ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯುಕ್ತರ ನೇಮಕ ಮಸೂದೆಗೆ ರಾಜ್ಯಸಭೆ ಒಪ್ಪಿಗೆ

ಸುಪ್ರೀಂ ಕೋರ್ಟ್‌ ತೀರ್ಪನ್ನು ಮಸೂದೆ ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತದೆ: ಕಾಂಗ್ರೆಸ್
Published 12 ಡಿಸೆಂಬರ್ 2023, 16:13 IST
Last Updated 12 ಡಿಸೆಂಬರ್ 2023, 16:13 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಆಯುಕ್ತರ ನೇಮಕಕ್ಕೆ ಕೇಂದ್ರ ಸರ್ಕಾರವು ಮಂಡಿಸಿರುವ ಹೊಸ ಮಸೂದೆಯು, ‘ಹೌದಪ್ಪ’ಗಳನ್ನು ನೇಮಕ ಮಾಡಲು ಆಡಳಿತಾರೂಢ ಪಕ್ಷಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ವಿರೋಧ ಪಕ್ಷಗಳ ಪ್ರಮುಖರು ರಾಜ್ಯಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಈ ಮಸೂದೆಯು ಚುನಾವಣಾ ಆಯೋಗವನ್ನು ಕಾರ್ಯಾಂಗದ ವಶಕ್ಕೆ ಒಪ್ಪಿಸುವಂತೆ ಇದೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಇದು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತದೆ. ಈ ಮಸೂದೆಯು ಸತ್ತು ಹುಟ್ಟಿರುವ ಶಿಶು ಇದ್ದಂತೆ’ ಎಂದು ಕಾಂಗ್ರೆಸ್ ಸದಸ್ಯ ರಣದೀಪ್ ಸಿಂಗ್ ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕ, ಸೇವಾ ನಿಯಮಗಳು ಮತ್ತು ಅಧಿಕಾರ ಅವಧಿ) ಮಸೂದೆ 2023ರ ಬಗ್ಗೆ ಚರ್ಚೆ ಆರಂಭಿಸಿದ ಸುರ್ಜೆವಾಲಾ, ‘ಚುನಾವಣಾ ಆಯೋಗವು ಈ ಹಿಂದೆ ವಿಶ್ವಾಸಾರ್ಹತೆಗೆ ಪರ್ಯಾಯ ಪದವಾಗಿತ್ತು. ಆದರೆ ಸರ್ಕಾರವು ಇಂದು ಆಯೋಗವನ್ನು ಹೊಂದಾಣಿಕೆ ಮಾಡಿಕೊಂಡಿರುವ ಸಂಸ್ಥೆಯನ್ನಾಗಿಸಿದೆ’ ಎಂದು ದೂರಿದರು.

ಈ ಮಸೂದೆಗೆ ರಾಜ್ಯಸಭೆಯು ಮಂಗಳವಾರ ಅನುಮೋದನೆ ನೀಡಿದೆ. ಆಮ್‌ ಆದ್ಮಿ ಪಕ್ಷದ ರಾಘವ್ ಛಡ್ಡಾ ಅವರು, ‘ಸುಪ್ರೀಂ ಕೋರ್ಟ್‌ ತೀರ್ಪನ್ನು ಅಡಿಮೇಲು ಮಾಡಲು ಕೇಂದ್ರ ಸರ್ಕಾರವು ಯತ್ನಿಸುತ್ತಿರುವುದು ಕೆಲವು ತಿಂಗಳ ಅವಧಿಯಲ್ಲಿ ಇದು ಎರಡನೆಯ ಸಲ. ಇದು ಕೋರ್ಟ್‌ಗೆ ಮಾಡುತ್ತಿರುವ ಅವಮಾನ’ ಎಂದು ದೂರಿದರು.

‘ಚುನಾವಣೆಗಳು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು ಎಂಬುದು ಸಂವಿಧಾನದ ಮೂಲ ಸ್ವರೂಪದ ಭಾಗ. ಈ ಮಸೂದೆಯು ಸಂವಿಧಾನ ಮೂಲ ಸ್ವರೂಪಕ್ಕೆ ವಿರುದ್ಧವಾಗಿದೆ’ ಎಂದು ಛಡ್ಡಾ ಆರೋಪಿಸಿದರು. ‘ಆಡಳಿತ ಪಕ್ಷವು ಸಂಬಿತ್ ಪಾತ್ರಾ  (ಬಿಜೆಪಿಯ ರಾಷ್ಟ್ರೀಯ ವಕ್ತಾರ) ಅವರನ್ನೂ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಬಹುದು. ಅವರು ಮುಖ್ಯ ಚುನಾವಣಾ ಆಯುಕ್ತರಾದರೆ ಅದೆಷ್ಟು ಅಪಾಯಕಾರಿ ಆಗಬಹುದು’ ಎಂದು ಛಡ್ಡಾ ಕಳವಳ ವ್ಯಕ್ತಪಡಿಸಿದರು.

ಆದರೆ, ಸುಪ್ರೀಂ ಕೋರ್ಟ್‌ ತೀರ್ಪನ್ನು ಅಡಿಮೇಲು ಮಾಡುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ ಎಂಬ ಆರೋಪವನ್ನು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅಲ್ಲಗಳೆದಿದ್ದಾರೆ. ಈ ಮಸೂದೆಯು ಸುಪ್ರೀಂ ಕೋರ್ಟ್‌ ತೀರ್ಪಿಗೆ ಅನುಗುಣವಾಗಿಯೇ ಇದೆ, ಇದು ಸಂವಿಧಾನದಲ್ಲಿ ಹೇಳಿರುವ ರೀತಿಯಲ್ಲಿ ಅಧಿಕಾರ ವ್ಯಾಪ್ತಿಯನ್ನು ಪ್ರತ್ಯೇಕಿಸುವ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿಸದೆ ಇರುವುದು ಏಕೆ ಎಂದು ಛಡ್ಡಾ ಪ್ರಶ್ನಿಸಿದರು. ‘ಪ್ರಧಾನಿ, ವಿರೋಧ ಪಕ್ಷದ ನಾಯಕ ಹಾಗೂ ಸಿಜೆಐ ಇರುವ ಆಯ್ಕೆ ಸಮಿತಿಯೊಂದನ್ನು ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ ಮಸೂದೆಯು ಸಿಜೆಐ ಅವರನ್ನು ಒಳಗೊಂಡಿಲ್ಲ’ ಎಂದು ಛಡ್ಡಾ ಹೇಳಿದರು. ಈ ಮಸೂದೆಯ ಮೂಲಕ ಆಡಳಿತಾರೂಢ ಪಕ್ಷವು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ ಎಂದೂ ಆರೋಪಿಸಿದರು.

ಈ ಮಸೂದೆಯನ್ನು ವಿರೋಧಿಸಿದ ಡಿಎಂಕೆ ಸದಸ್ಯ ತಿರುಚಿ ಶಿವ, ಇದನ್ನು ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಬಿಜೆಡಿ ಸದಸ್ಯ ಅಮರ್ ಪಟ್ನಾಯಕ್ ಅವರು ಮಸೂದೆಗೆ ಬೆಂಬಲ ಸೂಚಿಸಿದರು. ಈ ಮಸೂದೆಯನ್ನು ಆಗಸ್ಟ್‌ 10ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT