ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಕಾಯ್ದೆಗೆ ಇನ್ನಷ್ಟು ಬಲ: ಪ್ರಧಾನಿ ಮೋದಿ

ಮಹಿಳೆ ಮೇಲಿನ ದೌರ್ಜನ್ಯ ಪಾಪಕೃತ್ಯ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು –ಪ್ರಧಾನಿ
Published : 25 ಆಗಸ್ಟ್ 2024, 13:09 IST
Last Updated : 25 ಆಗಸ್ಟ್ 2024, 13:09 IST
ಫಾಲೋ ಮಾಡಿ
Comments

ಜಲಗಾಂವ್‌, ಮಹಾರಾಷ್ಟ್ರ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕೃತ್ಯಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಸಜೆ ವಿಧಿಸಲು ಕಾಯ್ದೆಗಳನ್ನು ಇನ್ನಷ್ಟು ಬಲಪಡಿಸುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಭಾನುವಾರ ಇಲ್ಲಿ ನಡೆದ ‘ಲಖ್‌ಪತಿ ದೀದಿ’ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಮಹಿಳೆಯರ ಮೇಲಿನ ದೌರ್ಜನ್ಯ ಕೃತ್ಯ ಕ್ಷಮಿಸಲಾಗದಂತ ಪಾಪ. ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗಬಾರದು’ ಎಂದು ಪ್ರತಿಪಾದಿಸಿದರು.

ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಮುಂಬೈನಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಕೃತ್ಯಗಳ ವಿರುದ್ಧ ಸಾರ್ವಜನಿಕವಾಗಿ ವ್ಯಕ್ತವಾಗಿರುವ ತೀವ್ರ ಆಕ್ರೋಶದ ಹಿಂದೆಯೇ ಪ್ರಧಾನಿ ಈ ಮಾತು ಹೇಳಿದ್ದಾರೆ.

‘ಮಹಿಳೆಯರ ಸುರಕ್ಷೆಯೇ ಆದ್ಯತೆಯಾಗಬೇಕು. ತಾಯಂದಿರು, ಸಹೋದರಿಯರು, ಪುತ್ರಿಯರ ರಕ್ಷಣೆ ದೇಶದ ಆದ್ಯತೆ. ಕೆಂಪುಕೋಟೆ ಭಾಷಣದಲ್ಲೂ ಇದನ್ನು ನಾನು ಒತ್ತಿ ಹೇಳಿದ್ದೇನೆ. ದೇಶದ ಯಾವುದೇ ರಾಜ್ಯದ ಸಂಗತಿ ಇರಲಿ; ಸೋದರಿಯರ ಆಕ್ರೋಶ, ನೋವು ನನಗೆ ಅರ್ಥವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಆಸ್ಪತ್ರೆ, ಶಾಲೆ, ಸರ್ಕಾರ, ಪೊಲೀಸ್‌ ಠಾಣೆ ಎಲ್ಲಿಯೇ ಇರಲಿ; ತಪ್ಪಿತಸ್ಥರಿಗೆ ನೆರವು ನೀಡುವವರನ್ನೂ ಬಿಡಬಾರದು. ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ಆಗಿದ್ದರೂ ಅದಕ್ಕೆ ಸರ್ವರನ್ನೂ ಹೊಣೆ ಮಾಡಬೇಕು’ ಎಂದರು.

ಮಹಿಳೆಯರ ಏಳಿಗೆಗೆ ಕ್ರಮ: ‘ಮಹಿಳಾ ಕಲ್ಯಾಣ ಗುರಿ ಸಾಧನೆಗಾಗಿ ನನ್ನ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ₹9 ಲಕ್ಷ ಕೋಟಿ ನೆರವು ಒದಗಿಸಿದೆ. ಆದರೆ, ನೆರವಿನ ಮೊತ್ತವು ಸ್ವಾತಂತ್ರ್ಯಾನಂತರದಿಂದ 2024ರವರೆಗೆ ಕೇವಲ ₹25 ಸಾವಿರ ಕೋಟಿ ಆಗಿತ್ತು’ ’ ಎಂದು ಹೇಳಿದರು. ಇದೇ ವೇಳೆ ವಿವಿಧ ರಾಜ್ಯಗಳಿಂದ ಬಂದಿದ್ದ ‘ಲಖ್‌ಪತಿ ದೀದಿ’ಯರ ಜೊತೆಗೆ ಚರ್ಚಿಸಿದರು.

‘ಸ್ವಾತಂತ್ರ್ಯಾನಂತರ ಆಡಳಿತದಲ್ಲಿದ್ದ ಸರ್ಕಾರಗಳು ಮಹಿಳೆಯರ ಏಳಿಗೆಗೆ ಮಾಡಿರುವುದಕ್ಕಿಂತಲೂ ಹೆಚ್ಚಿನದನ್ನು, ನನ್ನ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳಲ್ಲಿಯೇ ಕಾರ್ಯಗತಗೊಳಿಸಿದೆ’ ಎಂದು ಪ್ರತಿಪಾದಿಸಿದರು. 

4.3 ಲಕ್ಷ ಸ್ವಯಂ ಸೇವಾ ಸಂಘಟನೆಗಳ 48 ಲಕ್ಷ ಸದಸ್ಯೆಯರಿಗೆ ನೆರವಾಗಲು ₹2,500 ಕೋಟಿ ಆವರ್ತ ನಿಧಿ ಬಿಡುಗಡೆಯಾಗಿದೆ. ‘ಲಖ್‌ಪತಿ ದೀದಿ’ ಯೋಜನೆ ಗುರಿ ಭವಿಷ್ಯದ ಪೀಳಿಗೆಯ ಸಬಲೀಕರಣವೂ ಆಗಿದೆ ಎಂದರು.

ಮನೆ, ಕುಟುಂಬದ ಏಳಿಗೆಗೆ ಮಹಿಳೆ ಗ್ಯಾರಂಟಿ. ಆದರೆ, ಮಹಿಳೆಗೆ ನೆರವಾಗುವ ಗ್ಯಾರಂಟಿಯನ್ನು ಯಾರೂ ನೀಡುವುದಿಲ್ಲ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

‘ಮಹಿಳೆ ಹೆಸರಲ್ಲಿ ಆಸ್ತಿ ಇರಲ್ಲ. ಬ್ಯಾಂಕ್‌ ಸಾಲ ಸಿಗುವುದಿಲ್ಲ. ಉದ್ದಿಮೆ ಆರಂಭಿಸಲಾಗದು. ಹೀಗಾಗಿ, 3 ಕೋಟಿ ಸೋದರಿಯರನ್ನು ಲಖ್‌ಪತಿ ದೀದಿ ಮಾಡುವುದಾಗಿ ಚುನಾವಣೆ ವೇಳೆ ವಾಗ್ದಾನ ಮಾಡಿದ್ದೆ. ಇದರರ್ಥ, ಸ್ವಯಂ ಸೇವಾ ಸಂಘಗಳ ಸದಸ್ಯೆಯರ ಆದಾಯ ವಾರ್ಷಿಕ ₹1 ಲಕ್ಷ ಮೀರುವುದನ್ನು ಖಾತರಿಪಡಿಸುವುದಾಗಿತ್ತು’ ಎಂದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ರಾಜ್ಯದ ಸ್ಥಿರತೆ ಮತ್ತು ಅಭ್ಯುದಯಕ್ಕಾಗಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ ಮಹಿಳೆಯರ ಘನತೆ ಬದುಕು ರಕ್ಷಿಸುವುದು ನಮ್ಮೆಲ್ಲರ ಗುರುತರ ಹೊಣೆ ಆಗಬೇಕು. ಈ ಕುರಿತು ಸ್ಪಷ್ಟ ಮತ್ತು ಕಠಿಣ ಸಂದೇಶ ಮೇಲಿನಿಂದ ರವಾನೆ ಆಗಬೇಕು
ನರೇಂದ್ರ ಮೋದಿ, ಪ್ರಧಾನಿ

‘ವಿಕಸಿತ ಭಾರತ’ಕ್ಕಾಗಿ ರಾಜಕೀಯಕ್ಕೆ ಬನ್ನಿ’ ಯುವಜನರಿಗೆ ಪ್ರಧಾನಿ ‘ಮನ್‌ ಕೀ ಬಾತ್’

‘ವಿಕಸಿತ ಭಾರತ ಗುರಿ ಸಾಧನೆಗೆ ಸಂಘಟಿತ ಯತ್ನ ಅಗತ್ಯ. ರಾಜಕೀಯ ಹಿನ್ನೆಲೆಯಿಲ್ಲದ ಯುವಜನರು ರಾಜಕಾರಣಕ್ಕೆ ಬರಬೇಕು’ ಎಂದು ಪ್ರಧಾನಿ ಹೇಳಿದ್ದಾರೆ. ‘ರಾಜಕೀಯ ಹಿನ್ನೆಲೆ ಇಲ್ಲದ ಯುವಜನರು ಸ್ವಾತಂತ್ರ್ಯ ಹೋರಾಟದಲ್ಲಿ ತೋರಿದ್ದಂತಹ ಕಾರ್ಯೋತ್ಸಾಹದ ಅಗತ್ಯ ಈಗ ಇದೆ’ ಎಂದು ‘ಮನ್‌ ಕೀ ಬಾತ್’ ಕಾರ್ಯಕ್ರಮದಲ್ಲಿ ಹೇಳಿದರು. ಯುವಜನರು ರಾಜಕೀಯಕ್ಕೆ ಬರಬೇಕು ಎಂದು ತಾವು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನೀಡಿದ್ದ ಕರೆಗೆ ಲಕ್ಷ ಯುವಜನರು ಸ್ಪಂದಿಸಿದ್ದಾರೆ. ಈ ಎಲ್ಲರೂ ಉತ್ತಮ ಅವಕಾಶ ಸೂಕ್ತ ಮಾರ್ಗದರ್ಶನದ ನಿರೀಕ್ಷೆಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ‘ನನಗೆ ಹಲವರು ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿರೀಕ್ಷೆ ಮೀರಿ ಸ್ಪಂದನ ಸಿಕ್ಕಿದೆ. ಹಲವರು ಸಲಹೆ ನೀಡಿದ್ದಾರೆ. ಬಯಕೆ ಇದ್ದರೂ ಕುಟುಂಬ ರಾಜಕಾರಣ ಪ್ರಾಬಲ್ಯ ಹೊಂದಿರುವ ಕಾರಣದಿಂದ ಬರಲಾಗುತ್ತಿಲ್ಲ ಎಂದೂ ಕೆಲವರು ಹೇಳಿದ್ದಾರೆ’ ಎಂದರು. ಯುವಪ್ರತಿಭೆಗಳನ್ನು ಉಲ್ಲೇಖಿಸಿದ ಪ್ರಧಾನಿ ಐಐಟಿ ಮದ್ರಾಸ್‌ನ ಹಿರಿಯ ವಿದ್ಯಾರ್ಥಿಗಳು ಗ್ಯಾಲಕ್ಸ್‌ಐ ಹೆಸರಿನ ಸ್ಟಾರ್ಟ್‌–ಅಪ್‌ ಆರಂಭಿಸಿ ಯಶಸ್ಸು ಕಂಡಿರುವುದನ್ನು ಉದಾಹರಿಸಿದರು. ಚಂದ್ರಯಾನದ ಯಶಸ್ಸಿಗೆ ಆ. 23ರನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸುವುದು ಹರ್‌ ಘರ್‌ ತಿರಂಗಾ ಪೂರಾ ದೇಶ್‌ ತಿರಂಗಾ ಅಭಿಯಾನವನ್ನು ಉಲ್ಲೇಖಿಸಿದರು. ಆಗಸ್ಟ್ 29 ‘ತೆಲುಗು ಭಾಷಾ ದಿನ’ವಾಗಿದೆ ಎಂದು ಹೇಳಿದ ಅವರು ‘ತೆಲುಗು ಒಂದು ಅದ್ಭುತ ಭಾಷೆ. ಈ ಸಂದರ್ಭದಲ್ಲಿ ಎಲ್ಲ ತೆಲುಗು ಭಾಷಿಕರಿಗೆ ಶುಭ ಕೋರುತ್ತೇನೆ’ ಎಂದರು. ‘ಪ್ಯಾರಿಸ್‌ನಲ್ಲಿನ ಪ್ಯಾರಾಲಿಂಪಿಕ್‌ ಕ್ರೀಡಾಕೂಟಕ್ಕೆ ತೆರಳಿರುವ ನಮ್ಮ ದಿವ್ಯಾಂಗ ಸೋದರರು ಸೋದರಿಯರನ್ನು ‘ಚಿಯರ್4ಭಾರತ್‌’ ಹ್ಯಾಶ್ ಟ್ಯಾಗ್‌ ಮೂಲಕ ಬೆಂಬಲಿಸಿ ಎಂದು ಕರೆ ಕೊಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT