ನವದೆಹಲಿ: ದೇಶದಾದ್ಯಂತ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) 2019ರಿಂದ 2024ರ ಮೇ 16ರವರೆಗೂ 400ಕ್ಕೂ ಹೆಚ್ಚು ಆಸ್ತಿಗಳನ್ನು ಜಪ್ತಿ ಮಾಡಿದ್ದು, ಇದರಲ್ಲಿ ಹೆಚ್ಚಿನವು ಭಯೋತ್ಪಾದಕರು, ನಕ್ಸಲರು, ಪ್ರತ್ಯೇಕತಾವಾದಿಗಳು ಹಾಗೂ ಅವರ ಬೆಂಬಲಿಗರಿಗೆ ಸೇರಿದವು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಜಪ್ತಿಯಾದ 403 ಆಸ್ತಿಗಳಲ್ಲಿ 206 ಆಸ್ತಿಗಳನ್ನು ರಾಂಚಿ ಶಾಖೆಯೇ ಮುಟ್ಟುಗೋಲು ಹಾಕಿಕೊಂಡಿದೆ. ಇದು ಅತ್ಯಧಿಕ ಎಂದಿದ್ದಾರೆ.
ಬಿಹಾರ ಮತ್ತು ಜಾರ್ಖಂಡ್‌ನಾದ್ಯಂತ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ವಿವಿಧ ಬ್ಯಾಂಕ್‌ಗಳ ಖಾತೆಗಳು ಹಾಗೂ ಅಪಾರ ಪ್ರಮಾಣದ ನಗದು ಸೇರಿದ್ದು, ಇದು ನಕ್ಸಲರು ಮತ್ತು ಅವರ ಬೆಂಬಲಿಗರದ್ದು ಎಂದು ಹೇಳಿದ್ದಾರೆ.
ಎನ್‌ಐಎಯ ಜಮ್ಮು ಶಾಖೆಯು ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ಸೇರಿದ 100 ಆಸ್ತಿಗಳನ್ನು ಜಪ್ತಿ ಮಾಡಿದೆ. ಖಾಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂಗೆ ಸೇರಿದ ಎರಡು ಆಸ್ತಿಗಳನ್ನು ತನ್ನ ವಶಕ್ಕೆ ಪಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ದೆಹಲಿ ಶಾಖೆಯು 22 ಆಸ್ತಿಗಳನ್ನು, ಕೊಚ್ಚಿ–27, ಮುಂಬೈ–5, ಹೈದರಾಬಾದ್–4, ಚೆನ್ನೈ–3 ಹಾಗೂ ಲಕ್ನೋ ಶಾಖೆಯ ಒಂದು ಆಸ್ತಿಯನ್ನು ಜಪ್ತಿ ಮಾಡಿವೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಕಾರ್ಯಕರ್ತರು, ಬೆಂಬಲಿಗರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.