ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

554 ರೈಲು ನಿಲ್ದಾಣಗಳ ಮರು ಅಭಿವೃದ್ಧಿ

ರೈಲ್ವೆಯ ಹಲವು ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪ‍ನೆ, ಚಾಲನೆ
Published 26 ಫೆಬ್ರುವರಿ 2024, 15:18 IST
Last Updated 26 ಫೆಬ್ರುವರಿ 2024, 15:18 IST
ಅಕ್ಷರ ಗಾತ್ರ

ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತವು, ಯುವಕರ ಕನಸಿನ ಭಾರತ ಆಗಲಿದೆ. ಭವಿಷ್ಯದಲ್ಲಿ ದೇಶವು ಹೇಗೆ ರೂಪುಗೊಳ್ಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಯುವ ಸಮೂಹಕ್ಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಾದಿಸಿದರು. 

ರೈಲ್ವೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ವಿಕಸಿತ ಭಾರತ ಹೇಗೆ ರೂಪುಗೊಳ್ಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ಯುವ ಜನರ ಅಭಿಪ್ರಾಯ ಮುಖ್ಯವಾಗಿದೆ. ನಿಮ್ಮ ಕನಸು ಮೋದಿಯವರ ಸಂಕಲ್ಪ ಎಂದು ದೇಶದ ಪ್ರತಿಯೊಬ್ಬ ಯುವಜನರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಕನಸು, ಪರಿಶ್ರಮ ಮತ್ತು ಮೋದಿ ಅವರ ಸಂಕಲ್ಪವೇ ವಿಕಸಿತ ಭಾರತದ ಗ್ಯಾರಂಟಿ’ ಎಂದು ಹೇಳಿದರು.

ವಂದೇ ಭಾರತ್‌ ರೈಲುಗಳ ಆರಂಭ ಮತ್ತು ರೈಲ್ವೆಗೆ ಸಂಬಂಧಿಸಿದಂತೆ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ‘ಕಳೆದ 10 ವರ್ಷಗಳ ತಮ್ಮ ಆಡಳಿತದಲ್ಲಿ ನವ ಭಾರತ ನಿರ್ಮಾಣ ಆಗಿರುವುದನ್ನು ಜನರು ಕಂಡಿದ್ದಾರೆ’ ಎಂದರು.

ಮುಂಬರುವ ಲೋಕಸಭಾ ಚುನಾವಣೆ ಗೆದ್ದು ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ ಅವರು, ‘ನಮ್ಮ ಮೂರನೇ ಅವಧಿಯ ಆಡಳಿತ ಜೂನ್‌ನಲ್ಲಿ ಆರಂಭವಾಗಲಿದೆ. ಕಳೆದ ಎರಡು ಅವಧಿಗಳಲ್ಲಿ ದೇಶದಲ್ಲಿ ನಡೆದಿರುವ ಅಭಿವೃದ್ಧಿಯ ಪ್ರಮಾಣ ಮತ್ತು ವೇಗವು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ’ ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಗುಜರಾತ್‌ನಲ್ಲಿ ಕಳೆದ ಎರಡು ದಿನಗಳಲ್ಲಿ ತಾವು ಭಾಗವಹಿಸಿದ್ದ ಕಾರ್ಯಕ್ರಮಗಳನ್ನು ನೆನಪಿಸಿಕೊಂಡ ಪ್ರಧಾನಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳೂ ಸಾಕಷ್ಟು ಸುಧಾರಣೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.

ಪ್ರಮುಖ ಅಂಶಗಳು

* ಅಮೃತ್‌ ಭಾರತ್‌ ನಿಲ್ದಾಣ ಯೋಜನೆಯಡಿ (ಎಬಿಎಸ್‌ಎಸ್) 27 ರಾಜ್ಯಗಳ 300 ಜಿಲ್ಲೆಗಳಲ್ಲಿ 554 ರೈಲು ನಿಲ್ದಾಣಗಳ ಮರು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

* ₹ 41 ಸಾವಿರ ಕೋಟಿ ಮೊತ್ತದ ಯೋಜನೆಗಳು

* ರೈಲ್ವೆಗೆ ಸಂಬಂಧಿಸಿದ 2 ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ 

* ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗೆ ಸಂಬಂಧಿಸಿದ 1,500 ಕಾಮಗಾರಿಗಳು

ಒಂದು ಕಾಲದಲ್ಲಿ ರಾಜಕೀಯದ ಬಲಿಪಶುವಾಗಿದ್ದ ಭಾರತೀಯ ರೈಲ್ವೆ ಇಂದು ಸುಗಮ ಪ್ರಯಾಣ ಮತ್ತು ಉದ್ಯೋಗದ ದೊಡ್ಡ ಮೂಲವಾಗಿದೆ
ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT