ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧುಮೇಹಿಗಳ ಸಂಖ್ಯೆ ಅಂದಾಜು 10.1 ಕೋಟಿ

Published : 9 ಜೂನ್ 2023, 19:23 IST
Last Updated : 9 ಜೂನ್ 2023, 19:23 IST
ಫಾಲೋ ಮಾಡಿ
Comments

ನವದೆಹಲಿ: ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಶೇ 11.4 ರಷ್ಟಿದೆ. ಶೇ 35.5ರಷ್ಟು ಮಂದಿ ಅಧಿಕದೊತ್ತಡ ಮತ್ತು ಶೇ 15.3ರಷ್ಟು ಜನರು ಮಧುಮೇಹದ ಆರಂಭಿಕ ಹಂತದಲ್ಲಿದ್ದಾರೆ.

2021ರಲ್ಲಿ ನಡೆದಿರುವ ಈ ಸಮೀಕ್ಷೆ ಪ್ರಕಾರ, ಭಾರತದಲ್ಲಿರುವ ಮಧುಮೇಹಿಗಳ ಸಂಖ್ಯೆ ಅಂದಾಜು 10.1 ಕೋಟಿ. ಮಧುಮೇಹ ಸಮಸ್ಯೆಯ ಆರಂಭಿಕ ಹಂತದಲ್ಲಿ 13.6 ಕೋಟಿ ಮಂದಿ ಇದ್ದರೆ, 31.5 ಕೋಟಿ ಜನ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.

ಲ್ಯಾನ್ಸೆಟ್‌ ಡಯಾಬಿಟಿಸ್‌ ಮತ್ತು ಎಂಡೊಕ್ರಿನಾಲಜಿ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ದೇಶವ್ಯಾಪಿಯ ಸಮೀಕ್ಷೆಯ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. 

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ಮದ್ರಾಸ್ ಡಯಾಬಿಟಿಸ್ ಸಂಶೋಧನಾ ಪ್ರತಿಷ್ಠಾನವು (ಎಂಡಿಆರ್‌ಎಫ್‌) ಈ ಸಮೀಕ್ಷೆಯನ್ನು ನಡೆಸಿತ್ತು. ಕೇಂದ್ರ ಆರೋಗ್ಯ ಸಚಿವಾಲಯವು ಹಣಕಾಸು ನೆರವು ಒದಗಿಸಿತ್ತು.

ಸಮೀಕ್ಷೆಯ ವರದಿ ಪ್ರಕಾರ, ಭಾರತದಲ್ಲಿ ಸಾಮಾನ್ಯ ಬೊಜ್ಜು ಮತ್ತು ಕಿಬ್ಬೊಟ್ಟೆಯಲ್ಲಿನ ಬೊಜ್ಜು ಹೊಂದಿರುವವರ ಸಂಖ್ಯೆ ಕ್ರಮವಾಗಿ 25.4 ಕೋಟಿ ಮತ್ತು 31.5 ಕೋಟಿ ಆಗಿದೆ.

2017ರಲ್ಲಿ ಭಾರತದಲ್ಲಿ ಡಯಾಬಿಟಿಸ್‌ ರೋಗಿಗಳ ಪ್ರಮಾಣ ಶೇ 7.5ರಷ್ಟಿದೆ. ಅಂದರೆ, ಅಂದಿನಿಂದ ಇಲ್ಲಿಯವರೆಗೂ ಮಧುಮೇಹಿಗಳ ಪ್ರಮಾಣ ಶೇ 50ರಷ್ಟು ಏರಿಕೆಯಾಗಿದೆ.

ರಾಜ್ಯವಾರು ಪರಿಗಣಿಸಿದರೆ ಗೋವಾದಲ್ಲಿ ಮಧುಮೇಹಿಗಳ ಪ್ರಮಾಣ ಅಧಿಕ ಅಂದರೆ ಶೇ 26.4ರಷ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಕಡಿಮೆ ಅಂದರೆ ಶೇ 4.8ರಷ್ಟಿದೆ. ಮಧುಮೇಹ ಆರಂಭಿಕ ಹಂತದಲ್ಲಿರುವವರ ಪ್ರಮಾಣ ಪಂಜಾಬ್‌ನಲ್ಲಿ ಅಧಿಕವಾಗಿದ್ದರೆ (ಶೇ 51.8) ಮೇಘಾಲಯದಲ್ಲಿ ಕಡಿಮೆ (ಶೇ 24.3) ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. 

‘ಮಧುಮೇಹ ಮತ್ತು ಅಧಿಕರಕ್ತದೊತ್ತಡದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಲು ಜೀವನಶೈಲಿಯಲ್ಲಿನ ಬದಲಾವಣೆ, ಆಹಾರ ಪಥ್ಯ, ದೈಹಿಕ ಚಟುವಟಿಕೆ, ಒತ್ತಡ ಕಾರಣವಾಗಿದೆ. ಈ ಅಧ್ಯಯನದ ಅಂಶಗಳು ದೇಶದಲ್ಲಿ ಆರೋಗ್ಯ ಸ್ಥಿತಿ ಕುರಿತು ಯೋಜನೆ, ಆದ್ಯತೆಗೆ ಸಂಬಂಧಿಸಿ ಪರಿಣಾಮ ಬೀರಲಿದೆ’ ಎಂದು ಎಂಡಿಆರ್‌ಎಫ್ ಅಧ್ಯಕ್ಷೆ ಡಾ.ಆರ್‌.ಎಂ.ಅಂಜನಾ ತಿಳಿಸಿದ್ದಾರೆ.

ಮಧುಮೇಹ, ರಕ್ತದೊತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಿರುವುದು ಪ್ರಗತಿಯ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ, ಇದರ ಏರುಗತಿ ತಡೆಯಲು ರಾಜ್ಯಮಟ್ಟದಲ್ಲಿ ನಿರ್ದಿಷ್ಟ ಗುರಿಯ ಯೋಜನೆಗಳು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT