ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ ವರದಿ | ಜೋಶಿಮಠ ಪರಿಸ್ಥಿತಿ: ಎನ್‌ಟಿಪಿಸಿ ವಿರುದ್ಧ ನಿವಾಸಿಗಳ ಸಮರ

ತ‍ಪೋವನ ವಿಷ್ಣುಗಢ ಜಲವಿದ್ಯುತ್ ಯೋಜನೆಯಿಂದ ನಿರಂತರ ದುರಂತ: ಜನರ ಆಕ್ರೋಶ
Last Updated 14 ಜನವರಿ 2023, 19:31 IST
ಅಕ್ಷರ ಗಾತ್ರ

ಜೋಶಿಮಠ (ಉತ್ತರಾಖಂಡ): ಹಿಮಾಲಯದ ತಪ್ಪಲಿನಲ್ಲಿರುವ ಪಟ್ಟಣದ ಪ್ರತಿ ಕಟ್ಟಡದ ಗೋಡೆ ಮೇಲೆ ‘ಎನ್‌ಟಿಪಿಸಿ ಗೋ ಬ್ಯಾಕ್‌’ ಕರಪತ್ರ ಕಾಣಸಿಗುತ್ತದೆ. ಜೋಶಿಮಠದ ಈಗಿನ ದುರಂತಮಯ ಪರಿಸ್ಥಿತಿಗೆ ಎನ್‌ಟಿಪಿಸಿಯ ಜಲವಿದ್ಯುತ್‌ ಯೋಜನೆಯೇ ಮೂಲ ಕಾರಣ ಎಂದು ಇಲ್ಲಿನ ನಿವಾಸಿಗಳು ಬೊಟ್ಟು ಮಾಡಿ ಹೇಳುತ್ತಾರೆ.

ತಪೋವನ ವಿಷ್ಣುಗಢದಲ್ಲಿ ಎನ್‌ಟಿಪಿಸಿ ಕೈಗೆತ್ತಿಕೊಂಡಿರುವ 540 ಮೆಗಾವ್ಯಾಟ್‌ ಸಾಮರ್ಥ್ಯದ ಜಲವಿದ್ಯುತ್‌ ಯೋಜನೆಯಿಂದಾಗಿ ಹಲವು ದುರಂತಗಳು ಸಂಭವಿಸಿವೆ. ಆದರೂ, ಆಡಳಿತ ವ್ಯವಸ್ಥೆ ಬುದ್ಧಿ ಕಲಿತಿಲ್ಲ ಎಂದು ಇಲ್ಲಿನ ಜನರು ದೂರುತ್ತಾರೆ.

ಈ ಯೋಜನೆಗೆ ಚಾಲನೆ ನೀಡಿದ್ದು 2006ರಲ್ಲಿ. ಆಗ ಯೋಜನಾ ಮೊತ್ತ ₹2980 ಕೋಟಿ ಇತ್ತು. 2013ರಲ್ಲಿ ಈ ಯೋಜನೆ ಪೂರ್ಣಗೊಳ್ಳಬೇಕಿತ್ತು. ಹಲವು ಗಡುವುಗಳನ್ನು ಮೀರಿದರೂ ಜಲವಿದ್ಯುತ್‌ ಉತ್ಪಾದನೆ ಶುರುವಾಗಿಲ್ಲ. ಈಗ ಯೋಜನಾ ಮೊತ್ತ ₹7,105 ಕೋಟಿಗೆ ಜಿಗಿದಿದೆ. ಈಗಲೂ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಎನ್‌ಟಿಪಿಸಿ ಅಧಿಕಾರಿಗಳು ಹೇಳುತ್ತಾರೆ.

ಎನ್‌ಟಿಪಿಸಿ ಜಲವಿದ್ಯುತ್ತಿಗೆಂದು ಸುರಂಗ ಕೊರೆದಿದೆ. ಅದಕ್ಕೆಂದು ಧೌಲಿಗಂಗಾ ಮತ್ತು ರಿಷಿಗಂಗಾ ಉಪನದಿಗಳಿಗೆ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಸುರಂಗದ ಮೂಲಕ ಅಲಕ್‌ನಂದಾ ನದಿಗೆ ಹರಿಸಲಾಗುತ್ತದೆ. ಈ ಯೋಜನೆಯ ಸುರಂಗವು ಜೋಶಿಮಠದ ಸಮೀಪದಲ್ಲಿ ಸಾಗುತ್ತದೆ. ಸುರಂಗದ ನಿರ್ಗಮನ ದ್ವಾರದಲ್ಲಿರುವ ಟರ್ಬೈನ್‌ಗಳ ಮೂಲಕ ನೀರನ್ನು ಹಾಯಿಸಿ ಜಲವಿದ್ಯುತ್ ಉತ್ಪಾದಿಸಲಾಗುತ್ತದೆ. ಎಲ್ಲ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷ್ಯಿಸಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸುರಂಗ ಕೊರೆದಿದ್ದರಿಂದ ಮನೆಗಳಿಗೆ ಹಾನಿಯಾಗಿದೆ ಎಂಬುದು ಜೋಶಿಮಠದ ನಿವಾಸಿಗಳ ಆರೋಪ.

ಈ ಯೋಜನೆಯ ವಿರುದ್ಧ ಇಲ್ಲಿನ ನಿವಾಸಿಗಳು ಸರಣಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ‘ಇಲ್ಲಿ ಅಧ್ಯಯನ ನಡೆಸಿದ ವಿಜ್ಞಾನಿಗಳು ಈ ವಿಷಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಸ್ತೃತ ಅಧ್ಯಯನದ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದಾರೆ. ವಿಜ್ಞಾನಿಗಳ ಸಲಹೆಯನ್ನು ಪಕ್ಕಕ್ಕಿಟ್ಟು ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸುತ್ತಾರೆ.

‘ಯೋಜನೆಯನ್ನು ಸಂಪರ್ಕಿಸುವ 12 ಕಿ.ಮೀ. ಉದ್ದದ ಸುರಂಗವು ಜೋಶಿಮಠದಿಂದ 1 ಕಿ.ಮೀ. ದೂರದಲ್ಲಿದೆ. ಪಟ್ಟಣ ಕುಸಿಯುತ್ತಿರುವುದಕ್ಕೂ ಇದಕ್ಕೂ ಸಂಬಂಧ ಇಲ್ಲ. ಈ ಸುರಂಗವು ನೆಲ ಮಟ್ಟದಿಂದ ಕನಿಷ್ಠ ಒಂದು ಕಿ.ಮೀ. ಆಳದಲ್ಲಿದೆ. ಸುರಂಗವು ಜೋಶಿಮಠದ ಅಡಿಯಲ್ಲಿ ಸಾಗಿಲ್ಲ. ಜತೆಗೆ ಈಗ ಸುರಂಗ ಕಾಮಗಾರಿ ನಡೆಯುತ್ತಿಲ್ಲ’ ಎಂದು ಎನ್‌ಟಿಪಿಸಿ ಸಮಜಾಯಿಷಿ ನೀಡಿದರೂ ಇಲ್ಲಿನ ಜನರು ಒಪ್ಪಲು ತಯಾರಿಲ್ಲ. ‘ಒಂದೂವರೆ ದಶಕಗಳಿಂದ ಎನ್‌ಟಿಪಿಸಿ ಹೇಳಿರುವ ಹಲವು ಕಥೆಗಳನ್ನು ಕೇಳಿದ್ದೇವೆ. ಈಗಿನ ಹೊಸ ಕಥೆಯನ್ನು ಕೇಳಲು ತಯಾರಿಲ್ಲ. ಈ ಯೋಜನೆಯಿಂದ ಸಾಕಷ್ಟು ನೋವು ಅನುಭವಿಸಿದ್ದೇವೆ. ಇದು ಇಲ್ಲಿಗೆ ಕೊನೆಗೊಳ್ಳಬೇಕು’ ಎಂದು ಅವರು ಕೋಪದಿಂದ ಹೇಳುತ್ತಾರೆ.

‘ಯೋಜನೆಯ ಸುರಂಗವು ಜೋಶಿಮಠದ ಅಡಿಯಲ್ಲಿಯೇ ಹಾದು ಹೋಗುತ್ತದೆ. ಹೀಗಾಗಿ ಜೋಶಿಮಠದ ತಳಭಾಗವು ಸಡಿಲ ಮತ್ತು ಅಸ್ಥಿರವಾಗುತ್ತಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎಂದು ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯ ಸೂರಜ್ ಸೈಲಾನಿ ದೂರುತ್ತಾರೆ.

’2021ರಲ್ಲಿ ಅನಿರೀಕ್ಷಿತವಾಗಿ ಮೇಘಸ್ಫೋಟ ಆಗಿದ್ದರಿಂದ ಹಠಾತ್‌ ಪ್ರವಾಹ ಬಂದು ರಸ್ತೆಗಳು, ಸೇತುವೆಗಳು, ಅಣೆಕಟ್ಟುಗಳು ಕೊಚ್ಚಿಕೊಂಡು ಹೋದವು. ಆ ದುರಂತದಲ್ಲಿ ಸುರಂಗ ನಿರ್ಮಾಣದ ಬೃಹತ್‌ ಯಂತ್ರಗಳ ಸಮೇತ 190ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿ 35 ಜನರ ಶವ ಸಿಕ್ಕಿತ್ತು. ಇಷ್ಟೆಲ್ಲ ಆದರೂ ಎನ್‌ಟಿ‍‍‍‍‍‍ಪಿಸಿಯ ಅಧಿಕಾರಿಗಳು ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಈ ಯೋಜನೆ ಇಡೀ ಪಟ್ಟಣವನ್ನೇ ನಾಶ ಮಾಡಲು ಹೊರಟಿದೆ. ಜನರನ್ನು ಬಲಿ ತೆಗೆದುಕೊಳ್ಳುವ ಇಂತಹ ಯೋಜನೆ ಬೇಕೇ’ ಎಂದು ಅವರು ಪ್ರಶ್ನಿಸುತ್ತಾರೆ. ‌‌

‘ಸುರಂಗ ನಿರ್ಮಾಣಕ್ಕಾಗಿ ನಿರಂತರ ಸ್ಫೋಟಗಳನ್ನು ಮಾಡಲಾಗಿದೆ. ಸುರಂಗವು ಪರ್ವತದಲ್ಲಿನ ಹಲವು ಅಂತರ್ಜಲ ಮೂಲಗಳಿಗೆ ಧಕ್ಕೆ ಉಂಟುಮಾಡಿದೆ. ಹೀಗಾಗಿ ಅಂತರ್ಜಲ ಮಟ್ಟ ಕುಸಿದಿದೆ. ಇಡೀ ಪ್ರದೇಶವೇ ಟೊಳ್ಳಾಗಿದೆ. ಈ ಯೋಜನೆಗೆ ಪಟ್ಟಣಕ್ಕೆ ಅಪಾಯ ಕಾದಿದೆ ಎಂದು ವರ್ಷದ ಹಿಂದೆಯೇ ಎಚ್ಚರಿಸಿದ್ದೆವು. ಅದರ ಬಗ್ಗೆ ಗಮನ ಹರಿಸಲಿಲ್ಲ. ಅದರ ಫಲವನ್ನು ಈಗ ಉಣ್ಣುತ್ತಿದ್ದೇವೆ. ಇಲ್ಲಿ ನಿವಾಸಿಗಳು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ’ ಎಂದು ಜೋಶಿಮಠ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಅತುಲ್‌ ಸಾಥಿ ಹೇಳುತ್ತಾರೆ.

‘ಇಲ್ಲಿನ ಶಂಕರಾಚಾರ್ಯ ದೇವಸ್ಥಾನಕ್ಕೂ ಹಾನಿಯಾಗಿದೆ. ದೇವಸ್ಥಾನದ ಹೊರಭಾಗದಲ್ಲಿ ಹಲವು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಪುರಾತನ ಧಾರ್ಮಿಕ ನಗರವನ್ನು ಉಳಿಸಲು ಈಗಲಾದರೂ ಸರ್ಕಾರ ಮುಂದಾಗಬೇಕು’ ಎಂದು ಸ್ವಾಮಿ ಅವಿಮುಕ್ತಾನಂದ ಸ್ವಾಮೀಜಿ ಒತ್ತಾಯಿಸಿದರು. ಈ ಪಟ್ಟಣವನ್ನು ಉಳಿಸುವಂತೆ ಒತ್ತಾಯಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT