಿತ್ತು ‘ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

’ಚಿತ್ರ ಬಿಡುಗಡೆಗೊಂಡ 21 ಚಿತ್ರಮಂದಿರಗಳಲ್ಲಿ 25 ಡಿಎಸ್ಪಿಗಳು ಸೇರಿದಂತೆ 965 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆ ಮೂಲಕ ಸಂವಿಧಾನದ ಪರಿಚ್ಛೇದ 19(1)(ಎ) ಅಡಿಯಲ್ಲಿ ಖಾತರಿಪಡಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಲಾಗಿತ್ತು‘ ಎಂದು ತಿಳಿಸಿದೆ.

‘ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಬಂದಿದ್ದು, ಚಿತ್ರಮಂದಿರದ ಮಾಲೀಕರೆ ಚಿತ್ರ ಪ್ರದರ್ಶನ ನಿಲ್ಲಿಸಲು ನಿರ್ಧರಿಸಿದ್ದರು. ಚಿತ್ರ ನಿಷೇಧಿಸುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ ಎಂಬ ಆರೋಪಕ್ಕೆ ಯಾವುದೇ ಹುರುಳಿಲ್ಲ‘ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT