ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದಿನ 10 ವರ್ಷ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ಪಟ್ನಾಯಕ್

Published 12 ಮೇ 2024, 3:46 IST
Last Updated 12 ಮೇ 2024, 3:46 IST
ಅಕ್ಷರ ಗಾತ್ರ

ಭುವನೇಶ್ವರ: ಮುಂದಿನ 10 ವರ್ಷಗಳು ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಸತತ ಆರನೇ ಬಾರಿಗೆ ಬಿಜೆಡಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಹೇಳಿದರು.

ಜೂನ್‌ 10ರಂದು ಭುವನೇಶ್ವರದಲ್ಲಿ ಬಿಜೆಪಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಅವರು ತಿರುಗೇಟು ನೀಡಿದರು.

‘ಜೂನ್ 10ರಂದು ಏನೂ ಆಗುವುದಿಲ್ಲ. ಜೂನ್ 10 ಬಿಡಿ, ಮುಂದಿನ 10 ವರ್ಷಗಳಲ್ಲಿ ರಾಜ್ಯದ ಜನರ ಮನಗೆಲ್ಲಲು ಬಿಜೆಪಿಗೆ ಅಸಾಧ್ಯ. ಸತತ ಆರನೇ ಬಾರಿಗೆ ಬಿಜೆಡಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಅವರು ನುಡಿದರು.

ಇದೇ ವೇಳೆ ಬಿಜು ಪಟ್ನಾಯಕ್ ಅವರಿಗೆ ಭಾರತ ರತ್ನ ನೀಡದಿರುವ ಬಗ್ಗೆಯೂ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು.

‘ಒಡಿಶಾದಲ್ಲಿ ಸುಮಾರು ವೀರ ಪುತ್ರರಿದ್ದಾರೆ. ಆ ಪೈಕಿ ಕೆಲವರ ಬಗ್ಗೆ ನೀವು ಮಾತನಾಡಿದ್ದೀರಿ. ಬಿಜು ಪಟ್ನಾಯಕ್‌ ಸೇರಿ, ಅವರಲ್ಲಿ ಯಾರೂ ಭಾರತ ರತ್ನಕ್ಕೆ ಅರ್ಹರಿರಲಿಲ್ಲವೇ?’ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ 2014 ಹಾಗೂ 2019ರಲ್ಲಿ ನೀಡಿದ್ದ ಭರವಸೆಗಳು ಜನರಿಗೆ ತಿಳಿದಿದೆ. ಕಳೆದ 24 ವರ್ಷಗಳಿಂದ ಬಿಜೆಡಿ ಸರ್ಕಾರವನ್ನೂ ಅವರ ನೋಡಿದ್ದಾರೆ. ಬೆಲೆ ಏರಿಕೆ ನಿಯಂತ್ರಣ, 2 ಕೋಟಿ ಉದ್ಯೋಗ ಸೃಷ್ಠಿ, ಎಲ್‌ಪಿಜಿ, ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಕೆ, ಕುಗ್ರಾಮಗಳಿಗೆ ಮೊಬೈಲ್ ಸಂಪರ್ಕ ಕಲ್ಪಿಸುವುದು ಮುಂತಾದ ನಿಮ್ಮ ಭರವಸೆಗಳು ಜನರಿಗೆ ನೆನಪಿದೆ. ಚುನಾವಣೆ ಬಂದಾಗ ನಿಮಗೆ ಒಡಿಶಾ ನೆನಪಾಗುತ್ತದೆ. ಅದರಿಂದ ಪ್ರಯೋಜವಿಲ್ಲ’ ಎಂದು ಕುಟುಕಿದರು.

ಸಂಸ್ಕೃತವನ್ನು ಪ್ರಚಾರ ಮಾಡಲು ₹1,000 ಕೋಟಿ ನಿಧಿ ಹಂಚಿಕೆ ಮಾಡಿದ್ದೀರಿ, ಒಡಿಯಾ ಶಾಸ್ತ್ರೀಯ ಭಾಷೆಯಾಗಿದ್ದರೂ ಹಣ ಕೊಡಲಿಲ್ಲ. ನಾನು ಶಾಸ್ತ್ರೀಯ ಒಡಿಸ್ಸಿ ಸಂಗೀತಕ್ಕೆ ಮಾನ್ಯತೆ ನೀಡುವಂತೆ ಕಳುಹಿಸಿದ್ದ ಪ್ರಸ್ತಾವನೆಗಳನ್ನು ಎರಡು ಬಾರಿ ತಿರಸ್ಕರಿಸಿದ್ದೀರಿ’ ಎಂದು ಅವರು ದೂರಿದರು.

ರಾಜ್ಯದ ರೈತರನ್ನು, ಕನಿಷ್ಠ ಬೆಂಬಲ ಬೆಲೆಯನ್ನು ನೀವು ಮರೆತಿದ್ದೀರಿ. ಒಡಿಶಾದ ಜನರಿಗೆ ಉಪಯೋಗವಾಗಲು ಕರಾವಳಿ ಹೆದ್ದಾರಿ ನಿರ್ಮಿಸುವುದಾಗಿ ಹೇಳಿ ಅದನ್ನೂ ಮರೆತಿದ್ದೀರಿ ಎಂದು ಪಟ್ನಾಯಕ್ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT