ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಭಾರತ -–ಏಕ ಚುನಾವಣೆಗೆ ಒಮ್ಮತದ ಒಪ್ಪಿಗೆ ಅಗತ್ಯ: ಅರೋರ

ಸುನಿಲ್‌ ಅರೋರ ಅಭಿಮತ
Last Updated 4 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಏಕ ಭಾರತ– ಏಕ ಚುನಾವಣೆ’ ಪರಿಕಲ್ಪನೆ ಅನುಷ್ಠಾನಕ್ಕೆ ಚುನಾವಣಾ ಆಯೋಗ ಸಿದ್ಧವಿದೆ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಒಮ್ಮತದ ಒಪ್ಪಿಗೆಯ ಅಗತ್ಯವಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುನಿಲ್‌ ಅರೋರ ಹೇಳಿದರು.

ವಿಶ್ವ ಚುನಾವಣಾ ಸಂಸ್ಥೆಗಳ ಮಹಾ ಅಧಿವೇಶನದ ಅಂಗವಾಗಿ ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಒಮ್ಮತಾಭಿಪ್ರಾಯಕ್ಕೆ ಬರುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನು ಅನುಷ್ಠಾನಕ್ಕೆ ತರಲು ದೊಡ್ಡ ಪ್ರಮಾಣದಲ್ಲಿ ಹಣಕಾಸು ಬೇಕಾಗುವುದಿಲ್ಲ. ಆದರೆ, ಸಾಕಷ್ಟು ರಾಜ್ಯಗಳ ವಿಧಾನಸಭೆಗಳನ್ನು ಅವಧಿ ಮುಗಿಯುವುದಕ್ಕೆ ಅಂದರೆ, ಎರಡು– ಮೂರು ವರ್ಷಗಳಿಗೆ ಮೊದಲೇ ವಿಸರ್ಜಿಸಿ ಚುನಾವಣೆಗೆ ಸಿದ್ಧಗೊಳಿಸಬೇಕಾಗುತ್ತದೆ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಒಪ್ಪುವುದು ಕಷ್ಟ. ಈ ಸಂಬಂಧ ಸಂಸತ್‌ ಸ್ಥಾಯಿ ಸಮಿತಿ ವರದಿ ನೀಡಬೇಕಾಗಿದೆ ಎಂದರು.

ಬುದ್ಧಿಜೀವಿಗಳಿಗಷ್ಟೇ ಇವಿಎಂ ಮೇಲೆ ಸಂದೇಹ: ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಸುರಕ್ಷತೆಯ ಬಗ್ಗೆ ಬುದ್ಧಿಜೀವಿಗಳು, ಚಿಂತಕರ ಚಾವಡಿಯ ವ್ಯಕ್ತಿಗಳಿಗಷ್ಟೇ ಸಂದೇಹ ಬರುತ್ತದೆ. ಅದಕ್ಕೆ ಕಾರಣ ಅವರಿಗೇ ಗೊತ್ತು. ಆಗಾಗ್ಗೆ ಸಂದೇಹ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇವಿಎಂಗಳನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಲು ಅಗುವುದಿಲ್ಲ. ಅತ್ಯಂತ ಸುರಕ್ಷತಾ ವ್ಯವಸ್ಥೆಯಲ್ಲಿ ತಯಾರಿಸಲಾಗುತ್ತದೆ. ಇದರ ತಾಂತ್ರಿಕ ಮೇಲುಸ್ತುವಾರಿ ವಹಿಸುವವರು ವಿವಿಧ ಐಐಟಿಗಳ ಪ್ರೊಫೆಸರ್‌ಗಳು. ಈ ಸಮಿತಿಗೂ ಚುನಾವಣಾ ಆಯೋಗಕ್ಕೂ ಸಂಬಂಧ ಇರುವುದಿಲ್ಲ ಎಂದರು.

ದೇಶದ ಸಾಮಾನ್ಯ ಜನತೆ ಇವಿಎಂ ಆಧಾರಿತ ಚುನಾವಣಾ ವ್ಯವಸ್ಥೆ ಒಪ್ಪಿಕೊಂಡಿದ್ದಾರೆ. ಅವರಿಗೆ ಇವಿಎಂ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ. ಆದರೆ, ಇದನ್ನು ವಿರೋಧಿಸುವವರು ಈ ವಿಷಯ
ವನ್ನು ಫುಟ್‌ಬಾಲ್‌ನಂತೆ ಒದೆಯುತ್ತಿದ್ದಾರೆ. ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಅರೋರ ಬೇಸರ ವ್ಯಕ್ತಪಡಿಸಿದರು.

ಮತದಾನದ ಅಧಿಕಾರ ಇದೆ: ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿಯಿಂದ ಹೊರಗುಳಿದವರಿಗೂ ಮತದಾನದ ಹಕ್ಕು ಮುಂದುವರಿಯುತ್ತದೆ. ವಿದೇಶಿ ನ್ಯಾಯಮಂಡಳಿ ಇವರ ಪೌರತ್ವದ ವಿಷಯ ಇತ್ಯರ್ಥಪಡಿಸುವವರೆಗೆ ಮತದಾನ ಮಾಡಬಹುದು ಎಂದು ಅರೋರ ಹೇಳಿದರು.

ವಿದೇಶಿ ನ್ಯಾಯಮಂಡಳಿಯು ಈ ವಿಷಯದ ಬಗ್ಗೆ ತೀರ್ಮಾನ ತೆಗೆದು ಕೊಳ್ಳುವವರೆಗೆ ಮತದಾರರಿಗೆ ಮತದಾನದ ಹಕ್ಕು ಇರುತ್ತದೆ ಎಂಬುದಾಗಿ ಗೃಹ ಸಚಿವರೂ ಸ್ಪಷ್ಟಪಡಿಸಿದ್ದಾರೆ ಎಂದರು.

ಚುನಾವಣಾ ಆಯೋಗಸಾಮಾಜಿಕ ಜಾಲತಾಣ ಮಾಧ್ಯಮವನ್ನು ಸದುದ್ದೇಶದಿಂದ ಬಳಸಿಕೊಂಡು ಬಂದಿದೆ. ಇದಕ್ಕಾಗಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಯೋಗವು ಸಂಹಿತೆಯನ್ನು ಅಳವಡಿಸಿಕೊಂಡಿತ್ತು ಎಂದು ಅರೋರ ತಿಳಿಸಿದರು.

ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆಯ (ಎ–ವೆಬ್‌) ಅಧ್ಯಕ್ಷರಾಗಿ ಸುನಿಲ್‌ ಅರೋರ ಅವರು ಆಯ್ಕೆಯಾಗಿದ್ದು, ಅವರ ಅಧಿಕಾರದ ಅವಧಿ 2021 ರವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT