ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯಿಂದ ಉತ್ತರ–ದಕ್ಷಿಣ ವಿಭಜನೆ ಟೂಲ್‌ಕಿಟ್‌ ಮಾರಾಟ: ಕಾಂಗ್ರೆಸ್‌

ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಹೇಳಿಕೆಗೆ ಸ್ಪಷ್ಟನೆ
Last Updated 24 ಫೆಬ್ರುವರಿ 2021, 12:23 IST
ಅಕ್ಷರ ಗಾತ್ರ

ನವದೆಹಲಿ: 'ಉತ್ತರ–ದಕ್ಷಿಣ ವಿಭಜನೆಯ ಟೂಲ್‌ಕಿಟ್‌ ಅನ್ನು ಬಿಜೆಪಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವಕಾಶವಾದಿ. ಕೇರಳದಲ್ಲಿ ಮಾಡಿದ ಭಾಷಣದಲ್ಲಿ ಉತ್ತರ ಭಾರತೀಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ’ ಎಂದು ಬಿಜೆಪಿಯ ಹಲವು ಮುಖಂಡರು ನಡೆಸಿದ ವಾಗ್ದಾಳಿಗೆ ಕಾಂಗ್ರೆಸ್‌ ಈ ಪ್ರತ್ಯುತ್ತರ ನೀಡಿದೆ.

ತಿರುವನಂತಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘15 ವರ್ಷಗಳ ಕಾಲ ಉತ್ತರ ಭಾರತದಲ್ಲಿ ಸಂಸದನಾಗಿದ್ದೆ. ಅಲ್ಲಿನ ರಾಜಕೀಯವೇ ವಿಭಿನ್ನವಾಗಿತ್ತು. ಕೇರಳಕ್ಕೆ ಬಂದ ಮೇಲೆ ದಿಢೀರನೆ ಹೊಸತನ ಕಾಣಿಸಿತು. ಇಲ್ಲಿನ ಜನರು ನೈಜ ವಿಷಯಗಳು ಮತ್ತು ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಕೇವಲ ತೋರಿಕೆಯ ವಿಷಯಗಳ ಬದಲು ನೈಜ ವಿಷಯಗಳ ಬಗ್ಗೆ ಗಮನಹರಿಸುತ್ತಾರೆ’ ಎಂದು ಹೇಳಿದ್ದರು.

ಬುಧವಾರ ಈ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ ಸುರ್ಜೇವಾಲಾ, ‘ತಮಗೆ ಅಗತ್ಯವಿರುವ ನೈಜ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವಂತೆ ರಾಹುಲ್‌ ಗಾಂಧಿ ಜನತೆಗೆ ಕರೆ ನೀಡಿದ್ದಾರೆ. ಅದು ಕೇಂದ್ರ ಅಥವಾ ರಾಜ್ಯ ಸರ್ಕಾರ ಇರಬಹುದು. ಜತೆಗೆ, ಬಿಜೆಪಿ ಮಾರಾಟ ಮಾಡುವ ತೋರಿಕೆಯ ಟೂಲ್‌ಕಿಟ್‌ ಕಥೆಗಳನ್ನು ಕಡೆಗಣಿಸುವಂತೆಯೂ ಅವರು ಹೇಳಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಉತ್ತರ–ದಕ್ಷಿಣ ವಿಭಜನೆಯ ಟೂಲ್‌ಕಿಟ್‌ ಅಳವಡಿಸಿಕೊಂಡಿರುವ ಬಿಜೆಪಿ, ಸುದ್ದಿ ವಾಹಿನಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ. ಜನತೆಯ ನಿಜವಾದ ಸಮಸ್ಯೆಗಳಿಂದ ದೇಶದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಕೇವಲ ತೋರಿಕೆಯ ಮತ್ತು ಪೊಳ್ಳು ವಿಷಯಗಳನ್ನು ಪ್ರತಿ ದಿನ ಪ್ರಸ್ತಾಪಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

‘ಪ್ರಸ್ತುತ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬಗ್ಗೆ ಚರ್ಚೆಯಾಗಬೇಕಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸಂಕಷ್ಟದಲ್ಲಿವೆ. ಸಂವಿಧಾನದ ಮೇಲೆ ದಾಳಿ ಮಾಡಲಾಗುತ್ತದೆ. ಜತೆಗೆ, ಸರ್ಕಾರದ ನೀತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸುವ ಮತ್ತು ಮಾತನಾಡುವ ಹಕ್ಕನ್ನು ಜನರು ಕಳೆದುಕೊಳ್ಳುತ್ತಿದ್ದಾರೆ’ ಎಂದು ದೂರಿದ್ದಾರೆ.

ಉತ್ತರ ಪ್ರದೇಶದ ಅಮೇಠಿ ಕ್ಷೇತ್ರವನ್ನು ರಾಹುಲ್‌ ಗಾಂಧಿ 2004ರಿಂದ ಪ್ರತಿನಿಧಿಸುತ್ತಿದ್ದರು. ಬಳಿಕ, 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಮೇಠಿ ಮತ್ತು ಕೇರಳದ ವಯನಾಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅಮೇಠಿಯಲ್ಲಿ ಪರಾಭವಗೊಂಡಿದ್ದ ರಾಹುಲ್‌, ವಯನಾಡುನಲ್ಲಿ ಜಯಗಳಿಸಿದರು.

‘ರಾಹುಲ್‌ ಗಾಂಧಿ ಮತ್ತು ಅವರ ಕುಟುಂಬದ ಸದಸ್ಯರು ಹಲವು ಬಾರಿ ಅಮೇಠಿಯಿಂದ ಜಯಗಳಿಸಿದ್ದರೂ ಆ ಕ್ಷೇತ್ರದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದು ಉತ್ತರ ಭಾರತ ವಿರೋಧಿ ಹೇಳಿಕೆಯಾಗಿದ್ದು, ಅವಕಾಶವಾದಿಯಾಗಿರುವುದಕ್ಕೆ ಸಾಕ್ಷಿ’ ಎಂದು ಬಿಜೆಪಿ ಮುಖಂಡರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT