ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಾಜಿ ಪ್ರತಿಮೆ ಕುಸಿತ | ಶಿರಬಾಗಿ ಕ್ಷಮೆ ಕೋರುವೆ: ಪ್ರಧಾನಿ ಮೋದಿ

Published : 30 ಆಗಸ್ಟ್ 2024, 15:35 IST
Last Updated : 30 ಆಗಸ್ಟ್ 2024, 15:35 IST
ಫಾಲೋ ಮಾಡಿ
Comments

ಪಾಲ್ಘರ್, (ಮಹಾರಾಷ್ಟ್ರ): ಛತ್ರಪತಿ ಶಿವಾಜಿ ಮಹಾರಾಜ ಅವರ ಪ್ರತಿಮೆ ಕುಸಿದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮರಾಠಿಗರ ಕ್ಷಮೆ ಕೋರಿದ್ದಾರೆ. 

ಜತೆಗೆ, ವೀರ ಸಾವರ್ಕರ್ ಅವರ ವಿರುದ್ಧ ಕಾಂಗ್ರೆಸ್‌ ನಡೆಸುತ್ತಿರುವ ವಾಗ್ದಾಳಿಯನ್ನು ಸಹ ಪ್ರಸ್ತಾಪಿಸಿದ್ದಾರೆ.

’2013ರಲ್ಲಿ ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದ ತಕ್ಷಣ, ರಾಯಗಡದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಅವರ ಸಮಾಧಿಯ ಮುಂದೆ ಭಕ್ತನಾಗಿ ಕುಳಿತಿದ್ದೆ. ಅಲ್ಲಿಂದಲೇ ಹೊಸ ಪಯಣ ಆರಂಭವಾಯಿತು. ಶಿವಾಜಿ ಮಹಾರಾಜ ನಮ್ಮ ಪಾಲಿಗೆ ಕೇವಲ ಹೆಸರು ಅಥವಾ ರಾಜ ಅಷ್ಟೇ ಅಲ್ಲ, ಅವರು ನಮಗೆ ಪೂಜಿತರು. ಅವರ ಪಾದಕ್ಕೆ ಶಿರಬಾಗಿ ನಮಸ್ಕರಿಸಿ, ಆದ ಘಟನೆಗೆ ಕ್ಷಮೆ ಕೋರುತ್ತೇನೆ’ ಎಂದು ಶುಕ್ರವಾರ ಇಲ್ಲಿ ಹೇಳಿದರು.

ಪಾಲ್ಘರ್ ಜಿಲ್ಲೆ ದಹನುವಿನಲ್ಲಿ ನಿರ್ಮಾಣ ಆಗಲಿರುವ, ₹76 ಸಾವಿರ ಕೋಟಿ ಅಂದಾಜು ವೆಚ್ಚದ ವಧಾವನ್‌ ಬಂದರು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. 

ಇದೇ ಸಂದರ್ಭದಲ್ಲಿ ಅವರು, ಹಿಂದುತ್ವದ ನಾಯಕರಾಗಿದ್ದ ವೀರ ಸಾವರ್ಕರ್‌ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುವ ಕಾಂಗ್ರೆಸ್‌ ಪಕ್ಷದವರು ಅದಕ್ಕಾಗಿ, ಕ್ಷಮೆಯನ್ನೇ ಕೋರುವುದಿಲ್ಲ ಎಂದು ಹರಿಹಾಯ್ದರು. 

ಮಾಲ್ವಾನ್‌ನ ರಾಜ್‌ಕೋಟ್‌ ಕೋಟೆಯಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಶಿವಾಜಿ ಅವರ ಪ್ರತಿಮೆ ಕುಸಿದ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ತೀವ್ರ ಟೀಕಾಪ್ರಹಾರ ನಡೆಸಿರುವಂತೆಯೇ, ಪ್ರಧಾನಿ ಕ್ಷಮೆಯ ಮಾತು ಆಡಿದ್ದಾರೆ.

‘ನಮ್ಮ ಚಿಂತನೆಗಳು ಭಿನ್ನವಾಗಿವೆ. ಆದರೆ,  ಅವು ನಾವು ಪೂಜಿಸುವವರಿಗಿಂತ ದೊಡ್ಡದಲ್ಲ. ಕೆಲವರು ನಿರಂತರವಾಗಿ ವೀರ ಸಾವರ್ಕರ್ ಅವರನ್ನು ನಿಂದಿಸುತ್ತಾರೆ. ಆದರೆ, ಅಪಮಾನಿಸಿದ್ದಕ್ಕೆ ಕ್ಷಮೆ ಕೋರಲೂ ಸಿದ್ಧರಿಲ್ಲ’ ಎಂದರು. ‘ಇಲ್ಲಿಗೆ ಬಂದ ಕೂಡಲೇ ನಾನು ಮಾಡಿದ ಮೊದಲ ಕೆಲಸ ಪ್ರತಿಮೆ ಕುಸಿತ ಘಟನೆಯಿಂದ ನೊಂದವರ ಕ್ಷಮೆಯನ್ನು ಕೇಳಿದ್ದಾಗಿದೆ’ ಎಂದರು.

ಪ್ರತಿಮೆ ಕುಸಿತ ಪ್ರಕರಣದ ತನಿಖೆಗೆ ನೌಕಾಪಡೆ ಪ್ರತಿನಿಧಿಗಳು, ತಂತ್ರಜ್ಞರಿರುವ ಸಮಿತಿಯನ್ನು ಸರ್ಕಾರ ರಚಿಸಿದೆ.

ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ, ಗ್ಲೋಬಲ್‌ ಫಿನ್‌ಟೆಕ್‌ ಫೆಸ್ಟ್ ಉದ್ಘಾಟನೆಗೆ ಪ್ರಧಾನಿ ‌ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ, ಪ್ರತಿಮೆ ಕುಸಿತ ಪ್ರಕರಣ ಖಂಡಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ಪೊಲೀಸರು ಮುಂಬೈ ನಗರದ ಕಾಂಗ್ರೆಸ್ ಘಟಕದ ಅಧ್ಯಕ್ಷ, ಸಂಸದ ಪ್ರೊ. ವರ್ಷಾ ಗಾಯಕವಾಡ್, ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷ ನಸೀಂ ಖಾನ್‌ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು.

‘₹ 76 ಸಾವಿರ ಕೋಟಿ ವೆಚ್ಚದಲ್ಲಿ ಆಧುನಿಕ ಬಂದರು ನಿರ್ಮಾಣ’

ವಧಾವನ್‌ ಬಂದರು ನಿರ್ಮಾಣ ಯೋಜನೆಯನ್ನು ₹ 76  ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಜಾರಿಗೊಳಿಸುತ್ತಿದ್ದು, ಇದು ದೇಶದಲ್ಲೇ ಸರಕು ಸಾಗಣೆಯ ಅತಿ ದೊಡ್ಡ ಬಂದರು ಆಗಿರಲಿದೆ ಎಂದು ಪ್ರಧಾನಿ ಹೇಳಿದರು. ಶಂಕುಸ್ಥಾಪನೆ ಜೊತೆಗೆ 1,560 ಕೋಟಿ ವೆಚ್ಚದ ವಿವಿಧ 219 ಮೀನುಗಾರಿಕೆ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆಯನ್ನು ಅವರು ನೆರವೇರಿಸಿದರು. ‘ಶತಮಾನಗಳಿಂದಲೂ ಮಹಾರಾಷ್ಟ್ರ ಅಂತರರಾಷ್ಟ್ರೀಯ ವಹಿವಾಟಿಗೆ ಸಂಪರ್ಕವಾಗಿದೆ’ ಎಂದರು. ‘ಅಭಿವೃದ್ಧಿ ದೃಷ್ಟಿಯಿಂದ  ಈ ದಿನ ಐತಿಹಾಸಿಕವಾದುದು. ನವಭಾರತಕ್ಕೆ ತನ್ನ ಸಾಮರ್ಥ್ಯದ ಅರಿವಿದೆ. ಅದು, ಗುಲಾಮಗಿರಿಯ ಸಂಕೋಲೆಯಿಂದ ಹೊರಬಂದಿದೆ. ಉದ್ದೇಶಿತ ವಧಾವನ್‌ ಬಂದರಿನಲ್ಲಿ ಅತಿ ದೊಡ್ಡ ಹಡಗುಗಳ ನಿಲುಗಡೆಗೆ ಅವಕಾಶವಿದೆ. ಇದು, ವಿಶ್ವದರ್ಜೆ ಗುಣಮಟ್ಟದ ಸಮುದ್ರಮಾರ್ಗದ ಹೆಬ್ಬಾಗಿಲು ಆಗಲಿದೆ’ ಎಂದು ಹೇಳಿದರು.   ‘ಉದ್ದೇಶಿತ ಬಂದರು, ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳಿಗೆ ಸಂಪರ್ಕ ಒದಗಿಸಲಿದ್ದು, ಪ್ರಯಾಣದ ಅಂತರವನ್ನು ತಗ್ಗಿಸಲಿದೆ. ಅತ್ಯಾಧುನಿಕ ತಂತ್ರಜ್ಞಾನ, ಮೂಲಸೌಲಭ್ಯ ಹೊಂದಿರಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT