ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸತ್ ಆವರಣದಿಂದ ಪ್ರತಿಮೆ ಸ್ಥಳಾಂತರ: ಕಾಂಗ್ರೆಸ್ ಟೀಕೆ

Published 16 ಜೂನ್ 2024, 15:31 IST
Last Updated 16 ಜೂನ್ 2024, 15:31 IST
ಅಕ್ಷರ ಗಾತ್ರ

ನವದೆಹಲಿ: ಮಹಾತ್ಮ ಗಾಂಧಿ, ಬಿ.ಆರ್‌.ಅಂಬೇಡ್ಕರ್ ಸೇರಿದಂತೆ 13 ಮಂದಿ ಗಣ್ಯರ ಪ್ರತಿಮೆಗಳನ್ನು ಸಂಸತ್‌ ಆವರಣದಿಂದ ತೆಗೆದು ‘ಪ್ರೇರಣಾ ಸ್ಥಳ’ ಎನ್ನುವಲ್ಲಿ ಪ್ರತಿಷ್ಠಾಪಿಸಲಾಗಿದ್ದು, ವಿರೋಧದ ನಡುವೆಯೂ ಭಾನುವಾರ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್ ಅವುಗಳನ್ನು ಅನಾವರಣಗೊಳಿಸಿದರು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. 

ಪ್ರತಿಮೆಗಳ ಸ್ಥಳಾಂತರ ವಿರುದ್ಧ ಟೀಕೆಗಳು ಕೇಳಿಬಂದಿವೆ. ಆದಾಗ್ಯೂ, ಸಂಬಂಧಪಟ್ಟವರೊಂದಿಗೆ ಚರ್ಚಿಸಿದ ನಂತರವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಓಂ ಬಿರ್ಲಾ ತಿಳಿಸಿದರು.

‘ಯಾವ ಪ್ರತಿಮೆಯನ್ನೂ ತೆಗೆದುಹಾಕಿಲ್ಲ, ಸ್ಥಳಾಂತರ ಮಾಡಲಾಗಿದೆ ಅಷ್ಟೇ. ಈ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಎಲ್ಲರ ಪ್ರತಿಮೆಗಳು ಒಂದು ಕಡೆ ಇದ್ದರೆ, ಅವರ ಬದುಕು ಮತ್ತು ಸಾಧನೆಯ ಬಗ್ಗೆ ಮಾಹಿತಿ ನೀಡುವುದು ಸುಲಭ’ ಎಂದು ಹೇಳಿದರು. 

ಈ ಬಗ್ಗೆ ‘ಎಕ್ಸ್‌’ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಲೋಕಸಭೆಯ ವೆಬ್‌ಸೈಟ್ ಪ್ರಕಾರ, ಸಂಸತ್ತಿನ ಪ್ರತಿಮೆಗಳ ಸಮಿತಿಯು ಕೊನೆಯ ಬಾರಿಗೆ ಸಭೆ ಸೇರಿರುವುದು 2018ರ ಡಿಸೆಂಬರ್ 18ರಂದು. 17ನೇ ಲೋಕಸಭೆ (2019–2024) ಅವಧಿಯಲ್ಲಿ ಅದರ ಪುನರ್ ರಚನೆಯೇ ಆಗಿಲ್ಲ. ಅದು ಮೊದಲ ಬಾರಿಗೆ ಉಪಸಭಾಪತಿ ಇಲ್ಲದೆಯೇ ಕಾರ್ಯ ನಿರ್ವಹಿಸಿದೆ. ಇಂದು, ಸಂಸತ್ ಸಂಕೀರ್ಣದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಮೆಗಳ ಸ್ಥಳಾಂತರ ನಡೆದಿದೆ. ಇದು ಆಡಳಿತಾರೂಢ ಪಕ್ಷ ಏಕಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಣಯ ಎನ್ನುವುದು ಸ್ಪಷ್ಟ’ ಎಂದು ಟೀಕಿಸಿದ್ದಾರೆ.

‘ಪ್ರತಿಮೆಗಳ ಸ್ಥಳಾಂತರ ಮಾಡಿರುವುದು ಮತ್ತು ಆ ಸ್ಥಳಕ್ಕೆ ಭವ್ಯವಾದ ಹೆಸರು ನೀಡಿರುವುದರ ಉದ್ದೇಶ, ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳು ಸಂಸತ್ತಿನ ಪ್ರಮುಖ ಸ್ಥಳದಲ್ಲಿ ಇರಬಾರದು ಎನ್ನುವುದಾಗಿದೆ. ಸಂಸತ್ತಿನ ಮುಂಭಾಗದಲ್ಲಿದ್ದ ಈ ಪ್ರತಿಮೆಗಳ ಮುಂದೆ ಸಂಸದರು ಶಾಂತಿಯುತವಾಗಿ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಮೋದಿ ಸರ್ಕಾರದ ಅವಧಿಯಲ್ಲಿ ಹಾಗೆ ಪ್ರತಿನಿತ್ಯ ಪ್ರತಿಭಟನೆ ಮಾಡಬೇಕಾಗುತ್ತದೆ. ಪ್ರತಿಭಟನೆ ಮಾಡಲು ಸ್ಥಳ ಇಲ್ಲದಂತೆ ಮಾಡುವುದೇ ಸರ್ಕಾರದ ಉದ್ದೇಶ’ ಎಂದು ಜೈರಾಮ್ ರಮೇಶ್ ‘ಎಕ್ಸ್‌’ನಲ್ಲಿ ಮಾಡಿರುವ ಮತ್ತೊಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಂಸತ್ತಿನ ಆವರಣದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು  ‘ಪ್ರೇರಣಾ ಸ್ಥಳ’ಕ್ಕೆ ಸ್ಥಳಾಂತರಿಸಲಾಗಿದ್ದು ಅವುಗಳನ್ನು ಭಾನುವಾರ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್ ಅನಾವರಣಗೊಳಿಸಿದರು.ಈ ವೇಳೆ ಕೇಂದ್ರ ಸಚಿವರಾದ ಕಿರಣ್ ರಿಜಿಜು ಅಶ್ವಿನಿ ವೈಷ್ಣವ್ ಪ್ರಹ್ಲಾದ ಜೋಷಿ ಮತ್ತಿತರರು ಉಪಸ್ಥಿತರಿದ್ದರು–ಪಿಟಿಐ ಚಿತ್ರ 
ಸಂಸತ್ತಿನ ಆವರಣದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು  ‘ಪ್ರೇರಣಾ ಸ್ಥಳ’ಕ್ಕೆ ಸ್ಥಳಾಂತರಿಸಲಾಗಿದ್ದು ಅವುಗಳನ್ನು ಭಾನುವಾರ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್ ಅನಾವರಣಗೊಳಿಸಿದರು.ಈ ವೇಳೆ ಕೇಂದ್ರ ಸಚಿವರಾದ ಕಿರಣ್ ರಿಜಿಜು ಅಶ್ವಿನಿ ವೈಷ್ಣವ್ ಪ್ರಹ್ಲಾದ ಜೋಷಿ ಮತ್ತಿತರರು ಉಪಸ್ಥಿತರಿದ್ದರು–ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT