ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಮಳೆ: 10 ಸಾವಿರ ಕೇದಾರನಾಥ ಯಾತ್ರಿಕರ ರಕ್ಷಣೆ

Published 3 ಆಗಸ್ಟ್ 2024, 12:43 IST
Last Updated 3 ಆಗಸ್ಟ್ 2024, 12:43 IST
ಅಕ್ಷರ ಗಾತ್ರ

ರುದ್ರಪ್ರಯಾಗ: ಉತ್ತರಾಖಂಡದ ಕೇದಾರನಾಥಕ್ಕೆ ಕಾಲ್ನಡಿಗೆಯ ಮೂಲಕ ಸಾಗುವ ಮಾರ್ಗದಲ್ಲಿ ಭಾರಿ ಮಳೆಯ ಕಾರಣದಿಂದಾಗಿ ಸಿಲುಕಿಕೊಂಡಿರುವ ಯಾತ್ರಿಕರನ್ನು ರಕ್ಷಿಸುವ ಕಾರ್ಯ ಮೂರನೆಯ ದಿನ ಪ್ರವೇಶಿಸಿದೆ. ಇದುವರೆಗೆ 10,500ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಕೆಲವರನ್ನು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗಿದೆ. 

ಕೇದಾರನಾಥ, ಭೀಮಬಲಿ ಮತ್ತು ಗೌರಿಕುಂಡದಲ್ಲಿ ಅಂದಾಜು 1,300 ಯಾತ್ರಿಕರು ಸಿಲುಕಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಭಾರತೀಯ ವಾಯುಪಡೆಯ ಚಿನೂಕ್ ಮತ್ತು ಎಂಐ17 ಹೆಲಿಕಾಪ್ಟರ್‌ಗಳನ್ನು ಯಾತ್ರಿಕರನ್ನು ರಕ್ಷಿಸಿ ಕರೆತರಲು ಬಳಸಿಕೊಳ್ಳಲಾಗುತ್ತಿದೆ.

ಕಾಲ್ನಡಿಗೆ ಹಾದಿಯಲ್ಲಿ ಮೇಘಸ್ಫೋಟ ಉಂಟಾದ ನಂತರದಲ್ಲಿ ಭಾರಿ ಸಂಖ್ಯೆಯ ಯಾತ್ರಿಕರು ನಾಪತ್ತೆಯಾಗಿದ್ದಾರೆ ಎಂಬುದು ಸತ್ಯವಲ್ಲ ಎಂದು ರುದ್ರಪ್ರಯಾಗದ ಎಸ್‌ಪಿ ವಿಶಾಖಾ ಅಶೋಕ್ ಬದಾಣೆ ಹೇಳಿದ್ದಾರೆ.

ಲಿನಚೋಲಿ ಸನಿಹ ಜಂಗಲ್‌ ಛಟ್ಟಿಯಲ್ಲಿ ಬುಧವಾರ ರಾತ್ರಿ ಉಂಟಾದ ಮೇಘಸ್ಫೋಟದ ಕಾರಣದಿಂದಾಗಿ ಕಾಲ್ನಡಿಗೆ ಹಾದಿಗೆ ತೀವ್ರ ಹಾನಿ ಆಗಿದೆ. ಮಂದಾಕಿನಿ ನದಿಯು ಉಕ್ಕಿ ಹರಿದು, ಗೌರಿಕುಂಡ–ಕೇದಾರನಾಥ ಕಾಲ್ನಡಿಗೆ ಹಾದಿಯ 20–25 ಮೀಟರ್‌ ಉದ್ದದ ಭಾಗವೊಂದು ಕೊಚ್ಚಿಹೋಗಿದೆ. ಯಾತ್ರಿಕರು ಭೀಮಬಲಿ ಆಚೆಗೆ ಸಿಲುಕಿಕೊಂಡಿದ್ದಾರೆ.

ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾದಿಯಲ್ಲಿ ಬಿದ್ದಿರುವ ಕಸದ ರಾಶಿಯನ್ನು ತೆಗೆದು, ಸರಿಪಡಿಸುವವರೆಗೆ ಯಾತ್ರಿಕರು ಎಲ್ಲಿದ್ದಾರೋ ಅಲ್ಲಿಯೇ ಇರಬೇಕು ಎಂದು ರುದ್ರಪ್ರಯಾಗದ ಆಡಳಿತವು ಸೂಚಿಸಿದೆ.

ಮಾರ್ಗದಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಆಡಳಿತವು ಸಹಾಯವಾಣಿ ಆರಂಭಿಸಿದೆ (ಸಂಖ್ಯೆಗಳು: 7579257572 ಮತ್ತು 01364-233387) ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT