ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: ಬಿಜೆಪಿ 400 ಸ್ಥಾನ ಗೆಲ್ಲಲು ನೆರವಾಗಲು ‘ಸಾಗರೋತ್ತರ ಸ್ನೇಹಿತರು’ ಸಜ್ಜು

Published 3 ಮಾರ್ಚ್ 2024, 12:43 IST
Last Updated 3 ಮಾರ್ಚ್ 2024, 12:43 IST
ಅಕ್ಷರ ಗಾತ್ರ

ವಾಷಿಂಗ್ಟನ್: ಲೋಕಸಭಾ ಚುನಾವಣೆಗೆ ಬಿಜೆಪಿಯು ಮೊದಲ ಸುತ್ತಿನಲ್ಲಿ 195 ಅಭ್ಯರ್ಥಿಗಳನ್ನು ಘೋಷಿಸಿರುವ ಬೆನ್ನಲ್ಲೇ, ಅಮೆರಿಕದಲ್ಲಿನ ‘ಬಿಜೆಪಿಯ ಸಾಗರೋತ್ತರ ಸ್ನೇಹಿತರು’ ಸಂಘಟನೆಯು ಚುನಾವಣಾ ಅಭಿಯಾನಕ್ಕೆ ಚಾಲನೆ ನೀಡಿದೆ. ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಲು ನೆರವು ನೀಡುವುದಾಗಿ ಸಂಘಟನೆಯು ಹೇಳಿದೆ.

‘ಭಾರತ ಮೂಲದವರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ’ ಎಂದು ಸಂಘಟನೆಯ ಅಮೆರಿಕದ ಅಧ್ಯಕ್ಷ ಅಡಪ ಪ್ರಸಾದ್ ತಿಳಿಸಿದರು. ಸಂಘಟನೆ ಆಯೋಜಿಸಿದ್ದ ಚುನಾವಣಾ ಅಭಿಯಾನದ ಆರಂಭದ ಕಾರ್ಯಕ್ರಮದಲ್ಲಿ ಅಂದಾಜು 100 ಮಂದಿ ಪ್ರಮುಖರು ಪಾಲ್ಗೊಂಡಿದ್ದರು.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ಬಗ್ಗೆ ತಾವು ಸಿದ್ಧಪಡಿಸಿರುವ ವಿಶ್ಲೇಷಣೆಯನ್ನು ಭಾರತ ಮೂಲದ ಅಮೆರಿಕನ್ನರು ಕಾರ್ಯಕ್ರಮದಲ್ಲಿ ಮಂಡಿಸಿದರು. ‘ಪ್ರತಿ ರಾಜ್ಯದಲ್ಲಿ ಆಗಿರುವ ಪ್ರಗತಿಯನ್ನು ನಾವು ಪರಿಶೀಲಿಸಿದೆವು. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಬಗ್ಗೆ ವಿಸ್ತೃತ ವಿವರಣೆ ನೀಡಿದೆವು’ ಎಂದು ಪ್ರಸಾದ್ ಹೇಳಿದರು.

ಈ ಸಂಘಟನೆಯು ಆಯೋಜಿಸಲಿರುವ ಚುನಾವಣಾ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಇದುವರೆಗೆ ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮುಂದೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಚಟುವಟಿಕೆಗಳು, ದೂರವಾಣಿ ಕರೆಗಳು, ಮತದಾರರ ವಿಶ್ಲೇಷಣೆ, ನೇರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದು ಹಾಗೂ ಭಾರತಕ್ಕೆ ಪ್ರಯಾಣ ಬೆಳೆಸುವ ಕಾರ್ಯಗಳನ್ನು ಸಂಘಟನೆಯು ಹಮ್ಮಿಕೊಂಡಿದೆ.

ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿ, ಮೋದಿ ಅವರನ್ನು ಮೂರನೆಯ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಬೇಕು ಎಂಬ ಮನವಿಯೊಂದಿಗೆ ಅಮೆರಿಕದಿಂದ ಭಾರತಕ್ಕೆ 25 ಲಕ್ಷ ದೂರವಾಣಿ ಕರೆಗಳನ್ನು ಮಾಡಲು ಯೋಜನೆಯನ್ನು ಸಂಘಟನೆಯು ಸಿದ್ಧಪಡಿಸುತ್ತಿದೆ.

‘ಮೋದಿ ಕಿ ಗ್ಯಾರಂಟಿ’, ‘ಮೊಹಲ್ಲಾ ಚಾಯ್ ಪೆ ಚರ್ಚಾ’, ಕಾರು ರ್‍ಯಾಲಿ ಮತ್ತು ಹೋಳಿ ಮಿಲನ್ ಕಾರ್ಯಕ್ರಮಗಳನ್ನು ಸಂಘಟನೆ ಹಮ್ಮಿಕೊಳ್ಳಲಿದೆ. ‘ನಾವು ಸಜ್ಜಾಗಿದ್ದೇವೆ. ಎಲ್ಲರಲ್ಲಿಯೂ ಉತ್ಸಾಹ ಮೂಡಿದೆ. ನಾವು ಈ ಬಾರಿ ಪ್ರಧಾನಿಯವರಿಗಾಗಿ 400 ಸ್ಥಾನಗಳ ಗಡಿ ದಾಟಲಿದ್ದೇವೆ. ಪ್ರಧಾನಿಯವರು ದೇಶಕ್ಕಾಗಿ ಎಷ್ಟೆಲ್ಲ ಕೆಲಸ ಮಾಡಿದ್ದಾರೆ, ಅವರನ್ನು ಎಲ್ಲೆಡೆ ಇಷ್ಟಪಡಲಾಗುತ್ತಿದೆ’ ಎಂದು ಸಂಘಟನೆಯ ಸಿಖ್ ವ್ಯವಹಾರಗಳ ವಿಭಾಗದ ಸಂಚಾಲಕ ಕನ್ವಲ್ಜಿತ್ ಸಿಂಗ್ ಸೋನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT