ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಸೈಟ್‌ಗೆ 20,400 ಬಾರಿ ಸೈಬರ್‌ ದಾಳಿ

Published 21 ಡಿಸೆಂಬರ್ 2023, 5:24 IST
Last Updated 21 ಡಿಸೆಂಬರ್ 2023, 5:24 IST
ಅಕ್ಷರ ಗಾತ್ರ

ನವದೆಹಲಿ: ಎರಡು ದಿನದ ಹಿಂದೆ ಆರಂಭವಾದ ಜನರಿಂದ ನಿಧಿ ಸಂಗ್ರಹಿಸುವ ಕಾಂಗ್ರೆಸ್‌ನ ‘ದೇಶಕ್ಕಾಗಿ ದೇಣಿಗೆ’ ಅಭಿಯಾನದ ವೆಬ್‌ಸೈಟ್‌ನ ಮಾಹಿತಿ ಕದಿಯಲು 20,400 ಬಾರಿ ಸೈಬರ್‌ ದಾಳಿ ನಡೆಸಲಾಗಿದೆ. ಆದರೂ 1.13 ಲಕ್ಷ ದೇಣಿಗೆದಾರರಿಂದ ₹2.81 ಕೋಟಿ ಹಣ ಸಂಗ್ರಹಿಸಲಾಗಿದೆ.

ಬುಧವಾರ ಬೆಳಿಗ್ಗೆ 9 ಗಂಟೆ ಹೊತ್ತಿಗೆ 1,13,317 ಮಂದಿ ದೇಣಿಗೆ ನೀಡಿದ್ದಾರೆ. ಕೇವಲ 32 ಮಂದಿ ಮಾತ್ರ 1 ಲಕ್ಷಕ್ಕಿಂತ ಅಧಿಕ ಮೊತ್ತ ದಾನವಾಗಿ ನೀಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿರುವವರ ಪೈಕಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಶೋಕ್ ಗೆಹಲೋತ್, ಜೈರಾಂ ರಮೇಶ್ ಹಾಗೂ ಪವನ್‌ ಖೆರಾ ಪ್ರಮುಖರು. 612 ಮಂದಿ ₹13,800ಕ್ಕಿಂತ ಅಧಿಕ ಮೊತ್ತದ ದೇಣಿಗೆ ನೀಡಿದ್ದಾರೆ.

₹1.38 ಲಕ್ಷ ದೇಣಿಗೆಯಾಗಿ ನೀಡುವ ಮೂಲಕ ಈ ಅಭಿಯಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಚಾಲನೆ ನೀಡಿದ್ದರು.

ಸಂಗ್ರಹವಾದ ₹2.81 ಕೋಟಿ ಪೈಕಿ, ಅತೀ ಹೆಚ್ಚು ಅಂದರೆ ₹56 ಲಕ್ಷ ಮಹಾರಾಷ್ಟ್ರದಿಂದ ಬಂದಿದೆ. ಬಳಿಕ ಸ್ಥಾನದಲ್ಲಿ ರಾಜಸ್ಥಾನ (₹26 ಲಕ್ಷ), ದೆಹಲಿ (₹20 ಲಕ್ಷ), ಉತ್ತರ ಪ್ರದೇಶ (₹19 ಲಕ್ಷ) ಹಾಗೂ ಕರ್ನಾಟಕ (₹18 ಲಕ್ಷ) ರಾಜ್ಯಗಳು ಇವೆ.

ಈ ಬಗ್ಗೆ ಮಾತನಾಡಿದ ಹಿರಿಯ ನಾಯಕರೊಬ್ಬರು, ‘ದೇಣಿಗೆಯ ಮೊತ್ತದಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿ ಇರಬಹುದು. ಆದರೆ ದಾನಿಗಳ ಸಂಖ್ಯೆಯಲ್ಲಿ ಬಿಹಾರ ಮೊದಲನೇ ಸ್ಥಾನದಲ್ಲಿದೆ. ಹೆಚ್ಚು ಮಂದಿ ದೇಣಿಗೆ ನೀಡಲು ಬಯಸುತ್ತಿದ್ದಾರೆ ಎನ್ನುವುದರ ಸಂಕೇತ ಇದು’ ಎಂದು ಹೇಳಿದರು.

ದೇಣಿಗೆ ಸಂಗ್ರಹಿಸಲು ಕಾಂಗ್ರೆಸ್‌ ತೆರೆದಿರುವ www.donateinc.in ವೆಬ್‌ಸೈಟ್‌ಗೆ 48 ಗಂಟೆಯಲ್ಲಿ 1.2 ಕೋಟಿ ಮಂದಿ ಭೇಟಿ ನೀಡಿದ್ದಾರೆ. 20,400 ಬಾರಿ ಸೈಬರ್ ದಾಳಿ ನಡೆಸಲಾಗಿದೆ. ಈ ಪೈಕಿ 1,340 ಬಾರಿ ದತ್ತಾಂಶ ಕದಿಯುವ ಪ್ರಯತ್ನ ನಡೆದಿದೆ. ಉಳಿದಿದ್ದು ವೆಬ್‌ಸೈಟ್‌ ಅನ್ನು ನಿಧಾನಗೊಳಿಸುವ ಕುತಂತ್ರ ಎಂದು ಮೂಲಗಳು ಹೇಳಿವೆ.

ಹೀಗೆ ದಾಳಿ ನಡೆಯುವುದನ್ನು ಮೊದಲೇ ಅಂದಾಜಿಸಿದ್ದರಿಂದ ವೆಬ್‌ಸೈಟ್‌ ಅನ್ನು ಬಲಿಷ್ಠವಾಗಿ ನಿರ್ಮಾಣ ಮಾಡಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ದಾನಿಗಳ ಪೈಕಿ ಶೇ 81 ಮಂದಿ ಯುಪಿಐ ಮೂಲಕ ಪಾವತಿ ಮಾಡಿದ್ದು, ಶೇ 7.95 ಮಂದಿ ಕ್ರೆಡಿಟ್‌ ಕಾರ್ಡ್‌, ಶೇ 6.34 ಮಂದಿ ಡೆಬಿಟ್ ಕಾರ್ಡ್ ಹಾಗೂ ಶೇ 4.78 ಮಂದಿ ನೆಟ್ ಬ್ಯಾಂಕಿಂಗ್‌ ಹಾಗೂ ಶೇ 0.02 ಮಂದಿ ಆರ್‌ಟಿಜಿಎಸ್‌–ನೆಫ್ಟ್‌ ಮೂಲಕ ದೇಣಿಗೆ ನೀಡಿದ್ದಾರೆ.

ಮೊದಲ ಹಂತದಲ್ಲಿ ದೇಣಿಗೆ ಸಂಗ್ರಹಿಸಲು ಕಾಂಗ್ರೆಸ್ ಕಾರ್ಯದರ್ಶಿ ಅಜಯ್ ಮಾಕನ್ ಅವರು ಮೂರು ಸ್ತರದ ಕಾರ್ಯತಂತ್ರ ರೂಪಿಸಿದ್ದಾರೆ. ಡಿ. 28ರಂದು ನಡೆಯುವ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವ ಅಭಿಯಾನಕ್ಕೂ ಮುನ್ನ ಪ್ರತಿ ರಾಜ್ಯಗಳಿಗೂ ವೀಕ್ಷಕರನ್ನು ಕಳುಹಿಸಲಾಗುತ್ತದೆ. ಕಾಂಗ್ರೆಸ್‌ನ ಎಲ್ಲಾ ಸಮಾರಂಭಗಳಲ್ಲಿ ಕ್ಯೂಆರ್‌ ಕೋಡ್‌ ಪ್ರದರ್ಶನ ಮಾಡಲಾಗುತ್ತದೆ. ಆ ಮೂಲಕ ಸುಲಭವಾಗಿ ಪಾವತಿ ಮಾಡಲು ಜನರಿಗೆ ಅನುಕೂಲ ಮಾಡಿಕೊಡಲಾಗುತ್ತದೆ.

ರಾಹುಲ್ ಗಾಂಧಿ ಸೇರಿ ನಾಯಕರ ಸಹಿ ಇರುವ ಟಿ–ಶರ್ಟ್, ಟೋಪಿಗಳನ್ನು ಮಾರಾಟ ಮಾಡುವ ಮೂಲಕವೂ ಹಣ ಸಂಗ್ರಹಿಸಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ.

ಈ ಅಭಿಯಾನದಿಂದಾಗಿ ಪಕ್ಷಕ್ಕೆ ಜನ ಸಂಪರ್ಕವೂ ಸಾಧ್ಯವಾಗಲಿದ್ದು, ಸಂಗ್ರಹಿಸಲಾದ ದತ್ತಾಂಶವನ್ನು ರಾಜ್ಯ ಘಟಕದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT