ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ಖುರ್ಷೀದ್ ಪುಸ್ತಕದಲ್ಲಿ ಪಿ.ವಿ.ಎನ್ ಬಗ್ಗೆ ಕುತೂಹಲಕರ ಮಾಹಿತಿ ಬಹಿರಂಗ

ಬಾಬರಿ ಮಸೀದಿ ಧ್ವಂಸಗೊಂಡ ನಂತರ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಪ್ರತಿಕ್ರಿಯೆ
Last Updated 14 ನವೆಂಬರ್ 2021, 11:28 IST
ಅಕ್ಷರ ಗಾತ್ರ

ನವದೆಹಲಿ: ‘1992ರ ಡಿಸೆಂಬರ್‌ 6ರ ಬೆಳಿಗ್ಗೆ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ನಂತರ ಕೇಂದ್ರ ಮಂತ್ರಿ ಮಂಡಳದ ಸಭೆ ನಡೆಯಿತು. ಈ ಘಟನೆ ನಂತರ ತಮಗಾದ ನೋವನ್ನು ಹೇಳಿಕೊಳ್ಳಲು ಸಚಿವರು ಮುಂದಾದರು. ಆಗ, ಸಂಪುಟದ ಸಹೋದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರು ‘ನನ್ನ ಮೇಲೆ ನಿಮ್ಮ ಸಹಾನುಭೂತಿ ಇರಲಿ’ ಎಂಬ ಮಾರುತ್ತರ ನೀಡಿದರು...’

– ಹಿರಿಯ ಕಾಂಗ್ರೆಸ್‌ ಮುಖಂಡ ಸಲ್ಮಾನ್‌ ಖುರ್ಷೀದ್ ಅವರ ನೂತನ ಕೃತಿ ‘ಸನ್‌ರೈಸ್ ಒವರ್ ಅಯೋಧ್ಯಾ: ನೇಷನ್‌ಹುಡ್ ಇನ್‌ ಅವರ್‌ ಟೈಮ್ಸ್‌’ನಲ್ಲಿ ಈ ಪ್ರಸಂಗವನ್ನು ಉಲ್ಲೇಖಿಸಲಾಗಿದೆ.

‘ಯಾರೂ ಕಲ್ಪಿಸಲಾಗದಂತಹ ಆಘಾತಕಾರಿ ಘಟನೆಯೊಂದು ಸಂಭವಿಸಿಬಿಟ್ಟಿತು. ಪರಿಸ್ಥಿತಿ ಕ್ರಮೇಣ ತಹಬದಿಗೆ ಬಂದಿತಲ್ಲದೇ, ಒಂದು ರೀತಿಯ ಭಾವಶೂನ್ಯತೆ ಮನೆ ಮಾಡಿತ್ತು’ ಎಂದು ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

‘ಸಭೆಯಲ್ಲಿ ಪಾಲ್ಗೊಂಡಿದ್ದವರಿಂದ ಮಾತುಗಳೇ ಹೊರಡುತ್ತಿರಲಿಲ್ಲ. ಕೊನೆಗೆ ಮಾಧವರಾವ್‌ ಸಿಂಧಿಯಾ ಅವರು ಮೌನ ಮುರಿದರು. ನರಸಿಂಹರಾವ್‌ ಅವರು ಎದುರಿಸುತ್ತಿದ್ದ ಸಂದಿಗ್ಧ ಪರಿಸ್ಥಿತಿ ಕುರಿತು ಸಂಪುಟದ ಸಹೋದ್ಯೋಗಿಗಳ ವೇದನೆ ಏನಿತ್ತು ಎಂಬುದನ್ನು ವಿವರಿಸಲು ಮುಂದಾದರು. ಆದರೆ, ಮಾನಸಿಕ ಹೊಯ್ದಾಟದಲ್ಲಿದ್ದ ಪ್ರಧಾನಿಯವರಿಂದ ಬಂದ ಪ್ರತಿಕ್ರಿಯೆ ನಮಗೆ ಅಚ್ಚರಿ ಮೂಡಿಸಿತ್ತು’ ಎಂದು ಅವರು ನೆನಪಿಸಿಕೊಂಡಿದ್ದಾರೆ.

‘ಪ್ರಧಾನಿ ರಾವ್‌ ಅವರ ಈ ಕಠೋರ ಪ್ರತಿಕ್ರಿಯೆ ನಂತರ ಅಂದಿನ ಸಭೆಯಲ್ಲಿ ಚರ್ಚೆ ಮುಂದುವರಿಯಲಿಲ್ಲ. ಯಾವುದೇ ವಿಸ್ತೃತ ಚರ್ಚೆ ಇಲ್ಲದೇ ಸಭೆ ಮುಕ್ತಾಯವಾಯಿತು’ ಎಂದೂ ಅವರು ಬರೆದಿದ್ದಾರೆ.

ಸಂಪುಟದ ಶಿಫಾರಸಿನ ಮೇರೆ ಡಿಸೆಂಬರ್‌ 6ರಂದು ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಲಾಯಿತು. ವಾರ ನಂತರ, ಹಿಮಾಚಲಪ್ರದೇಶ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರಗಳನ್ನು ಸಹ ರಾಷ್ಟ್ರಪತಿಗಳು ವಜಾಗೊಳಿಸಿದರು ಎಂದೂ ಖುರ್ಷೀದ್‌ ಈ ಕೃತಿಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT