ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರಿಗೆ ಸೇವಾ ಸೌಲಭ್ಯ ಘೋಷಿಸಿದ ಒಡಿಶಾ ಸಿ.ಎಂ

Published 10 ಮಾರ್ಚ್ 2024, 14:28 IST
Last Updated 10 ಮಾರ್ಚ್ 2024, 14:28 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಸರ್ಕಾರೇತರ ಮತ್ತು ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಭಾನುವಾರ ವಿವಿಧ ಸೇವಾ ಸೌಲಭ್ಯಗಳನ್ನು ಘೋಷಿಸಿದ್ದಾರೆ.

ಗುತ್ತಿಗೆ ಆಧಾರಿತ (ಬ್ಲಾಕ್‌ ಅನುದಾನ) ವ್ಯವಸ್ಥೆ ಅಡಿಯಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ 15 ದಿನಗಳ ವಾರ್ಷಿಕ ರಜೆ, ಮಹಿಳೆಯರಿಗೆ ವಾರ್ಷಿಕ ರಜೆಯ ಜೊತೆಗೆ ಎರಡು ಹೆರಿಗೆಗಳಿಗೆ 180 ದಿನಗಳ ಹೆರಿಗೆ ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

ಈ ಸೌಲಭ್ಯಗಳನ್ನು ಹೊಸ ಅನುದಾನಿತ ಪ್ರೌಢ ಶಾಲೆಗಳ, ಸಂಸ್ಕೃತ ಶಾಲೆಗಳ, ಹಿರಿಯ ಪ್ರಾಥಮಿಕ ಶಾಲೆಗಳ ಹಾಗೂ ಮದರಸಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೂ ವಿಸ್ತರಿಸಲಾಗುವುದು ಎಂದು ಹೇಳಿದೆ.

ಗುತ್ತಿಗೆ ಆಧಾರಿತ ವ್ಯವಸ್ಥೆ ಅಡಿಯಲ್ಲಿ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಶಾಲೆಗಳ ಶಿಕ್ಷಕರನ್ನು ಹೆಚ್ಚಿನ ವೇತನಶ್ರೇಣಿಯಲ್ಲಿ ನೇಮಕಗೊಳಿಸಲಾಗುವುದು ಎಂದೂ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಗುತ್ತಿಗೆ ಆಧಾರಿತ ವ್ಯವಸ್ಥೆ ಅಡಿಯಲ್ಲಿ ನೇಮಕಗೊಂಡವರು ಸೇವಾವಧಿಯಲ್ಲಿ ಮೃತಪಟ್ಟರೆ ನೀಡುತ್ತಿದ್ದ ಪರಿಹಾರಧನವನ್ನು ₹2 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ನೀಡುವ ಪರಿಹಾರಧನವನ್ನು ₹1.50 ಲಕ್ಷದಿಂದ ₹3.50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 

ಈ ವ್ಯವಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ನಿವೃತ್ತಿ ವೇಳೆ (60 ವರ್ಷಕ್ಕೆ) ₹10 ಲಕ್ಷ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ₹5 ಲಕ್ಷ ನೀಡಲು ರಾಜ್ಯ ಸಂಪುಟ ಸಭೆ ನಿರ್ಧರಿಸಿದ ಮರುದಿನ ಈ ಸೇವಾಸೌಲಭ್ಯಗಳನ್ನು ಘೋಷಿಸಲಾಗಿದೆ. ಈ ನಿರ್ಧಾರಕ್ಕೆ ಶಿಕ್ಷಕರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT