ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನೇಶ್ವರ | ತೆರಿಗೆ ವಂಚನೆ: ₹ 220 ಕೋಟಿ ನಗದು ಜಪ್ತಿ

ಒಡಿಶಾದ ಡಿಸ್ಟಿಲರಿ ಕಂಪನಿ= 156 ಚೀಲಗಳಲ್ಲಿರುವ ಹಣ- ಎಣಿಕೆಗೆ 12ಕ್ಕೂ ಹೆಚ್ಚು ಯಂತ್ರಗಳ ಬಳಕೆ
Published 8 ಡಿಸೆಂಬರ್ 2023, 16:04 IST
Last Updated 8 ಡಿಸೆಂಬರ್ 2023, 16:04 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಒಡಿಶಾ ಮೂಲದ ಡಿಸ್ಟಿಲರಿ ಸಮೂಹದ ಕಚೇರಿ ಮೇಲಿನ ತಪಾಸಣೆಯನ್ನು ಶುಕ್ರವಾರವೂ ಮುಂದುವರಿಸಿರುವ ಆ‌ದಾಯ ತೆರಿಗೆ ಇಲಾಖೆ ಅಧಿಕಾರಿಗಳು 156 ಚೀಲಗಳಲ್ಲಿದ್ದ ₹220 ಕೋಟಿ ನಗದು ಜಪ್ತಿ ಮಾಡಿದ್ದಾರೆ. ಒಟ್ಟು ಮೊತ್ತ ಸುಮಾರು ₹250 ಕೋಟಿಗೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೂ 6–7 ಚೀಲಗಳಲ್ಲಿದ್ದ ಹಣವನ್ನಷ್ಟೇ ಲೆಕ್ಕ ಹಾಕಿದ್ದು, ಅದರ ಮೊತ್ತ ₹ 20 ಕೋಟಿ ಆಗಿದೆ. ಎಣಿಕೆ ಮುಂದುವರಿದಿದೆ. ಹಣ ಎಣಿಕೆಯ 12ಕ್ಕೂ ಹೆಚ್ಚು ಯಂತ್ರ ಬಳಸಲಾಗುತ್ತಿದೆ. ಅದರ ಎಣಿಕೆ ಸಾಮರ್ಥ್ಯ ಕಡಿಮೆ ಇದ್ದು, ಪ್ರಕ್ರಿಯೆ ವಿಳಂಬವಾಗಲಿದೆ ಎಂದು ತಿಳಿಸಿದ್ದಾರೆ.

ದೇಶದ ಬೃಹತ್ ಮದ್ಯ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿರುವ, ಒಡಿಶಾ ಮೂಲದ ಬಲ್‌ದೇವ್‌ ಸಾಹು ಮತ್ತು ಸಮೂಹ ಕಂಪನಿಯ ಬೊಂಲಾಂಗಿರ್ ಕಚೇರಿ, ಇತರೆಡೆ ದಾಳಿ ಬುಧವಾರ ನಡೆದಿತ್ತು. 

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐ.ಟಿ ಅಧಿಕಾರಿಗಳು ಸಂಬಾಲ್‌ಪುರ, ಬೊಲಾಂಗಿರ್, ತಿತಿಲ್‌ಘರ್, ಬೌದ್ಧ್, ಸುಂದರ್‌ಘರ್, ರೂರ್ಕೆಲಾ, ಭುವನೇಶ್ವರದಲ್ಲಿ ದಾಳಿ ನಡೆಸಿದ್ದರು. ದಾಳಿ ಕುರಿತಂತೆ ಕಂಪನಿಯು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಕಂಪನಿ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಜಾರ್ಖಂಡ್‌ನ ಸಂಸದರನ್ನು ಸಂಪರ್ಕಿಸಲು ಪಿಟಿಐ ಸುದ್ದಿಸಂಸ್ಥೆ ಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ಅವರ ಫೋನ್‌ ಸ್ವಿಚ್ಡ್‌ ಆಫ್‌ ಆಗಿತ್ತು. ರಾಂಚಿಯ ಅವರ ಕಚೇರಿ ಸಿಬ್ಬಂದಿಯು ‘ಸಂಸದರು ಪ್ರತಿಕ್ರಿಯೆಗೆ ಲಭ್ಯವಿಲ್ಲ’ ಎಂದರು.

ಬುಧವಾರ ಐ.ಟಿ. ಅಧಿಕಾರಿಗಳು ಭುವನೇಶ್ವರದ ಪಲಸಪಲ್ಲಿಯಲ್ಲಿನ ಬೌದ್ ಡಿಸ್ಟಿಲ್ಲರಿ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯ ಮುಖ್ಯ ಕಚೇರಿ, ಅಧಿಕಾರಿಗಳ ನಿವಾಸ ಮತ್ತು ಫ್ಯಾಕ್ಟರಿ, ರಾಣಿಸತಿ ರೈಸ್‌ ಮಿಲ್‌ಗಳಲ್ಲಿಯೂ ತಪಾಸಣೆ ನಡೆಸಿದ್ದರು. 

ಆದಾಯ ತೆರಿಗೆ ಇಲಾಖೆಯ ಮಾಜಿ ಆಯುಕ್ತ ಶರತ್‌ ಚಂದ್ರ ದಾಸ್‌ ಅವರು, ‘ಒಡಿಶಾದಲ್ಲಿ ನಡೆದಿರುವ ಅತಿದೊಡ್ಡ, ಬೃಹತ್‌ ಮೊತ್ತದ ನಗದು ವಶಪಡಿಸಿಕೊಂಡಿರುವ ಪ್ರಕರಣ ಇದಾಗಿದೆ. ಇಷ್ಟು ದೊಡ್ಡ ಪ್ರಮಾಣದ ನಗದು ಜಪ್ತಿಯನ್ನು ನಾನು ಗಮನಿಸಿಲ್ಲ‘ ಎಂದು ತಿಳಿಸಿದರು.

ಸಿಬಿಐ ತನಿಖೆಗೆ ಆಗ್ರಹ: ಒಡಿಶಾದ ಬಿಜೆಪಿ ಘಟಕ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದೆ. ಬಿಜೆಪಿ ವಕ್ತಾರ ಮನೋಜ್‌ ಮಹಾಪಾತ್ರ ಅವರು, ಮದ್ಯ ವ್ಯಾಪಾರಿ ಜೊತೆಗೆ ಸಚಿವರೊಬ್ಬರು ವೇದಿಕೆಯಲ್ಲಿರುವ ಚಿತ್ರವನ್ನು ಪ್ರದರ್ಶಿಸಿದರು.

ಒಡಿಶಾದ ಅಬಕಾರಿ ಇಲಾಖೆ, ಗುಪ್ತದಳ, ಆರ್ಥಿಕ ಅಪರಾಧಗಳ ಘಟಕಗಳು ಏನು ಮಾಡುತ್ತಿವೆ ಎಂದು ಅವರು ಪ್ರಶ್ನಿಸಿದರು.

ಈ ಮಧ್ಯೆ, ಬಿಜೆಡಿ ಶಾಸಕ ಸತ್ಯನಾರಾಯಣ ಪ್ರಧಾನ್ ಅವರು, ‘ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ. ಈ ವಿಷಯದಲ್ಲಿ ಕಾನೂನು ತನ್ನ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ’ ಎಂದು ಹೇಳಿದರು.

ಲೂಟಿಯ ಪ್ರತಿ ಪೈಸೆ ಹಿಂದಿರುಗಿಸಬೇಕು: 

ಇದು ‘ಮೋದಿ ಗ್ಯಾರಂಟಿ’ –ಪ್ರಧಾನಿ  ನವದೆಹಲಿ (ಪಿಟಿಐ): ಭ್ರಷ್ಟಾಚಾರ ಕುರಿತಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ‘ಜನರಿಂದ ಲೂಟಿಮಾಡಿರುವ ಪ್ರತಿ ಪೈಸೆಯನ್ನು ಅವರು ಹಿಂದಿರುಗಿಸಬೇಕು. ಇದು ಮೋದಿ ಗ್ಯಾರಂಟಿ’ ಎಂದಿದ್ದಾರೆ.  ‘ಎಕ್ಸ್‌’ ಜಾಲತಾಣದಲ್ಲಿ ಈ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ. ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ಧೀರಜ್‌ ಪ್ರಸಾದ್ ಸಾಹು ಅವರಿಗೆ ಸೇರಿದ್ದು ಎನ್ನಲಾದ ಉದ್ಯಮ ಸಮೂಹದಿಂದ ಐ.ಟಿ ಅಧಿಕಾರಿಗಳು ₹ 200 ಕೋಟಿ ಹಣ ಜಪ್ತಿಗೆ ಸಂಬಂಧಿಸಿದಂತೆ ಮಾಧ್ಯಮ ವರದಿಯೊಂದನ್ನು ಅವರು ಹಂಚಿಕೊಂಡಿದ್ದಾರೆ.  

‘ಎತ್ತರಕ್ಕೆ ಜೋಡಿಸಿಟ್ಟಿರುವ ಕರೆನ್ಸಿ ನೋಟುಗಳನ್ನು ದೇಶದ ಜನರು ಒಮ್ಮೆ ನೋಡಬೇಕು. ನಂತರ ಪ್ರಾಮಾಣಿಕತೆ ಕುರಿತು ಆವರ ಪಕ್ಷದವರು ಮಾತನಾಡುವುದನ್ನು ಕೇಳಬೇಕು’ ಎಂದು ಮೋದಿ ಹೇಳಿದರು. ಮಾಧ್ಯಮ ವರದಿ ಜೊತೆಗೆ ‘ಆಲ್ಮೇರಾಗಳಲ್ಲಿ ನೋಟುಗಳನ್ನು ಜೋಡಿಸಿಟ್ಟಿರುವ‘ ಚಿತ್ರವು ಪ್ರಕಟವಾಗಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT