ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಗೋಯಿ ಹೇಳಿಕೆಗೆ ನ್ಯಾಯಿಕ ಚೌಕಟ್ಟಿಲ್ಲ: ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್

ರಾಜ್ಯಸಭೆಯಲ್ಲಿ ಸಂವಿಧಾನದ ಮೂಲ ರಚನೆ ಪ್ರಶ್ನಿಸಿದ ನಿವೃತ್ತ ಸಿಜೆಐ
Published 8 ಆಗಸ್ಟ್ 2023, 14:39 IST
Last Updated 8 ಆಗಸ್ಟ್ 2023, 14:39 IST
ಅಕ್ಷರ ಗಾತ್ರ

ನವದೆಹಲಿ: ‘ನ್ಯಾಯಾಲಯಗಳ ಕಾರ್ಯ ವ್ಯಾಪ್ತಿಯಿಂದ ನ್ಯಾಯಾಧೀಶರು ಹೊರಹೋದ ಬಳಿಕ ನೀಡುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಷ್ಟೇ ಹೊರತು, ಅವುಗಳಿಗೆ ಎಂದಿಗೂ ನ್ಯಾಯಿಕ ಚೌಕಟ್ಟು ಇರುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಸ್ಪಷ್ಟಪಡಿಸಿದ್ದಾರೆ.

ಸಿಜೆಐ ಚಂದ್ರಚೂಡ್‌ ಅಧ್ಯಕ್ಷತೆಯ ಸಾಂವಿಧಾನಿಕ ಪೀಠವು ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನದ ರದ್ದತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು, ‘ನ್ಯಾಯಶಾಸ್ತ್ರ ಆಧಾರದ ಮೇಲೆಯೇ ರಚನೆಯಾಗಿರುವ ಸಂವಿಧಾನದ ಮೂಲ ರಚನಾ ಸಿದ್ಧಾಂತವನ್ನು ಚರ್ಚೆಗೆ ಒಳಪಡಿಸಬೇಕೆಂದು ನಿಮ್ಮ ಗೌರವಾನ್ವಿತ ಸಹೋದ್ಯೊಗಿಯೇ (ನಿವೃತ್ತ ಸಿಜೆಐ ರಂಜನ್‌ ಗೊಗೋಯಿ) ಸಂಸತ್‌ನ ಮೇಲ್ಮನೆಯಲ್ಲಿ ಹೇಳಿದ್ದಾರೆ. ಮೂಲ ರಚನೆಯೇ ಅನುಮಾನಾಸ್ಪದವಾಗಿದೆ ಎಂಬುದು ಇದರರ್ಥ’ ಎಂದು ಪೀಠಕ್ಕೆ ಅರುಹಿದರು.

ಇದಕ್ಕೆ ಆಕ್ಷೇಪಿಸಿದ ಚಂದ್ರಚೂಡ್‌, ‘ಹಾಲಿ ಕರ್ತವ್ಯ ನಿರತರನ್ನಷ್ಟೇ ನೀವು ಸಹೋದ್ಯೋಗಿಗಳೆಂದು ಸಂಬೋಧಿಸಬೇಕು. ವೃತ್ತಿಯಿಂದ ಬಿಡುಗಡೆಯಾದ (ನಿವೃತ್ತ ನ್ಯಾಯಾಧೀಶರು/ ನ್ಯಾಯಮೂರ್ತಿಗಳು) ಬಳಿಕ ಅವರ ಮಾತುಗಳು ಸ್ವಂತ ಅಭಿಪ್ರಾಯಗಳಷ್ಟೇ. ಎಂದಿಗೂ ಅವು ನ್ಯಾಯಾಂಗದ ಪರಿಮಿತಿಗೆ ಒಳಪಡುವುದಿಲ್ಲ’ ಎಂದು ಹೇಳಿದರು. 

ಈ ವೇಳೆ ಮಧ್ಯಪ್ರವೇಶಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿ, ‘ನ್ಯಾಯಾಲಯದ ಕಲಾಪದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಸಂಸತ್‌ನಲ್ಲಿ ಚರ್ಚಿಸುವುದಿಲ್ಲ’ ಎಂದು ಪೀಠದ ಗಮನ ಸೆಳೆದರು. ಸಿಬಲ್‌ ಕೂಡ ಇದು ಹೌದೆಂದು ಒಪ್ಪಿಕೊಂಡರು.

ಸಾಂವಿಧಾನಿಕ ತಿದ್ದುಪಡಿ ಮೂಲಕವೂ ಭಾರತದ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು 1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗಾಗಿ, ಮೂಲ ರಚನೆಯನ್ನು ಮಾರ್ಪಡಿಸುವ ಯಾವುದೇ ಅಧಿಕಾರವು ಸಂಸತ್‌ಗೆ ಇಲ್ಲ.

ಸಂವಿಧಾನ ಬದಲಾವಣೆಗೆ ಹುನ್ನಾರ: ಕಾಂಗ್ರೆಸ್ ಟೀಕೆ

ನವದೆಹಲಿ: ರಾಜ್ಯಸಭೆಯ ಕಲಾಪದಲ್ಲಿ ಸಂವಿಧಾನ ರಚನೆಯ ಮೂಲ ಸಿದ್ಧಾಂತ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಅವರು ಅನುಮಾನ ವ್ಯಕ್ತಪಡಿಸಿರುವುದು ಖಂಡನೀಯ ಎಂದು ಕಾಂಗ್ರೆಸ್‌ ಹೇಳಿದೆ.

ಮೇಲ್ಮನೆಯಲ್ಲಿ ಸೋಮವಾರ ಮಂಡನೆಯಾದ ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಯ ವೇಳೆ ಗೊಗೋಯಿ ಅವರು, ಸಂವಿಧಾನ ರಚನೆಯ ಸಿದ್ಧಾಂತವು ಚರ್ಚಾಸ್ಪದ ವಿಷಯವಾಗಿದೆ ಎಂದಿದ್ದರು. ಕೇಶವಾನಂದ ಭಾರತಿ ಪ್ರಕರಣದ ಬಗ್ಗೆ ಮಾಜಿ ಸಾಲಿಸಿಟರ್‌ ಜನರಲ್ ಅಂಧ್ಯಾರುಜಿನ ಅವರು ಬರೆದಿರುವ ಪುಸ್ತಕವನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನಾಡಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ‘ಸಂವಿಧಾನದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಹಾಗಾಗಿ, ನಿರಂತರವಾಗಿ ದಾಳಿ ನಡೆಸುತ್ತಿದೆ. ಇದರ ಮುಂದುವರಿದ ಭಾಗವಾಗಿಯೇ ಈಗ ನಿವೃತ್ತ ಸಿಜೆಐ ಅವರನ್ನು ಹೋರಾಟದ ಕಣಕ್ಕಿಳಿದೆ’ ಎಂದು ಆಪಾದಿಸಿದ್ದಾರೆ.

‘ನಿವೃತ್ತ ಸಿಜೆಐ ಅವರೇ ಸಂವಿಧಾನದ ಮೂಲತತ್ವವನ್ನೇ ಪ್ರಶ್ನಿಸಿರುವುದು ಆಘಾತಕಾರಿ ಸಂಗತಿ. ಇದಕ್ಕೆ ಸರ್ಕಾರದ ಅನುಮೋದನೆ ಇದೆಯೇ? ಎಂಬ ಬಗ್ಗೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಬೇಕಿದೆ. ಇಲ್ಲವಾದರೆ ಕೇಸರಿ ಪಾಳಯವು ಸಂವಿಧಾನದ ಮೂಲತತ್ವಗಳನ್ನು ಬುಡಮೇಲುಗೊಳಿಸಲು ಹೊರಟಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದಿದ್ದಾರೆ.

ಸಂವಿಧಾನ ಬದಲಾವಣೆಗೆ ಬಿಜೆಪಿ ಹುನ್ನಾರ ನಡೆಸಿದೆ. ಪ್ರಜಾಪ್ರಭುತ್ವ, ಸಮಾನತೆ, ಜಾತ್ಯತೀತ, ಸಂಸದೀಯ ವ್ಯವಸ್ಥೆ ಸೇರಿದಂತೆ ನ್ಯಾಯಾಂಗದ ಸ್ವಾತಂತ್ರ್ಯವು ನಿಮಗೆ ಚರ್ಚೆಯ ವಿಷಯಗಳಾಗಿವೆಯೇ? ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT