ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಹಕ್ಕು ಕಸಿದುಕೊಳ್ಳದಿರಿ: ಮಲ್ಲಿಕಾರ್ಜುನ ಖರ್ಗೆ

Published 6 ಅಕ್ಟೋಬರ್ 2023, 10:56 IST
Last Updated 6 ಅಕ್ಟೋಬರ್ 2023, 10:56 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಮೀಣ ಭಾರತದಲ್ಲಿ ಜನರು ಮನರೇಗಾ ಯೋಜನೆಯಡಿ ಕೆಲಸಕ್ಕಾಗಿ ಅಲೆಯುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಚುನಾವಣಾ ನಡೆಯಲಿರುವ ರಾಜ್ಯಗಳ ಪ್ರವಾಸದ ವೇಳೆ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತ ತಮ್ಮ ವೈಫಲ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಆರೋಪಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ವಿಷಯಕ್ಕೆ ಸಂಬಂಧಿಸಿದಂತೆ ಅಶೋಕ್‌ ಗೆಹಲೋತ್‌ ನೇತೃತ್ವದ ರಾಜಸ್ಥಾನ ಸರ್ಕಾರದ ವಿರುದ್ಧ ಗುರುವಾರ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

‘ಎಕ್ಸ್‌’ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖರ್ಗೆ ಅವರು, ‘ಪ್ರಧಾನಿ ಅವರು ಕಾಂಗ್ರೆಸ್‌ ಪಕ್ಷವನ್ನು ಮನಸೋ ಇಚ್ಛೆ ಟೀಕಿಸಲಿ, ಆದರೆ, ಬಡಜನರ ಹಕ್ಕುಗಳನ್ನು ಕಸಿದುಕೊಳ್ಳಬಾರದು’ ಎಂದು ಹೇಳಿದ್ದಾರೆ.

‘ಆದಾಯ ಕಡಿಮೆಯಾಗಿ ಹಣದುಬ್ಬರ ಏರಿಕೆಯಾಗಿರುವ ಕಾರಣ ಬಡ ಜನರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಮನರೇಗಾ) ಕೆಲಸ ನೀಡಿ ಎಂಬ ಬೇಡಿಕೆ ಹೆಚ್ಚುತ್ತಿದೆ. ಆದರೆ, ಬಜೆಟ್‌ನಲ್ಲಿ ಅದಕ್ಕೆ ಮೀಸಲಿಡುವ ಅನುದಾನವನ್ನು ಕಡಿತ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಗ್ರಾಮೀಣ ಭಾಗದಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಮನರೇಗಾ ಯೋಜನೆಯ ಬೇಡಿಕೆ ಶೇ 30ರಷ್ಟು ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ಮನರೇಗಾ ಅನುದಾನ ಶೇ 4ರಷ್ಟು ಮಾತ್ರ ಬಾಕಿ ಉಳಿದಿದೆ. ಈ ವಿಷಯದಲ್ಲಿ ಕ್ರಮ ಕೈಗೊಳ್ಳುವುದು ಬಿಟ್ಟು ಪ್ರಧಾನಿ ಮೋದಿ ಅವರು ಚುನಾವಣಾ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಶಾಪ ಹಾಕುತ್ತಿದ್ದಾರೆ. ತಮ್ಮ ಭಾಷಣದ ಮೂಲಕ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘2023ರ ಬಜೆಟ್‌ನಲ್ಲಿ ಮೋದಿ ಸರ್ಕಾರವು ಮನರೇಗಾ ಯೋಜನೆಗೆ ಮೀಸಲಿಟ್ಟ ಅನುದಾನದ ಪೈಕಿ ಶೇ 33ರಷ್ಟನ್ನು ಕಡಿತ ಮಾಡಿದೆ ಎನ್ನುವುದು ಈ ದೇಶದ ಜನರಿಗೆ ನೆನಪಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT