ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಯಾವುದೇ ಸಂಸ್ಥೆಯ ವಿರುದ್ಧ ಅಲ್ಲ: ಮಮತಾ ಬ್ಯಾನರ್ಜಿ

Published 20 ಮೇ 2024, 15:25 IST
Last Updated 20 ಮೇ 2024, 15:25 IST
ಅಕ್ಷರ ಗಾತ್ರ

ಒಂಡಾ‌: ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘದ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ತಾವು ಯಾವುದೇ ಸಂಘ ಸಂಸ್ಥೆಯ ವಿರುದ್ಧ ಅಲ್ಲ. ಆದರೆ, ರಾಜಕಾರಣದಲ್ಲಿ ತೊಡಗಿದ್ದ ಒಂದಿಬ್ಬರು ವ್ಯಕ್ತಿಗಳನ್ನು ಟೀಕಿಸಿದ್ದೆ ಅಷ್ಟೇ ಎಂದು ಸೋಮವಾರ ತಿಳಿಸಿದ್ದಾರೆ.

ಈ ಎರಡು ಸಂಸ್ಥೆಗಳ ಕೆಲವು ಸನ್ಯಾಸಿಗಳು ಬಿಜೆಪಿಯ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶನಿವಾರ ಆರೋಪಿಸಿದ್ದರು. ಪ್ರಧಾನಿ ಮೋದಿ ಸೇರಿದಂತೆ ಹಲವರು ಮಮತಾ ಹೇಳಿಕೆಯನ್ನು ಟೀಕಿಸಿದ್ದರು.

ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು, ‘ನಾನು ರಾಮಕೃಷ್ಣ ಮಿಷನ್ ವಿರುದ್ಧ ಇಲ್ಲ. ನಾನೇಕೆ ಅದನ್ನು ಅವಮಾನಿಸಲಿ. ನಾನು ಕಾರ್ತಿಕ್ ಮಹಾರಾಜ್ ಬಗ್ಗೆ ಮಾತನಾಡಿದ್ದೆ. ಅವರು ರೆಜಿನಗರ್‌ನ ಮತದಾನದ ಬೂತ್‌ನಲ್ಲಿ ಟಿಎಂಸಿ ಕಾರ್ಯಕರ್ತ ಕುಳಿತುಕೊಳ್ಳಲು ಅವಕಾಶ ನೀಡಿರಲಿಲ್ಲ’ ಎಂದು ತಿಳಿಸಿದರು.

ಮುರ್ಶಿದಾಬಾದ್ ಜಿಲ್ಲೆಯ ಭಾರತ್ ಸೇವಾಶ್ರಮ ಸಂಘದ ಸನ್ಯಾಸಿಯೊಬ್ಬರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ರೆಜಿನಗರ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಾಗ ಅವರು ಜನರನ್ನು ಪ್ರಚೋದಿಸಿದ್ದರು ಎಂದು ಆರೋಪಿಸಿದರು.

ಅವರು ಬಿಜೆಪಿಗೆ ಕೆಲಸ ಮಾಡುವುದಿದ್ದರೆ ಮಾಡಲಿ. ಆದರೆ, ಬಿಜೆಪಿ ಬ್ಯಾಡ್ಜ್ ಹಾಕಿಕೊಂಡು ಮಾಡಲಿ ಎಂದು ಪ್ರತಿಪಾದಿಸಿದರು.

ಮಮತಾಗೆ ನೋಟಿಸ್ (ಕೋಲ್ಕತ್ತ ವರದಿ): ಮುರ್ಶಿದಾಬಾದ್‌ನ ಭಾರತ್ ಸೇವಾಶ್ರಮ ಸಂಘದ ಬಗ್ಗೆ ಮಮತಾ ಬ್ಯಾನರ್ಜಿ ಮಾನಹಾನಿಕರ ಹೇಳಿಕೆ ನೀಡಿದ್ದು, ಅದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಸಂಘದ ಸ್ವಾಮಿ ಪ್ರದೀಪ್ತಾನಂದ ಮಹಾರಾಜ್ ಸೋಮವಾರ ಮಮತಾ ಅವರಿಗೆ ನೋಟಿಸ್ ಕಳುಹಿಸಿದ್ದಾರೆ.

ಮುಖ್ಯಮಂತ್ರಿಗೆ ನೋಟಿಸ್ ಕಳುಹಿಸಿರುವುದನ್ನು ಖಚಿತಪಡಿಸಿದ ಪ್ರದೀಪ್ತಾನಂದ (ಕಾರ್ತಿಕ್ ಮಹಾರಾಜ್), ‘ಅವರು ವೈಯಕ್ತಿಕವಾಗಿ ನನ್ನ ಮಾನಹಾನಿ ಮಾಡಿದ್ದರೆ ನಾನು ಅದರ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಸನ್ಯಾಸಿಗಳಾದ ನಾವು ವೈಯಕ್ತಿಕ ಟೀಕೆ ಬಗ್ಗೆ ಚಿಂತಿಸುವುದಿಲ್ಲ. ಆದರೆ, ಅವರು ಸಂಘವನ್ನು ಅಪಮಾನಿಸಿದ್ದು, ಅದು ಸ್ವೀಕಾರಾರ್ಹವಲ್ಲ’ ಎಂದು ಹೇಳಿದ್ದಾರೆ.

Cut-off box - ‘ದಾಳಿಗೆ ಟಿಎಂಸಿ ಪ್ರಚೋದನೆ’ ಝಾಡ್‌ಗ್ರಾಮ (ಪಶ್ಚಿಮ ಬಂಗಾಳ) (ಪಿಟಿಐ): ರಾಮಕೃಷ್ಣ ಆಶ್ರಮದ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಟಿಎಂಸಿಯು ತನ್ನ ಮತ ಬ್ಯಾಂಕ್ ಅನ್ನು ಓಲೈಸಲು ಸನ್ಯಾಸಿಗಳ ವಿರುದ್ಧದ ದಾಳಿಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದ ಝಾಡ್‌ಗ್ರಾಮದಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು ‘ರಾಜ್ಯದ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಹೊಣೆಯನ್ನು ಟಿಎಂಸಿ ಹೊತ್ತಿರುವುದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿಯು ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘದ ಸನ್ಯಾಸಿಗಳಿಗೆ ಬೆದರಿಕೆ ಒಡ್ಡಿದ್ದಾರೆ. ಭಾನುವಾರ ರಾತ್ರಿ ರಾಮಕೃಷ್ಣ ಆಶ್ರಮದ ಮೇಲೆ ದಾಳಿ ನಡೆದಿದೆ. ರಾಜ್ಯದ ಜನ ಇದನ್ನೆಲ್ಲ ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT