ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಸ್ವಾತಂತ್ರ್ಯದಿನ: 36ವರ್ಷ ಸೆರೆಯಲ್ಲಿದ್ದ ಶರ್ಮಾ ಸೇರಿ 30 ಭಾರತೀಯರು ಮುಕ್ತ

Last Updated 14 ಆಗಸ್ಟ್ 2018, 10:55 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನ ತನ್ನ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸನ್ನಡತೆಯ ಆಧಾರದ ಮೇಲೆ ಭಾರತದ 30 ಖೈದಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ 27 ಮೀನುಗಾರರು ಸೇರಿದ್ದಾರೆ.

ಈ ವಿಮೋಚಿತ ಖೈದಿಗಳಲ್ಲಿ 36 ವರ್ಷಗಳನ್ನು ಜೈಲಲ್ಲಿ ಸವೆಸಿದ, 76 ವರ್ಷದ ಗಜಾನಂದ ಶರ್ಮಾ ಕೂಡ ಒಬ್ಬರು. 1982ರಲ್ಲಿ ಶರ್ಮಾ ರಾಜಸ್ಥಾನದಫತೇಹರಾಮ್‌ ಕಾ ದಿಬ್ಬ ಊರಿಂದ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಇವರನ್ನು ಪತ್ತೆಮಾಡಲು ಕುಟುಂಬದ ಸದಸ್ಯರು ನಾಲ್ಕಾರು ವರ್ಷ ಪ್ರಯತ್ನಿಸಿ, ಕೊನೆಗೆ ಕೈಚೆಲ್ಲಿದ್ದರು. ಶರ್ಮಾ ಅಕ್ರಮವಾಗಿ ಗಡಿ ಪ್ರವೇಶ ಅಪರಾಧದ ಮೇಲೆ ಪಾಕಿಸ್ತಾನದ ಲಾಹೋರ್‌ನ ಕೇಂದ್ರ ಕಾರಾಗೃಹ ಸೇರಿದ್ದರು. ಆದರೆ, ಶರ್ಮಾರ ಕುಟುಂಬಕ್ಕೆಈ ವರ್ಷದ ಏಪ್ರಿಲ್‌ನಲ್ಲಿ ಇದ್ದಕ್ಕಿದ್ದಂತೆ ಕರೆಯೊಂದು ಬಂತು. ‘ನಿಮ್ಮ ಕುಟುಂಬದ ಸದಸ್ಯ ಗಜಾನಂದ ಇವರೇನಾ ಎಂದು ಗುರುತಿಸಿ’ ಎಂದು ಸರ್ಕಾರ ದಾಖಲೆಗಳ ಓಲೆಯೊಂದನ್ನು ಕಳುಹಿಸಿತ್ತು.

ಗಜಾನಂದ ಕಾಣೆಯಾದ ಬಳಿಕ, ಅವರ ಪತ್ನಿ ಪಡಬಾರದ ಕಷ್ಟಪಟ್ಟರು. ಇಬ್ಬರು ಮಕ್ಕಳನ್ನು ಸಾಕಲು ಖಾಸಗಿ ಆಸ್ಪತ್ರೆಯಲ್ಲಿ ದಿನವಿಡಿ ದುಡಿದರು. ‘ಗಜಾನಂದರು ಊರಿಂದ 800 ಕಿ.ಮೀ. ದೂರವಿರುವ ಅಂತರರಾಷ್ಟ್ರೀಯ ಗಡಿಯನ್ನು ಹೇಗೆ ದಾಟಿದರು’ ಎಂಬುದು ಊರಿನ ಜನರಿಗು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.

‘ದೇಶದ ಸ್ವಾತಂತ್ರ್ಯ ದಿನದ ಅಂಗವಾಗಿ ಮಾನವೀಯ ನೆಲೆಯಲ್ಲಿ ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಮಾನವೀಯ ನೆಲೆಯ ವಿಷಯಗಳನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡಲ್ಲ. ಇದೇ ರೀತಿಯ ಧೋರಣೆ ಭಾರತ ಹೊಂದಿದೆ ಎಂದು ಆಶಿಸುತ್ತೇವೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅಂತರರಾಷ್ಟ್ರೀಯ ಜಲಗಡಿ ರೇಖೆಯನ್ನು ದಾಟಿಬಂದು ಮೀನುಗಾರಿಕೆ ನಡೆಸಿದ್ದಾರೆಂದು ಆಪಾದಿಸಿ, ಪಾಕಿಸ್ತಾನದ ರಕ್ಷಣಾ ಸಿಬ್ಬಂದಿ ಮೀನುಗಾರರನ್ನು ಬಂಧಿಸಿದ್ದರು. ಅವರನ್ನು ಕರಾಚಿಯ ಕಾರಾಗೃಹದಿಂದ ಬಂಧಮುಕ್ತಿಗೊಳಿಸಲಾಗಿದೆ. ಜಲಗಡಿಯನ್ನು ದಾಟಿಬಂದರೆಂದು ಭಾರತ ಮತ್ತು ಪಾಕಿಸ್ತಾನಗಳೆರಡೂ ನೆರೆಯ ದೇಶದ ಮೀನುಗಾರರನ್ನು ಬಂಧಿಸುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದಕ್ಕೆ ಮುಖ್ಯ ಕಾರಣ ಅಂತರರಾಷ್ಟ್ರೀಯ ಜಲಗಡಿ ನಿರ್ದಿಷ್ಟವಾದ ಗುರುತಿನಲ್ಲಿ ಇದೆ ಎಂಬ ಮಾತಿಗೆ ಎರಡು ದೇಶಗಳು ಸಹಮತಕ್ಕೆ ಬಂದು ಒಪ್ಪಂದ ಮಾಡಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT