ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ವಿಪಕ್ಷ ಒಗ್ಗಟ್ಟಿಗೆ ಪಟ್ನಾ ಸಜ್ಜು

ಇಂದು ಸಭೆ: ಖರ್ಗೆ, ರಾಹುಲ್‌, ಮಮತಾ, ಕೇಜ್ರಿವಾಲ್‌ ಸೇರಿ 18 ಪಕ್ಷದ ನಾಯಕರು ಭಾಗಿ ನಿರೀಕ್ಷೆ
Published 22 ಜೂನ್ 2023, 23:40 IST
Last Updated 22 ಜೂನ್ 2023, 23:40 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ‘ಅಶ್ವಮೇಧದ ಕುದುರೆ’ಯನ್ನು ಕಟ್ಟಿ ಹಾಕುವ ಸಂಬಂಧ ರಣತಂತ್ರ ಹೆಣೆಯಲು ವಿರೋಧ ಪಕ್ಷಗಳ ನಾಯಕರು ಬಿಹಾರದ ರಾಜಧಾನಿ ಪಟ್ನಾದಲ್ಲಿ ಶುಕ್ರವಾರ ಸಭೆ ಸೇರಲಿದ್ದಾರೆ. ಕಮಲ ಪಾಳಯದ ವಿರುದ್ಧ ಐಕ್ಯ ಹೋರಾಟ ನಡೆಸಲು ಈ ಸಭೆಯಲ್ಲಿ ಮೊದಲ ಕರಡು ಸಿದ್ಧಪಡಿಸುವ ಸಾಧ್ಯತೆ ಇದೆ. 

ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಲು ವಿರೋಧ ಪಕ್ಷಗಳ ನಾಯಕರು 48 ವರ್ಷಗಳ ಹಿಂದೆ ಪಟ್ನಾದಲ್ಲಿ ಸಭೆ ನಡೆಸಿದ್ದರು. ಆ ಸಭೆ ವಿರೋಧ ಪಕ್ಷಗಳ ಅಭೂತಪೂರ್ವ ಒಗ್ಗಟ್ಟಿಗೆ ಕಾರಣವಾಗಿತ್ತು. ಅಂದಿನ ವಿಪಕ್ಷಗಳ ಏಕತೆಯ ಕರೆಯು ಕಾಂಗ್ರೆಸ್‌ನ ಸೋಲು ಹಾಗೂ ಇಂದಿರಾ ಗಾಂಧಿಯ ಪತನಕ್ಕೆ ಕಾರಣವಾಗಿತ್ತು. ಈಗ ಅದೇ ಜಾಗದಲ್ಲಿ ಮತ್ತೊಂದು ಹೋರಾಟಕ್ಕೆ ಮುನ್ನುಡಿ ಬರೆಯಲು ವಿರೋಧ ಪಕ್ಷಗಳ ನಾಯಕರು ಸಜ್ಜಾಗಿದ್ದಾರೆ. ಈಗ ಅವರ ಸಮಾನ ಶತ್ರು ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. 

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮುಂದಾಳುತನದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸುಮಾರು 18 ಪಕ್ಷಗಳ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್‌ ಗಾಂಧಿ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಡಿಎಂಕೆಯ ಎಂ.ಕೆ. ಸ್ಟಾಲಿನ್‌, ಶಿವಸೇನಾದ(ಯುಬಿಟಿ) ಉದ್ಧವ್‌ ಠಾಕ್ರೆ, ಎನ್‌ಸಿಪಿಯ ಶರದ್‌ ಪವಾರ್‌, ಸಿಪಿಎಂನ ಸೀತಾರಾಮ ಯೆಚೂರಿ, ಎಎಪಿಯ ಅರವಿಂದ ಕೇಜ್ರಿವಾಲ್‌, ಆರ್‌ಜೆಡಿಯ ತೇಜಸ್ವಿ ಯಾದವ್‌, ಜೆಜೆಎಂನ ಹೇಮಂತ್‌ ಸೊರೆನ್‌, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಸಿಪಿಐಯ ಡಿ. ರಾಜಾ, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಪ್ರಮುಖರು. ಹಲವು ಸಣ್ಣ ಪಕ್ಷಗಳ ಅಧ್ಯಕ್ಷರು ಸಹ ಸಭೆಯಲ್ಲಿ ಭಾಗಿಯಾಗಲಿದ್ದಾರೆ.  

ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಯಾವ ರೀತಿಯಲ್ಲಿ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಪ್ರಾಥಮಿಕ ಚರ್ಚೆ ನಡೆಸಲಾಗುತ್ತದೆ. ಐಕ್ಯ ಹೋರಾಟಕ್ಕೆ ಮೊದಲ ಕರಡು ಸಿದ್ಧಪಡಿಸುವ ನಾಯಕರು, ಸಭೆಯ ಬಳಿಕ ಜಂಟಿ ಹೇಳಿಕೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ಈ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರತಿಪಕ್ಷಗಳ ಕೂಟದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಷಯ ಸಹ ಕಾರ್ಯಸೂಚಿಯಲ್ಲಿ ಇರಲಿದೆ. ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿಯನ್ನು ಚುನಾವಣೆಯಲ್ಲಿ ಕಟ್ಟಿ ಹಾಕಬಹುದು ಎಂಬುದು ವಿರೋಧ ಪಕ್ಷಗಳ ಹಲವು ನಾಯಕರ ಆಲೋಚನೆ.‌

ರಾಷ್ಟ್ರ ರಾಜಧಾನಿಯಲ್ಲಿ ಸೇವಾ ವಲಯದ ಮೇಲಿನ ನಿಯಂತ್ರಣ ಕುರಿತು ಸುಗ್ರೀವಾಜ್ಞೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷವು ಸಿಡಿದೆದ್ದಿದೆ. ಈ ಹೋರಾಟಕ್ಕೆ ವಿರೋಧ ಪಕ್ಷಗಳ ನಾಯಕರಿಂದ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎಂಬುದು ಎಎಪಿ ನಾಯಕರ ಅಭಿಪ್ರಾಯ.

ಹಾಗಾಗಿ, ಸುಗ್ರೀವಾಜ್ಞೆಯ ವಿಷಯವನ್ನೇ ಸಭೆಯಲ್ಲಿ ಮೊದಲು ಚರ್ಚೆ ನಡೆಸಬೇಕು ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕೆಲವು ದಿನಗಳ ಹಿಂದೆ ಹೇಳಿದ್ದರು. ಈ ವಿಚಾರದಲ್ಲಿ ಎಎಪಿಗೆ ಬೆಂಬಲ ನೀಡಬಾರದು ಎಂದು ಕಾಂಗ್ರೆಸ್‌ನ ದೆಹಲಿ ಹಾಗೂ ಪಂಜಾಬ್‌ ಘಟಕಗಳು ಹೈಕಮಾಂಡ್‌ ಮೇಲೆ ಒತ್ತಡ ಹೇರಿವೆ. ಇದರಿಂದಾಗಿ, ಕೈ ಪಾಳಯ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಕಾಂಗ್ರೆಸ್‌ ನಿಲುವು ಕೇಜ್ರಿವಾಲ್ ಅಸಮಾಧಾನಕ್ಕೆ ಕಾರಣವಾಗಿದೆ. ‘ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ ನೀಡದಿದ್ದರೆ ವಿರೋಧ ಪಕ್ಷಗಳು ಒಗ್ಗೂಡುವುದು ಹೇಗೆ’ ಎಂಬುದು ಎಎಪಿ ನಾಯಕರ ಪ್ರಶ್ನೆ. 

ವಿರೋಧ ಪಕ್ಷಗಳ ಕೂಟದ ನೇತೃತ್ವವನ್ನು ತಾನೇ ವಹಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್‌ನ ಹಂಬಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿರುವ ಕೈ ಪಾಳಯ ಹೊಸ ಉಮೇದಿನಲ್ಲಿದೆ. ಆದರೆ, ಈ ಕೂಟಕ್ಕೆ ಕಾಂಗ್ರೆಸ್‌ ನಾಯಕತ್ವ ವಹಿಸಿಕೊಳ್ಳುವುದು ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್‌, ಅಖಿಲೇಶ್‌ ಯಾದವ್‌ ಮತ್ತಿತರ ನಾಯಕರಿಗೆ ಸುತಾರಾಂ ಇಷ್ಟವಿಲ್ಲ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯಗಳಲ್ಲಿ ಒಂದು ಸ್ಥಾನ ಗೆಲ್ಲಲೂ ತಿಣುಕಾಡುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ವಿಪಕ್ಷ ಕೂಟದ ನಾಯಕತ್ವ ವಹಿಸಲು ಯಾವ ಅರ್ಹತೆ ಇದೆ ಎಂಬುದು ಈ ನಾಯಕರ ಪ್ರಶ್ನೆ. 

ಸಭೆಗೆ ಮಾಯಾವತಿ ಗೈರು  ಪ್ರತಿಪಕ್ಷಗಳ ಸಭೆಯಲ್ಲಿ ಬಿಎಸ್‌ಪಿ ಭಾಗವಹಿಸುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಿಎಸ್‌ಪಿ ಹಾಗೂ ವಿರೋಧ ಪಕ್ಷಗಳು ಪರಸ್ಪರ ಅಂತರ ಕಾಯ್ದುಕೊಂಡಿವೆ.  ಈ ಸಂಬಂಧ ಗುರುವಾರ ಸರಣಿ ಟ್ವೀಟ್‌ ಮಾಡಿರುವ ಅವರು ‘ಹಣದುಬ್ಬರ ಬಡತನ ನಿರುದ್ಯೋಗ ಅನರಕ್ಷತೆ ಜಾತಿ ದ್ವೇಷ ಧಾರ್ಮಿಕ ಹಿಂಸಾಚಾರದಿಂದ ಬಳಲುತ್ತಿರುವ ದೇಶದ ಸ್ಥಿತಿ ನೋಡಿದರೆ ಅಂಬೇಡ್ಕರ್ ಅವರ ಸಮಾನತೆಯ ಸಂವಿಧಾನ ಸರಿಯಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಇಲ್ಲ’ ಎಂದಿದ್ದಾರೆ. ಪಕ್ಷಗಳು ತಮ್ಮ ಸ್ಪಷ್ಟ ಉದ್ದೇಶಗಳನ್ನು ಪ್ರತಿಪಾದಿಸುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸಿದ್ದರೆ ಉತ್ತಮ ಎಂದು ಹೇಳಿರುವ ಮಾಯಾವತಿ ಮುಖದ ಮೇಲೆ ಹೊಗಳಿಕೆ ಹಾಗೂ ಬೆನ್ನಿಗೆ ಚೂರಿ ಹಾಕುವುದು ಎಷ್ಟು ದಿನ ಉಳಿಯುತ್ತದೆೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.  ಉತ್ತರ ಪ್ರದೇಶದಲ್ಲಿರುವ 80 ಲೋಕಸಭಾ ಸ್ಥಾನಗಳು ಚುನಾವಣಾ ಯಶಸ್ಸಿಗೆ ಪ್ರಮುಖವೆಂದು ಹೇಳಲಾಗುತ್ತದೆ. ಆದರೆ ವಿರೋಧ ಪಕ್ಷಗಳ ನಾಯಕರ ವರ್ತನೆ ನೋಡಿದರೆ ಅವರು ತಮ್ಮ ಉದ್ದೇಶದ ಬಗ್ಗೆ ಗಂಭೀರವಾದ ಮತ್ತು ನಿಜವಾದ ಕಾಳಜಿ ಹೊಂದಿದ್ದಾರೆಂದು ತೋರುತ್ತಿಲ್ಲ. ಸರಿಯಾದ ಆದ್ಯತೆಗಳಿಲ್ಲದೆ ಲೋಕಸಭಾ ಚುನಾವಣೆಯ ಸಿದ್ಧತೆಗಳು ನಿಜವಾಗಿಯೂ ಅಗತ್ಯ ಬದಲಾವಣೆಯನ್ನು ತರುತ್ತವೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.  ಈ ನಡುವೆ ಪೂರ್ವ ನಿಗದಿತ ಕೌಟುಂಬಿಕ ಕಾರ್ಯಕ್ರಮದ ಕಾರಣ ಶುಕ್ರವಾರದ ಸಭೆಗೆ ಹಾಜರಾಗುತ್ತಿಲ್ಲ ಎಂದು ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಚೌಧರಿ ಅವರು ನಿತೀಶ್‌ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.  

ಸಕಾರಾತ್ಮಕ ನಿರ್ಧಾರ: ಮಮತಾ ಆಶಯ ಕೋಲ್ಕತ್ತ(ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಟ್ನಾ ಸಭೆಯಿಂದ ಸಕಾರಾತ್ಮಕ ನಿಲುವುಗಳು ಹೊರಹೊಮ್ಮಲಿವೆ ಎಂಬ ಆಶಿಸಿದ್ದಾರೆ. ‘ಸಭೆಯಲ್ಲಿ ಉತ್ತಮ ಮತ್ತು ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಎನ್ನುವುದು ನಮ್ಮ ಆಶಯ. ದೇಶವನ್ನು ವಿಪತ್ತುಗಳಿಂದ ಪಾರು ಮಾಡಲು ಜನತೆ ಬಿಜೆಪಿ ವಿರುದ್ಧ ಮತ ಚಲಾಯಿಸುತ್ತಾರೆಂದು ನಾನು ಭಾವಿಸಿದ್ದೇನೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT